
ಮೈಸೂರು: ಆಶ್ರಯ ವಸತಿ ಯೋಜನೆಯಡಿ ಗುಂಪು ಮನೆಗಳನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ವಿಳಂಬ ಮಾಡಿರುವ ಪಾಲಿಕೆ ಅಧಿಕಾರಿಗಳನ್ನು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಶುಕ್ರವಾರ ನಡೆದ ಆಶ್ರಯ ವಸತಿ ಸಮಿತಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಹಂಚ್ಯಾ ಗ್ರಾಮದ ಸ.ನಂ. 65ರ 24.09 ಎಕರೆ ಜಮೀನಿನ ಪೈಕಿ 23 ಎಕರೆ ಜಮೀನನ್ನು ಕ್ಷೇತ್ರದ ಆಶ್ರಯ ವಸತಿ ಯೋಜನೆಗೆ ಕಾಯ್ದಿರಿಸಲಾಗಿದೆ. ಅಲ್ಲಿ 1,704 ಗುಂಪು ಮನೆಗಳನ್ನು ನಿರ್ಮಿಸುವ ಸಂಬಂಧ 2024ರ ಅ.28ರಂದು ನಡೆದ ಆಶ್ರಯ ವಸತಿ ಸಮಿತಿ ಸಭೆಯಲ್ಲಿ ಪರಿಷ್ಕೃತ ಡಿ.ಪಿ.ಆರ್. ಸಿದ್ದಪಡಿಸಲು ತಿಳಿಸಲಾಗಿತ್ತು. ಆದರೆ, 13 ತಿಂಗಳಾದರೂ ಕ್ರಮ ವಹಿಸದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ‘ಈ ತಿಂಗಳ ಅಂತ್ಯದೊಳಗೆ ಡಿ.ಪಿ.ಆರ್. ಪೂರ್ಣಗೊಳಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.
‘ನಿಗದಿಪಡಿಸಿರುವ ದಿನಾಂಕದೊಳಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಹಾಗೂ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ತಿಳಿಸಿದರು.
ಕೂಡಲೇ ಹಸ್ತಾಂತರಿಸಿ:
ಬಂಡೀಪಾಳ್ಯ ಸರ್ವೆ ನಂಬರ್ 7ರಲ್ಲಿ ಲಭ್ಯವಿರುವ 6 ಎಕರೆ ಸರ್ಕಾರಿ ಜಮೀನನ್ನು ಆಶ್ರಯ ವಸತಿ ಯೋಜನೆಯಡಿ ಮಂಜೂರು ಮಾಡಿ ಹಸ್ತಾಂತರಿಸಲು ವಿಳಂಬವಾಗುತ್ತಿರುವ ಬಗ್ಗೆ ತಹಶೀಲ್ದಾರ್ ಅವರನ್ನು ಸ್ಪಷ್ಟನೆ ಕೇಳಿದ ಅವರು, ವಿಳಂಬಕ್ಕೆ ಆಸ್ಪದ ನೀಡದೆ ಕೂಡಲೇ ಹಸ್ತಾಂತಕ್ಕೆ ಕ್ರಮ ವಹಿಸಬೇಕು’ ಎಂದು ತಹಶೀಲ್ದಾರ್ ಮಹೇಶ್‌ಕುಮಾರ್ ಅವರಿಗೆ ಸೂಚಿಸಿದರು.
ಹೆಬ್ಬಾಳು ಸ.ನಂ. 201 ಹಾಗೂ ಶ‍್ರೀರಾಂಪುರ ಸ.ನಂ. 181ರಲ್ಲಿ ಲಭ್ಯವಿರುವ ಜಮೀನನ್ನೂ ಅಳತೆ ಮಾಡಿಸಿ, ನಕ್ಷೆ ಹಾಗೂ ಅಗತ್ಯ ಕಂದಾಯ ದಾಖಲೆಗಳಲ್ಲಿ ಆಶ್ರಯ ವಸತಿ ಯೋಜನೆಗಾಗಿ ಕಾಯ್ದಿರಿಸಿ, ಈ ತಿಂಗಳ ಅಂತ್ಯದೊಳಗೆ ಹಸ್ತಾಂತರಿಸಬೇಕು’ ಎಂದು ನಿರ್ದೇಶನ ನೀಡಿದರು.
ಅಸಮಾಧಾನ:
ಬೋಗಾದಿ ಆಶ್ರಯ ಬಡಾವಣೆಯಲ್ಲಿ ಹಂಚಿಕೆಯಾಗಿರುವ ಮನೆ, ನಿವೇಶನವನ್ನು ಮುಡಾದಿಂದ ನ್ಯೂ ಕಾಂತರಾಜು ಅರಸು ರಸ್ತೆ ವಿಸ್ತರಣೆಗಾಗಿ 33 ಮನೆ, ನಿವೇಶನವನ್ನು ಬಳಸಿಕೊಂಡಿದ್ದು, 20 ವರ್ಷಗಳಿಂದ ಪ್ರಾಧಿಕಾರದಿಂದ ಹಂಚಿಕೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ‘ಶೀಘ್ರ ಇತ್ಯರ್ಥಪಡಿಸಲು ಅಗತ್ಯ ಕ್ರಮ ವಹಿಸಬೇಕು’ ಎಂದು ಎಂಡಿಎ ಕಾರ್ಯದರ್ಶಿಗೆ ಸೂಚಿಸಿದರು.
‘2002-2003ನೇ ಸಾಲಿನಲ್ಲಿ ಅಯ್ಯಜಯ್ಯನಹುಂಡಿ ಸ.ನಂ.17ರಲ್ಲಿ 10 ಎಕರೆ ಜಮೀನಲ್ಲಿ 264 ಮತ್ತು ಕೇರ್ಗಳ್ಳಿ ಸರ್ವೆ ನಂ. 58ರಲ್ಲಿ 5 ಎಕರೆ ಜಮೀನಲ್ಲಿ 214 ನಿವೇಶನ ರಚಿಸಿ ಒಟ್ಟು 478 ಫಲಾನುಭವಿಗಳನ್ನು ಆಯ್ಕೆ ಮಾಡಿ, ಲಾಟರಿ ಮೂಲಕ ಫಲಾನುಭವಿಗಳಿಗೆ ನಿವೇಶನಗಳ ನಂಬರ್‌ಗಳನ್ನು ನೀಡಲಾಗಿದೆ. ಈ ಜಾಗ ಕೆರೆಯ ಸ್ವರೂಪ ಆಗಿರುವುದರಿಂದ ಫಲಾನುಭವಿಗಳಿಗೆ ಹಂಚ್ಯಾ ಗ್ರಾಮದಲ್ಲಿ ನಿರ್ಮಿಸಿರುವ 1704 ಗುಂಪು ಮನೆಗಳಲ್ಲಿ ಹಂಚಿಕೆಗೆ ಕ್ರಮ ವಹಿಸಲು ಪರಿಗಣಿಸಲಾಗುವುದು’ ಎಂದರು.
‘ಶ್ರೀರಾಂಪುರ ಸ.ನಂ.181 ರ ಆಶ್ರಯ ಬಡಾವಣೆಯಲ್ಲಿ 102 ನಿರಾಶ್ರಿತರಿಗೆ ಯಾವುದೇ ವಸತಿ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡದಿರುವ ಕಾರಣ ಮೂಲ ಫಲಾನುಭವಿಗಳಿಗೆ ಅವರವರ ಮನೆಗಳನ್ನು ಮರುಹಂಚಿಕೆ ಮಾಡಲು ಸಾಧ್ಯ ಆಗದಿರುವುದರಿಂದ, ಅವರನ್ನೂ ಇದಕ್ಕೆ ಪರಿಗಣಿಸಲಾಗುವುದೆಂದು’ ತಿಳಿಸಿದರು.
Highlights - null
ದಲಿತ ಕುಟುಂಬಗಳಿಗೆ ಹಕ್ಕುಪತ್ರ: ಕ್ರಮಕ್ಕೆ ಸೂಚನೆ ಪಾಲಿಕೆಯಿಂದ ಕುಕ್ಕರಹಳ್ಳಿಯಲ್ಲಿ ನಿರ್ಮಿಸಿರುವ 13 ಮಂದಿ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ವಿಚಾರವಾಗಿ ಚರ್ಚಿಸಲಾಯಿತು. ‘1994-95ನೇ ಸಾಲಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮಶತಾಬ್ದಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದು ಆದರೆ ತಹಲ್‌ವರೆವಿಗೂ ಹಕ್ಕುಪತ್ರ ನೀಡದ ಕಾರಣ ಸ್ಥಳ ತನಿಖೆ ಮಾಡಿ ಜಾಗದ ಮಾಹಿತಿ ಪಡೆದು ಹಕ್ಕುಪತ್ರ ನೀಡಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ‘ಈ ವಿಷಯವಾಗಿ ಪಾಲಿಕೆಯಲ್ಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ ಹಾಗೂ ಹಂಚಿಕೆ ಪ್ರಕ್ರಿಯೆ ಆಶ್ರಯ ವಸತಿ ಯೋಜನೆಯಡಿ ನಡೆದಿರುವುದಿಲ್ಲವಾದ್ದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ 13 ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕರು ಆಯುಕ್ತರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.