ADVERTISEMENT

ಮೈಸೂರು ದಸರಾ: ನಾಡ ಕುಸ್ತಿಯಲ್ಲಿ 250 ಜೋಡಿ ಸೆಣಸಾಟ

ಸೆ. 22ರಿಂದ 28ರವರೆಗೆ ದೊಡ್ಡಕೆರೆ ಮೈದಾನದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:21 IST
Last Updated 15 ಸೆಪ್ಟೆಂಬರ್ 2025, 5:21 IST
<div class="paragraphs"><p>ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಾಡಕುಸ್ತಿಯಲ್ಲಿ ಪಾಲ್ಗೊಳ್ಳುವ ಜೋಡಿಗಳಿಗೆ ಜೊತೆ ಕಟ್ಟುವ ಕಾರ್ಯಕ್ಕೆ ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎಲ್‌. ನಾಗೇಶ್‌, ಕಾರ್ಯಾಧ್ಯಕ್ಷ ಎಚ್‌.ಸಿ. ನಾಗೇಂದ್ರಪ್ಪ ಚಾಲನೆ ನೀಡಿದರು. ಜಿ.ಎಸ್‌. ರಘು, ನವೀನ್‌ ಚಂದ್ರ, ಬಸವರಾಜು, ಕೆ. ವಿಶ್ವನಾಥ್‌ ಜೊತೆಗಿದ್ದರು  </p></div>

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಾಡಕುಸ್ತಿಯಲ್ಲಿ ಪಾಲ್ಗೊಳ್ಳುವ ಜೋಡಿಗಳಿಗೆ ಜೊತೆ ಕಟ್ಟುವ ಕಾರ್ಯಕ್ಕೆ ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎಲ್‌. ನಾಗೇಶ್‌, ಕಾರ್ಯಾಧ್ಯಕ್ಷ ಎಚ್‌.ಸಿ. ನಾಗೇಂದ್ರಪ್ಪ ಚಾಲನೆ ನೀಡಿದರು. ಜಿ.ಎಸ್‌. ರಘು, ನವೀನ್‌ ಚಂದ್ರ, ಬಸವರಾಜು, ಕೆ. ವಿಶ್ವನಾಥ್‌ ಜೊತೆಗಿದ್ದರು

   

ಪ್ರಜಾವಾಣಿ ಚಿತ್ರ

ಮೈಸೂರು: ನಾಡಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದಸರಾ ಕುಸ್ತಿಯು ಈ ಬಾರಿ ಸೆ.22ರಿಂದ 28ರವರೆಗೆ ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 4ರಿಂದ ನಾಡಕುಸ್ತಿ ಹಣಾಹಣಿ ನಡೆಯಲಿದ್ದು, ಒಟ್ಟು 250 ಜೋಡಿಗಳು ಸೆಣಸಲಿವೆ.

ADVERTISEMENT

ನಾಡಕುಸ್ತಿಯಲ್ಲಿ ಪಾಲ್ಗೊಳ್ಳುವ ಜೋಡಿಗಳಿಗೆ ಜೊತೆ ಕಟ್ಟುವ ಕಾರ್ಯ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ರಾಜ್ಯ– ಹೊರ ರಾಜ್ಯಗಳಿಂದಲೂ ಪೈಲ್ವಾನರು ಕುಸ್ತಿ ಟೂರ್ನಿಯಲ್ಲಿ ಸೆಣೆಸುವ ಆಸೆ ಹೊತ್ತು ಬಂದಿದ್ದರು. ಇವರಲ್ಲಿ ಅರ್ಹ ಕ್ರೀಡಾಪಟುಗಳನ್ನು ಗುರುತಿಸಿ ಕುಸ್ತಿಗೆ ಅವಕಾಶ ನೀಡಲಾಯಿತು.

ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎಲ್‌. ನಾಗೇಶ್‌, ಕಾರ್ಯಾಧ್ಯಕ್ಷ ಎಚ್‌.ಸಿ. ನಾಗೇಂದ್ರಪ್ಪ ಮತ್ತಿತರರು ಕುಸ್ತಿ ಪಟುಗಳ ಬೆನ್ನು ತಟ್ಟುವ ಮೂಲಕ ಜೊತೆ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿದರು. ಇದೇ ವೇಳೆ ನಾಡ ಕುಸ್ತಿ, ಪಾಯಿಂಟ್‌ ಕುಸ್ತಿ, ಪಂಜಕುಸ್ತಿ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಯಿತು.

ಉಪಸಮಿತಿ ಕಾರ್ಯದರ್ಶಿ ಜಿ.ಎಸ್‌. ರಘು, ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ಅಧ್ಯಕ್ಷ ನವೀನ್‌ ಚಂದ್ರ, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕೆ. ವಿಶ್ವನಾಥ್‌, ಖಜಾಂಚಿ ದಯಾನಂದ ಕದಂಬ, ಸಂಯೋಜಕ ಎಂ. ರಾಜು, ಮೊಹಮ್ಮದ್‌ ನಾಸಿರ್‌, ಪೈಲ್ವಾನ್‌ಗಳಾದ ಚಂದ್ರಶೇಖರ್‌, ಶ್ರೀನಿವಾಸ್‌ಗೌಡ ಈ ಸಂದರ್ಭ ಇದ್ದರು.

ವಿವಿಧ ಕಪ್‌:

ನಾಡ ಕುಸ್ತಿಯಲ್ಲಿ ಪಾಲ್ಗೊಳ್ಳುವ ಕುಸ್ತಿಪಟುಗಳಿಗೆ ದಸರಾ ಕುಸ್ತಿ ಉಪಸಮಿತಿ ವತಿಯಿಂದ ಸಾಹುಕಾರ್‌ ಚೆನ್ನಯ್ಯ ಕಪ್‌, ಮೈಸೂರು ಮಹಾರಾಜ ಒಡೆಯರ್‌ ಕಪ್‌, ಮೈಸೂರು ಮೇಯರ್‌ ಕಪ್‌ ಮತ್ತು ಕಿತ್ತೂರು ರಾಣಿ ಚನ್ನಮ್ಮ ಕಪ್‌ ನೀಡಲಾಗುವುದು.

ಸೆ. 24ರಿಂದ 28ರ ವರೆಗೆ ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕಿಶೋರ, ದಸರಾ ಕಿಶೋರಿ ಮತ್ತು ದಸರಾ ಕುಮಾರ, ಮೈಸೂರು ದಸರಾ ಬಾಲ ಕಿಶೋರ, ಮೈಸೂರು ದಸರಾ ಬಾಲ ಕುಮಾರ, ಮೈಸೂರು ದಸರಾ ಬಾಲ ಕೇಸರಿ, ಮೈಸೂರು ದಸರಾ ಬಾಲ ಕಂಠೀರವ, ಹಾಗೂ ಮೈಸೂರು ದಸರಾ ಬಾಲ ಕಿಶೋರಿ ಪ್ರಶಸ್ತಿಗಳಿಗಾಗಿ ಪಂದ್ಯಗಳು ನಡೆಯಲಿದೆ.

ಈ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಹಾಗೂ 15 ಹಾಗೂ 17 ವರ್ಷದೊಳಗಿನ ಕುಸ್ತಿಪಟುಗಳಿಗೆ ಸೆ. 23 ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ದೇಹತೂಕ ಪರೀಕ್ಷೆ ನಡೆಯಲಿದೆ.

ಪಂಜ ಕುಸ್ತಿ 27ರಂದು

‘ಸೆ. 27 ರಂದು ಬೆಳಿಗ್ಗೆ 8ಕ್ಕೆ ಪಂಜಕುಸ್ತಿ ನಡೆಯಲಿದೆ. ಇದೇ ವೇಳೆ 10ನೇ ರಾಜ್ಯಮಟ್ಟದ ಹಾಗೂ 7ನೇ ಅಂಗವಿಕಲರ ಪಂಜಕುಸ್ತಿ ಟೂರ್ನಿ ನಡೆಯಲಿದೆ. ವಿಜೇತರಿಗೆ ದಸರಾ ಶ್ರೀ ದಸರಾ ಕುಮಾರಿ ದಸರಾ ವಿಶೇಷ ಚೇತನ ದಸರಾ ನವಚೇತನ ತಾರೆ ಪ್ರಶಸ್ತಿ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ತಿಳಿಸಿದರು. ‘ಪುರುಷರಲ್ಲಿ ಒಟ್ಟು 11 ವಿಭಾಗದಲ್ಲಿ ಪಂಜ ಕುಸ್ತಿ ನಡೆಯಲಿದೆ. ಅತ್ಯುತ್ತಮ ಪಂಜ ಕುಸ್ತಿ ಪಟುವಿಗೆ ಮೈಸೂರು ದಸರಾಶ್ರೀ ಕಪ್‌ 2025ರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಹಿಳೆಯರಿಗೆ 7 ವಿಭಾಗದಲ್ಲಿ ನಡೆಯಲಿದೆ. ಅತ್ಯುತ್ತಮ ಮಹಿಳಾ ಪಟುವಿಗೆ ಮೈಸೂರು ದಸರಾ ಕುಮಾರಿ ಪ್ರಶಸ್ತಿ ನೀಡಲಾಗುತ್ತದೆ’ ಎಂದು ಸಂಘದ ಕಾರ್ಯದರ್ಶಿ ಕೆ. ವಿಶ್ವನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.