ಮೈಸೂರು: ಮಾಧವಕೃಪಾ ಗಣೇಶೋತ್ಸವದ ಅಂಗವಾಗಿ ಕಾಮಾಕ್ಷಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಓಟಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಚಾಲನೆ ನೀಡಿದರು.
‘ಮಾದಕ ವ್ಯಸನ ಜೀವನದ ಖುಷಿಯನ್ನು ಕಸಿಯುತ್ತದೆ. ಅದಕ್ಕೆ ಪರ್ಯಾಯವಾಗಿ ಜೀವನದ ಖುಷಿ ಹೆಚ್ಚಿಸುವ ಚಟುವಟಿಕೆಯಲ್ಲಿ ತೊಡಗಿಸಿ. ನಗರದಲ್ಲೇ ಮಾದಕವಸ್ತು ತಯಾರಿಕಾ ಘಟಕ ಪತ್ತೆಯಾಗಿರುವುದು ಆತಂಕಕಾರಿ. ಡ್ರಗ್ಸ್ ಮುಕ್ತ ಮೈಸೂರು ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಅಭಿನಂದನೀಯ. ಪೊಲೀಸರೊಂದಿಗೆ ಜನರೂ ಕೈಜೋಡಿಸಿದಾಗ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದು ಯದುವೀರ್ ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಮಾದಕ ವಸ್ತು ಯುವ ಸಮೂಹವನ್ನು ಬಲಿ ಪಡೆಯುತ್ತಿದೆ. ಇದರಿಂದ ದೇಶದ ಭವಿಷ್ಯವೂ ಆತಂಕದಲ್ಲಿದೆ. ಪೋಷಕರು ತಮ್ಮ ಮಕ್ಕಳ ಚಟುವಟಿಕೆ ತಿಳಿದುಕೊಂಡು ಅವರನ್ನು ಮಾದಕ ವಸ್ತುವಿನಿಂದ ದೂರವಿರುವಂತೆ ಎಚ್ಚರವಹಿಸಬೇಕು’ ಎಂದರು.
ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಆರಂಭವಾದ 3 ಕಿ.ಮೀ ಹಾಗೂ 5 ಕಿ.ಮೀ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಮಹೇಶ್ ಶೆಣೈ, ಆಸ್ಪತ್ರೆಯ ಡಾ.ಯು.ಜಿ.ಶೆಣೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.