ADVERTISEMENT

Mysuru Dasara: ನಾಡಹಬ್ಬದಲ್ಲಿ ಈ ಬಾರಿಯೂ ಅಧಿಕಾರಿಗಳದ್ದೇ ‘ದರ್ಬಾರ್‌’

ಅಧಿಕಾರೇತರರ ನೇಮಕಕ್ಕಿಲ್ಲ ಆದ್ಯತೆ!

ಎಂ.ಮಹೇಶ
Published 19 ಸೆಪ್ಟೆಂಬರ್ 2024, 4:40 IST
Last Updated 19 ಸೆಪ್ಟೆಂಬರ್ 2024, 4:40 IST
Dasara-logo
Dasara-logo   
ಮೈಸೂರಿನಲ್ಲಿ ಅ.3ರಿಂದ ಆರಂಭಗೊಳ್ಳಲಿರುವ ‘ನಾಡಹಬ್ಬ ಮೈಸೂರು ದಸರಾ’ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಬೇಕಾದ ಈ ‘ಅದ್ದೂರಿ’ ಉತ್ಸವಕ್ಕೆ ನಡೆದಿರುವ ತಯಾರಿಗಳು ಇನ್ನೂ ಅಂತಿಮ ರೂಪವನ್ನು ಪಡೆದುಕೊಂಡೇ ಇಲ್ಲ. ಸಿದ್ಧತೆಯನ್ನು ಚುರುಕುಗೊಳಿಸುವಲ್ಲಿ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಗಮನಹರಿಸಿಲ್ಲ. ಉಪ ಸಮಿತಿಗಳನ್ನು ರಚಿಸಲಾಗಿದೆಯಾದರೂ ಬಹುತೇಕ ಕಾರ್ಯಕ್ರಮಗಳು ಇನ್ನೂ ಅಂತಿಮಗೊಂಡಿಲ್ಲ. ‘ಚರ್ಚೆ ಅಥವಾ ಚಿಂತನೆಯ ಹಂತದಲ್ಲಿವೆ’ ಎಂಬ ಉತ್ತರವೇ ಅಧಿಕಾರಿಗಳಿಂದ ಬರುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಸರಣಿ ಆರಂಭಿಸಿದೆ.

ಮೈಸೂರು: ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಈ ಬಾರಿಯೂ ಅಧಿಕಾರಿಗಳದ್ದೇ ‘ದರ್ಬಾರ್‌’ ನಡೆಯುತ್ತಿದೆ. ಉಪ ಸಮಿತಿಗಳಿಗೆ ಅಧಿಕಾರೇತರರ ನೇಮಕ, ಭಾಗಿದಾರರು ಅಥವಾ ಸಾರ್ವಜನಿಕರ ಸಲಹೆಗಳನ್ನು ಆಲಿಸಿ ಸಹಭಾಗಿತ್ವ ಪಡೆದುಕೊಳ್ಳುವ ಕಾರ್ಯ ಈವರೆಗೂ ನಡೆದಿಲ್ಲ.

ಮಹೋತ್ಸವಕ್ಕೆ ಅ.3ರಂದು ಚಾಲನೆ ದೊರೆಯಲಿದ್ದು, ಬಹಳ ದಿನಗಳೇನೂ ಉಳಿದಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ಕಾರ್ಯಕ್ರಮಗಳ ರೂಪರೇಷೆಯ ಸ್ಪಷ್ಟ ಚಿತ್ರಣ ದೊರೆಯಬೇಕು. ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಡೆಯುವ ಉತ್ಸವವನ್ನು ರೂಪಿಸುವಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಮಿತಿಗಳನ್ನು ರಚಿಸಲಾಗಿಲ್ಲ.

ಉಪ ಸಮಿತಿಗಳಿಗೆ ಉಪ‌ ವಿಶೇಷಾಧಿಕಾರಿ,‌ ಕಾರ್ಯಾಧ್ಯಕ್ಷರು ಹಾಗೂ‌ ಕಾರ್ಯದರ್ಶಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ  ಡಾ.ಎಚ್‌.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಚಿಸಲಾಗಿದೆ. ಅವುಗಳಿಗೆ ಅಧಿಕಾರೇತರರನ್ನು ತ್ವರಿತವಾಗಿ ನೇಮಿಸಬೇಕು, ಆ ಮೂಲಕ ಅಧಿಕಾರಿಗಳ ದರ್ಬಾರ್‌ಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಜನಪ್ರತಿನಿಧಿಗಳಿಂದ ಕೇಳಿಬಂದಿತ್ತು. ಆದರೆ, ಈ ಬಾರಿಯೂ ನೇಮಕಾತಿಯಲ್ಲಿ  ವಿಳಂಬ ಆಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಆಕಾಂಕ್ಷಿಗಳಾಗಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ADVERTISEMENT

ಯಾವ್ಯಾವ ಸಮಿತಿಗಳು?:

ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ, ಮೆರವಣಿಗೆ ಮತ್ತು ಪಂಜಿನ ಕವಾಯತು, ಸ್ತಬ್ಧಚಿತ್ರ, ರೈತ (ಗ್ರಾಮೀಣ  ದಸರಾ), ಕ್ರೀಡೆ, ಸಾಂಸ್ಕೃತಿಕ, ಲಲಿತಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ, ಯುವ ದಸರಾ, ಮಹಿಳಾ, ಮಕ್ಕಳ ದಸರಾ, ಆಹಾರ ಮೇಳ, ಸ್ವಚ್ಛತೆ ಮತ್ತು ವ್ಯವಸ್ಥೆ, ಚಲನಚಿತ್ರ, ಕುಸ್ತಿ ಉಪ ಸಮಿತಿಗಳನ್ನು ರಚಿಸಲಾಗಿದೆ. ಅವುಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಹೋದ ವರ್ಷ ತೀವ್ರ ಬರಗಾಲದ ಕಾರಣದಿಂದಾಗಿ, ಉತ್ಸವವನ್ನು ‘ಸಾಂಪ್ರದಾಯಿಕ ಹಾಗೂ ವೈಭವಕ್ಕೆ ಕಡಿಮೆ ಇಲ್ಲದಂತೆ’ ಆಚರಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ಯಾವುದೂ ಕಡಿಮೆ ಇಲ್ಲದಂತೆ ಎಲ್ಲವನ್ನೂ ನಡೆಸಿತು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದಾಗಿ, ದಸರೆಯನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಸರ್ಕಾರ ಹೇಳಿರುವುದರಿಂದಾಗಿ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರಾಗಲು (ಅಧಿಕಾರೇತರ) ಬಹಳ ಬೇಡಿಕೆ ಬಂದಿದೆ. ಅದರಲ್ಲೂ, ಆಡಳಿತಾರೂಢ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚಿನ ಲಾಬಿ ನಡೆಸುತ್ತಿದ್ದಾರೆ. ಪಕ್ಷದ ಹಂತದಲ್ಲೂ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. 

ಹೋದ ವರ್ಷ ಉಪ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು, ಕಾರ್ಯಕ್ರಮಗಳ ಪಟ್ಟಿ ತಯಾರಾದ ನಂತರ ಹಾಗೂ ಉದ್ಘಾಟನೆಯ ಹಿಂದಿನ ದಿನವಷ್ಟೇ ನೇಮಕ ಮಾಡಲಾಗಿತ್ತು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಲಾಗಿತ್ತು. ಸಮಿತಿಗಳಿಗೆ ಕನಿಷ್ಠ 30ರಿಂದ ಗರಿಷ್ಠ 60 ಮಂದಿ ಸದಸ್ಯರನ್ನು ನೇಮಿಸಲಾಗಿತ್ತು. ಯುವ ದಸರಾ ಸಮಿತಿಯಲ್ಲಿ ಅತಿ ಹೆಚ್ಚು ಅಂದರೆ 60 ಸದಸ್ಯರಿದ್ದರು. 

‘ಕಾರ್ಯಕ್ರಮಗಳನ್ನು ರೂಪಿಸುವ ಮುನ್ನವೇ ನೇಮಕ ಪ್ರಕ್ರಿಯೆ ನಡೆದರೆ ಜನರ ಅಭಿ‍ಪ್ರಾಯಗಳನ್ನು ಮಂಡಿಸುವುದಕ್ಕೆ ನಮಗೆ ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಎಂದು ಹೆಸರಿಗಷ್ಟೆ ಹೇಳಿಕೊಳ್ಳಬೇಕಾದ ಸ್ಥಿತಿ ಬರುತ್ತದೆ. ನಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಇರುವುದಿಲ್ಲ. ಈ ಬಾರಿಯಾದರೂ ಸಮಿತಿಗಳಿಗೆ ಅಧಿಕಾರೇತರರನ್ನು ತ್ವರಿತವಾಗಿ ನಿಯೋಜಿಸಬೇಕು’ ಎಂಬ ಒತ್ತಾಯ ಕೇಳಿಬಂದಿದೆ.

ಜಿ.ಲಕ್ಷ್ಮೀಕಾಂತ ರೆಡ್ಡಿ
ದಸರಾ ಮಹೋತ್ಸವದ ಉಪ ಸಮಿತಿಗಳಿಗೆ ಅಧಿಕಾರೇತರರ ನೇಮಕದ ಬಗ್ಗೆ ಈವರೆಗೂ ಯಾವುದೇ ತೀರ್ಮಾನವಾಗಿಲ್ಲ
ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ಚುಕ್ಕಾಣಿ ಹಿಡಿದಿರುವವರು ‘ಹೊಸಬರು’
-ಈ ಬಾರಿ ದಸರಾ ಮಹೋತ್ಸವ ರೂಪಿಸುವಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಲ್ಲಿ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳಾ ಅಧಿಕಾರಿಗಳೇ ಹಲವು ಪ್ರಮುಖ ಹುದ್ದೆಗಳಲ್ಲಿರುವುದು ಈ ಸಲದ ವಿಶೇಷವಾಗಿದೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ದಸರಾ ವಿಶೇಷಾಧಿಕಾರಿಯಾಗಿ ಇದು ಮೊದಲನೇ ದಸರಾ. ಹಿಂದೆ ಅವರು ಮಹಾನಗರಪಾಲಿಕೆ ಆಯುಕ್ತರಾಗಿದ್ದರಾದರು. ಈಗ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ವದ ಹೊಣೆ ಹೊತ್ತಿರುವ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ ಅವರಿಗೂ ಇದು ಹೊಸ ಅನುಭವ. ಹೋದ ವರ್ಷ ಅವರು ಎಸ್ಪಿಯಾಗಿದ್ದರು. ಈ ಬಾರಿ ಮೆರವಣಿಗೆ ಪಂಜಿನ ಕವಾಯತು ಉಪ ಸಮಿತಿಯ ಉಪ ವಿಶೇಷಾಧಿಕಾರಿಯೂ ಹೌದು. ಎಸ್ಪಿ ಎನ್.ವಿಷ್ಣುವರ್ಧನ್‌ (ಯುವ ಸಂಭ್ರಮ ಯುವ ದಸರಾ) ಮುಡಾ ಆಯುಕ್ತ ಎ.ಎನ್. ರಘುನಂದನ್ (ಆಹಾರ ಮೇಳ) ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ (ವಿದ್ಯುತ್‌ ದೀಪಾಲಂಕಾರ) ಎಟಿಐ ಜಂಟಿ ನಿರ್ದೇಶಕಿ ಪ್ರಿಯದರ್ಶಿನಿ ಕೆ. (ಮಹಿಳಾ ಮಕ್ಕಳ ದಸರಾ) ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ವಿ.ಕೆ. (ಕ್ರೀಡಾ ದಸರಾ) ಮೊದಲಾದವರಿಗೆ ಹೊಸ ‘ಜವಾಬ್ದಾರಿ’ಯ ಅನುಭವವಾಗಿದೆ.

‘ವನಿತಾ’ ದಸರಾ!

ನಗರ ‍ಪೊಲೀಸ್ ಆಯುಕ್ತರಾದ ಐಪಿಎಸ್‌ ಅಧಿಕಾರಿ ಸೀಮಾ ಲಾಟ್ಕರ್ ಗಜಪಡೆಯ ಉಸ್ತುವಾರಿ ಹೊತ್ತಿರುವ ಐಎಫ್‌ಎಸ್ ಅಧಿಕಾರಿಗಳಾದ ಪಿ.ಎ.ಸೀಮಾ ಮಾಲತಿ ಪ್ರಿಯಾ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಐಎಎಸ್ ಅಧಿಕಾರಿ ಕೆ.ಎಂ.ಗಾಯಿತ್ರಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಎಂ.ಜೆ. ರೂಪಾ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಡಿಸಿಪಿ ಜಾಹ್ನವಿ ಸೆಸ್ಕ್‌ ನಿರ್ದೇಶಕಿ ಜಿ.ಶೀಲಾ ಎಟಿಐ ಜಂಟಿ ನಿರ್ದೇಶಕಿ ಪ್ರಿಯದರ್ಶಿನಿ ಕೆ. ಪಾಲಿಕೆ ಎಸ್‌ಇ ಸಿಂಧು ಆಯುಷ್ ಅಧಿಕಾರಿ ಪುಷ್ಪಾ ಕುವೆಂಪು ಕನ್ನಡ ಅಧ್ಯಯನ  ಸಂಸ್ಥೆಯ ನಿರ್ದೇಶಕಿ ಎನ್.ಕೆ. ಲೋಲಾಕ್ಷಿ (ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷೆ) ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಪ್ರಭಾ ಬಿ.ಎಸ್. (ಮಹಿಳಾಮಕ್ಕಳ ದಸರ ಉಪ ವಿಶೇಷಾಧಿಕಾರಿ) ಉತ್ಸವದ ಪ್ರಮುಖ ಹೊಣೆ ಹೊತ್ತಿರುವ ಮಹಿಳೆಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.