ADVERTISEMENT

ದಸರಾ ಮಹೋತ್ಸವಕ್ಕೆ ದಿನಗಣನೆ: ‘ಕುಶಾಲತೋಪು’ ಫಿರಂಗಿಗಳಿಗೆ ಪೂಜೆ ಸಲ್ಲಿಕೆ

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಭಾಗಿ; ಅರ್ಚಕ ಪ್ರಹ್ಲಾದರಾವ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:04 IST
Last Updated 12 ಸೆಪ್ಟೆಂಬರ್ 2024, 16:04 IST
ಮೈಸೂರು ಅರಮನೆಯಲ್ಲಿ ಗುರುವಾರ ಫಿರಂಗಿ ಗಾಡಿಗಳಿಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ ಪೂಜೆ ನೆರವೇರಿಸಿದರು. ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಎಸಿಪಿ ಸತೀಶ್‌ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ (ಎಡಚಿತ್ರ). ಮರದ ಅಂಬಾರಿ ಕಟ್ಟಲು ಬಳಸುವ ಸೆಣಬಿನ ಹಗ್ಗವನ್ನು ಮಾವುತರು ಹಾಗೂ ಕಾವಾಡಿಗರು ಹೊಸೆದರು
ಮೈಸೂರು ಅರಮನೆಯಲ್ಲಿ ಗುರುವಾರ ಫಿರಂಗಿ ಗಾಡಿಗಳಿಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ ಪೂಜೆ ನೆರವೇರಿಸಿದರು. ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಎಸಿಪಿ ಸತೀಶ್‌ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ (ಎಡಚಿತ್ರ). ಮರದ ಅಂಬಾರಿ ಕಟ್ಟಲು ಬಳಸುವ ಸೆಣಬಿನ ಹಗ್ಗವನ್ನು ಮಾವುತರು ಹಾಗೂ ಕಾವಾಡಿಗರು ಹೊಸೆದರು   

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ ವಾಗಿದ್ದು, ಅರಮನೆ ಆವರಣದಲ್ಲಿ ಗುರುವಾರ ‘ಕುಶಾಲತೋಪು’ ಸಿಡಿಸುವ ಫಿರಂಗಿ ಗಾಡಿಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು.

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು. ಡಿಸಿಪಿಗಳಾದ ಎಂ.ಮುತ್ತುರಾಜ್‌, ಜಾಹ್ನವಿ, ಎಸಿಪಿ ಸತೀಶ್‌ ಪಾಲ್ಗೊಂಡಿದ್ದರು.

ಅರಮನೆ ಅರ್ಚಕ ಪ್ರಹ್ಲಾದರಾವ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮೊದಲಿಗೆ ಕುಶಾಲ ತೋಪು ಸಿಡಿಸುವಾಗ ಯಾವುದೇ ಅವಘಡವಾಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಯಿತು.

ADVERTISEMENT

ನಂತರ ಚಾಮುಂಡೇಶ್ವರಿ ದೇವತೆ ಸ್ಮರಿಸಲಾಯಿತು. ಮೃತ್ಯುಂಜಯ ಪೂಜೆ ಸಲ್ಲಿಸಿ 9 ಬಾರಿ ಮಂತ್ರಗಳನ್ನು ಆಯುಕ್ತರಿಂದ ಹೇಳಿಸಿ ಮಂಗಳಾರತಿ ಮಾಡಿಸಲಾಯಿತು.

ಜಂಬೂಸವಾರಿ ದಿನದಂದು ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವಾಗ 21 ಕುಶಾಲ ತೋಪು ಸಿಡಿಸುವುದು ಸಂಪ್ರದಾಯ. ಅದಕ್ಕಾಗಿ ಪೂರ್ವಭಾವಿಯಾಗಿ ಆನೆಗಳು ಹಾಗೂ ಕುದುರೆಗಳು ಶಬ್ಧಕ್ಕೆ ಬೆಚ್ಚದಂತೆ ಮಾಡಲು ಪೂರ್ವಾಭ್ಯಾಸ ನೀಡಲಾಗುತ್ತದೆ.

ಕುಶಾಲತೋಪು ತಾಲೀಮು ಕೆಲವೇ ದಿನಗಳಿರುವುದರಿಂದ 11 ಫಿರಂಗಿ ಗಳನ್ನು ಬುಧವಾರ ಸ್ವಚ್ಛಗೊಳಿಸಿದ ಪೊಲೀಸ್‌ ಸಿಬ್ಬಂದಿ ಪೂಜೆಗೆ ಅಣಿಗೊಳಿಸಿದ್ದರು.

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌, ‘ಜಂಬೂಸವಾರಿ ಮೆರವಣಿಗೆ ದಿನದಂದು ಅರಮನೆ  ಹಾಗೂ ಪಂಜಿನ ಕವಾಯತು ಮೈದಾನದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಸಿಬ್ಬಂದಿಯು ಅದಕ್ಕಾಗಿ ಅಭ್ಯಾಸ ನಡೆಸಲು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ’ ಎಂದರು. 

‘ಸೆ.13ರಿಂದ ಅಣಕು ಅಭ್ಯಾಸ (ಒಣತಾಲೀಮ್) ನಡೆಯಲಿದೆ. ನಗರ ಸಶಸ್ತ್ರ ಮೀಸಲು ಪಡೆಯ 35ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಲಿದ್ದಾರೆ’ ಎಂದರು. 

ಮರದ ಅಂಬಾರಿ ಕಟ್ಟಲು ಬಳಸುವ ಸೆಣಬಿನ ಹಗ್ಗವನ್ನು ಮಾವುತರು ಹಾಗೂ ಕಾವಾಡಿಗರು ಹೊಸೆದರು

ಮರದ ಅಂಬಾರಿ ಕಟ್ಟಲು ಹಗ್ಗ ಹೊಸೆದ ಮಾವುತರು

ಸೆ.15ರ ನಂತರ ಗಜಪಡೆಗೆ ‘ಮರದ ಅಂಬಾರಿ ಹೊರಿಸುವ ತಾಲೀಮು’ ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಹೀಗಾಗಿ ಮಾವುತರು ಹಾಗೂ ಕಾವಾಡಿಗರು ಅಂಬಾರಿ ಕಟ್ಟುವ ಹಗ್ಗವನ್ನು ಹೊಸೆದು ಸಿದ್ಧಮಾಡಿಟ್ಟುಕೊಂಡಿದ್ದಾರೆ. ಗಜ‍ಪಡೆಯು ನಿತ್ಯ ನಡಿಗೆ ಹಾಗೂ ಭಾರ ಹೊರುವ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದು ಕ್ಯಾಪ್ಟನ್‌ ಅಭಿಮನ್ಯು ಜೊತೆಗೆ ಭವಿಷ್ಯದಲ್ಲಿ ಅಂಬಾರಿ ಹೊರುವ ಆನೆಗಳಿಗೂ ಮರದ ಅಂಬಾರಿ ತಾಲೀಮು ನೀಡಲಾಗುತ್ತದೆ. ಕಳೆದ ವರ್ಷ ‘ಧನಂಜಯ’ ‘ಮಹೇಂದ್ರ’ ‘ಗೋಪಿ’ ಹಾಗೂ ‘ಭೀಮ’ನಿಗೆ ಮರದ ಅಂಬಾರಿ ಹೊರಿಸಲಾಗಿತ್ತು. ಈ ಬಾರಿಯೂ ಇವುಗಳೊಂದಿಗೆ ‘ಏಕಲವ್ಯ’ನಿಗೂ ತಾಲೀಮು ನೀಡಲು ಅಧಿಕಾರಿಗಳು ಚಿಂತಿಸಿದ್ದಾರೆ. ಸೆಣಬಿನ ಹಗ್ಗ: ಮರದ ಅಂಬಾರಿ ಕಟ್ಟಲು ಸಾಮಾನ್ಯವಾಗಿ ಸೆಣಬಿನ ಹಗ್ಗವನ್ನೇ ಬಳಸಲಾಗುತ್ತದೆ. ಬಲವಾಗಿರುವುದಲ್ಲದೇ ಮೃದುವಾಗಿಯೂ ಇರುತ್ತದೆ. ಆನೆಗಳಿಗೆ ಹಗ್ಗ ಬಿಗಿದಾಗ ಮೈ ಕೊರೆದು ಗಾಯವಾಗುವುದಿಲ್ಲ. ಸೆಣಬನಿಂದ ಮಾವುತರು ಹಾಗೂ ಕಾವಾಡಿಗಳು ಹಗ್ಗವನ್ನು ಹೊಸೆದರು. ಅವುಗಳ ಉದ್ಧ 8ರಿಂದ 10 ಮೀಟರ್‌ ಉದ್ದದ ಹಗ್ಗಗಳನ್ನು ತಯಾರಿಸಿದರು. ಹೆಚ್ಚುವರಿ ಹಗ್ಗ: ಬೆಂಗಳೂರಿನ ಬನ್ನೇರುಘಟ್ಟ ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೂ ಹಗ್ಗ ಹೊಸೆಯುವ ತಯಾರಿ ನಡೆಸಲಾಗಿದೆ. ಗಟ್ಟಿಮುಟ್ಟಾಗಿರುವ ಸೆಣಬಿನ ಹಗ್ಗವನ್ನು ಕಾಡಾನೆಗಳ ಕಾಲಿಗೆ ಕಟ್ಟಲಾಗುತ್ತದೆ. ಒಂದು ವರ್ಷ ಆನೆಗಳನ್ನು ಕ್ರಾಲ್‌ನಲ್ಲಿ ಇಡಬೇಕೆಂದರೆ ದೀರ್ಘ ಬಾಳಿಕೆಯ ಹಗ್ಗ ಬೇಕಾಗುತ್ತದೆ. ಹೆಚ್ಚುವರಿ ಸೆಣಬಿನ ಹಗ್ಗಗಳನ್ನು ತಯಾರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.