ಮೈಸೂರು: ‘ನಾಡಹಬ್ಬ ದಸರಾ ಮಹೋತ್ಸವದ ವಿಜಯದಶಮಿಯಂದು ಜಂಬೂಸವಾರಿ ವೀಕ್ಷಣೆಗೆ ಕಲ್ಪಿಸುವ ಆಸನಗಳ ವ್ಯವಸ್ಥೆಯನ್ನು 59 ಸಾವಿರದಿಂದ 48ಸಾವಿರಕ್ಕೆ ಇಳಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಅರಮನೆ ಮಂಡಳಿ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಗದಿಯಷ್ಟೇ ಆಸನಗಳಿಗೆ ಪಾಸ್‌ಗಳನ್ನು ಕಟ್ಟುನಿಟ್ಟಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ತೊಂದರೆ ಆಗದಂತೆ, ದಸರೆ ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ’ ಎಂದರು.
‘ಜಂಬೂಸವಾರಿ ಮೆರವಣಿಗೆ ಸುತ್ತಮುತ್ತ ಅನಗತ್ಯ ಓಡಾಡುವಂತಿಲ್ಲ. ಉಪ ಸಮಿತಿಗಳ ಸದಸ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿಂದಲೇ ನೋಡಬೇಕು. ಸ್ತಬ್ಧಚಿತ್ರ ಉಪ ಸಮಿತಿ ಅವರು ಮೆರವಣಿಗೆಯಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
‘ಸೆ.22ರಂದು ಲೇಖಕಿ ಬಾನು ಮುಷ್ತಾಕ್ ಅವರಿಂದ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ವಿದ್ಯುಕ್ತ ಉದ್ಘಾಟನೆ ಆಗಲಿದ್ದು, ಅದೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರಿಂದ ದಸರಾ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ನಾಡಕುಸ್ತಿ, ಪುಸ್ತಕ ಮೇಳ, ಆಹಾರ ಮೇಳ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಚಾಲನೆ ಸಿಗಲಿದೆ’ ಎಂದು ತಿಳಿಸಿದರು.
‘ಅ.2ರ ವಿಜಯದಶಮಿಯಂದು ಮಧ್ಯಾಹ್ನ 1.10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜ ಪೂಜೆ ಮಾಡಲಿದ್ದು, ಸಂಜೆ 4.30ಕ್ಕೆ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವರು’ ಎಂದರು.
ಉತ್ತಮ ಪ್ರತಿಕ್ರಿಯೆ:
‘ಸೆ.10ರಂದು ಯುವಸಂಭ್ರಮ ಆರಂಭವಾಗಿದ್ದು, ರಾಜ್ಯದ 480ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ನಾಡಿನ ಸಾಂಸ್ಕೃತಿಕ, ಪ್ರಕೃತಿಯ, ಪರಂಪರೆಯ ವೈಭವವನ್ನು ಅನಾವರಣಗೊಳಿಸುತ್ತಿದ್ದಾರೆ. 15ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಸೆ.13ರಿಂದ ನಟಿ ಬಿ.ಸರೋಜಾದೇವಿ ನೆನಪಿನಲ್ಲಿ ದಸರಾ ಚಲನಚಿತ್ರೋತ್ಸವ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಮಹದೇವಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.