ADVERTISEMENT

ನೀತಿಸಂಹಿತೆ ಅನುಷ್ಠಾನಕ್ಕೆ ಸಹಕಾರ ನೀಡಿ: ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸಭೆ

ಕೇರಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಜೇಂದ್ರ ಮನವಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 13:38 IST
Last Updated 6 ಮಾರ್ಚ್ 2023, 13:38 IST
ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ವಿಧಾನಸಭೆ ಚುನಾವಣೆ ಸಂಬಂಧ ಕೇರಳದ ವಯನಾಡು ಜಿಲ್ಲೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು
ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ವಿಧಾನಸಭೆ ಚುನಾವಣೆ ಸಂಬಂಧ ಕೇರಳದ ವಯನಾಡು ಜಿಲ್ಲೆಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು   

ಮೈಸೂರು: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳೆ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಸಂಬಂಧ ಜಿಲ್ಲೆಯ ಗಡಿ ಭಾಗಗಳಿಗ ಹೊಂದಿಕೊಂಡಿರುವ ಕೇರಳದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಆನ್‌ಲೈನ್‌ನಲ್ಲಿ ಸೋಮವಾರ ಸಭೆ ನಡೆಸಿದರು.

ಕೇರಳದ ವಯನಾಡು ಜಿಲ್ಲೆಯ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆಯನ್ನು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಶಾತಿಯುತವಾಗಿ ನಡೆಸಲು ಮಾದರಿ ನೀತಿಸಂಹಿತೆ ಜಾರಿಗೆ ಸಹಕಾರ ಕೊಡಬೇಕು’ ಎಂದು ಕೋರಿದರು.

‘ಜಿಲ್ಲೆಯು ಕೇರಳ ರಾಜ್ಯದೊಂದಿಗೆ ಗಡಿ ಪ್ರದೇಶವನ್ನು ಹೊಂದಿದೆ. ಗಡಿ ಭಾಗದಲ್ಲಿ ಚೆಕ್‍ಪೋಸ್ಟ್‌ಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯಕ್ಕೆ ಬರುವ ಹಾಗೂ ಇಲ್ಲಿಂದ ಹೊರ ಹೋಗುವ ವಾಹನಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಇದಕ್ಕಾಗಿ ಕೇರಳದಲ್ಲೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

‘ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ನಿರ್ವಹಿಸಬೇಕಾಗುತ್ತದೆ. ಜಿಲ್ಲೆಯಿಂದ ನಿಯೋಜಿಸಲಾದ ನೋಡಲ್ ಅಧಿಕಾರಿಗಳೊಂದಿಗೆ ಹೊರ ಜಿಲ್ಲೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ನೇಮಕ ಮಾಡಲಾಗುವ ಹೊರ ಜಿಲ್ಲೆಗಳ ಅಧಿಕಾರಿಗಳ ಮಾಹಿತಿಯನ್ನು ಜಿಲ್ಲಾಡಳಿತ, ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ಕಚೇರಿಗೆ ಸಲ್ಲಿಸಬೇಕು’ ಎಂದರು.

‘ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು, ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ. ಮತದಾನದ ಅವಧಿಯಲ್ಲಿ ಚೆಕ್‍ಪೋಸ್ಟ್‌ಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಸಂಬಂಧ ಸಹಕಾರ ಕೊಡಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಂ, ಕೇರಳದ ವಯನಾಡು ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್, ಅಬಕಾರಿ, ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.