ADVERTISEMENT

ದೇವಾಲಯ ಅರ್ಚಕರ ಹುದ್ದೆಗೆ ನಡೆಯದ ಪರೀಕ್ಷೆ: ಸಂಸ್ಕೃತ ವಿದ್ಯಾರ್ಥಿಗಳಿಗೆ ತೊಂದರೆ

ಏಪ್ರಿಲ್‌– ಮೇ ತಿಂಗಳಿನಲ್ಲೇ ಮುಗಿಯಬೇಕಿತ್ತು, ಪತ್ರ ಬರೆದರೂ ಬಾರದ ಸ್ಪಂದನೆ

ಎಂ.ಮಹೇಶ
Published 11 ಆಗಸ್ಟ್ 2023, 7:55 IST
Last Updated 11 ಆಗಸ್ಟ್ 2023, 7:55 IST
ಮೈಸೂರಿನ ಸಂಸ್ಕೃತ ಪಾಠಶಾಲೆಯ ನೋಟ (ಸಂಗ್ರಹ ಚಿತ್ರ)
ಮೈಸೂರಿನ ಸಂಸ್ಕೃತ ಪಾಠಶಾಲೆಯ ನೋಟ (ಸಂಗ್ರಹ ಚಿತ್ರ)   

ಮೈಸೂರು: ಮುಜರಾಯಿ ದೇವಾಲಯಗಳಲ್ಲಿ ಅರ್ಚಕರ ಹುದ್ದೆಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ‘ಆಗಮ ಪ್ರವರ’ ಹಾಗೂ ‘ಆಗಮ ಪ್ರವೀಣ’ ಪರೀಕ್ಷೆಯನ್ನು ನಡೆಸಲು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯು ತಾಳಿರುವ ವಿಳಂಬ ಧೋರಣೆಯು ವಿದ್ಯಾರ್ಥಿಗಳಿಗೆ ತೊಡಕಾಗಿ ಪರಿಣಮಿಸಿದೆ.

ಇಲ್ಲಿ ಮನ್ಮಹಾರಾಜ ಸಂಸ್ಕೃತ ಮಹಾವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿಯುತ್ತಿರುವ 3ನೇ ಹಾಗೂ 5ನೇ ವರ್ಷದ ವಿದ್ಯಾರ್ಥಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯು ಪರೀಕ್ಷೆ ನಡೆಸುತ್ತದೆ. ಅದರಲ್ಲಿ ತೇರ್ಗಡೆಯಾದವರು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆ ನಡೆಯದ ಕಾರಣ ಆಕಾಂಕ್ಷಿಗಳು ತೊಂದರೆ ಅನುಭವಿಸುವಂತಾಗಿದೆ.

ಮೂಲಗಳ ಪ್ರಕಾರ, 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಪರೀಕ್ಷೆಗೆ ಕ್ರಮ ಕೈಗೊಳ್ಳುವಂತೆ ಸಂಸ್ಕೃತ ಪಾಠಶಾಲೆಗಳ ಪ್ರಾಂಶುಪಾಲರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ADVERTISEMENT

ಕಾಯುತ್ತಿದ್ದಾರೆ: ‘ಕೋವಿಡ್–19 ಸಂದರ್ಭದಲ್ಲಿ ಮೂರು ವರ್ಷ ಪರೀಕ್ಷೆ ನಡೆದಿರಲಿಲ್ಲ. 2022ರ ಜೂನ್‌ನಲ್ಲಿ ಪರೀಕ್ಷೆ ನಡೆಸಿ 2023ರ ಜೂನ್‌ನಲ್ಲಿ ಅಂಕಪಟ್ಟಿಗಳನ್ನು ಕೊಡಲಾಯಿತು. 2022–23ನೇ ಸಾಲಿನ ಪರೀಕ್ಷೆ ಏಪ್ರಿಲ್‌–ಮೇನಲ್ಲೇ ಮುಗಿಯಬೇಕಿತ್ತು. ಆದರೆ, ಆಗಸ್ಟ್‌ ಬಂದರೂ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. 3ನೇ ವರ್ಷದವರು ಹಾಗೂ 5ನೇ ವರ್ಷದವರು ಪಬ್ಲಿಕ್‌ ‍ಪರೀಕ್ಷೆಗೆ ಕಾದಿದ್ದಾರೆ’ ಎಂದು ನಗರದ ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಪಿ.ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರೀಕ್ಷಾ ಸಮಿತಿ ರಚಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಇಲ್ಲಿಯವರೆಗೂ ಕ್ರಮವಾಗಿಲ್ಲ. ಮಹಾರಾಜ ಸಂಸ್ಕೃತ ಪಾಠಶಾಲೆ, ಸುತ್ತೂರು ಮಠ, ಗಣೇಶ ಸಂಸ್ಕೃತ ಶಾಲೆ, ಪರಕಾಲಮಠ, ಮಲೆಮಹದೇಶ್ವರ ಬೆಟ್ಟದ ಸಂಸ್ಕೃತ ಪಾಠಶಾಲೆ ಮೊದಲಾದವುಗಳಿಗೆ ಮೈಸೂರಿನ ಸಂಸ್ಕೃತ ಪಾಠಶಾಲೆಯ ಕೇಂದ್ರದಲ್ಲಿ, ಆದಿಚುಂಚನಗಿರಿ ಕಾಲಭೈರವೇಶ್ವರ ಸಂಸ್ಕೃತ ಕಾಲೇಜು, ಸಿದ್ಧಗಂಗಾ ಮಠದ ಕೇಂದ್ರ, ಬಾಳೇಹೊನ್ನೂರು ಕೇಂದ್ರ, ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ದೇವಸ್ಥಾನದ ಅರ್ಚಕರ ನೇಮಕಾತಿಗೆ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗುತ್ತದೆ. ಈ ಪ್ರಮಾಣಪತ್ರ ಬೇಕಾಗುತ್ತದೆ’ ಎನ್ನುತ್ತಾರೆ ಅವರು.

ಸ್ಪಂದನೆ ಸಿಕ್ಕಿಲ್ಲ: ‘ನಮ್ಮ ಪಾಠಶಾಲೆಯೊಂದರಲ್ಲೇ 200 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗಿದೆ. ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರು ಪರೀಕ್ಷಾ ಮಂಡಳಿಯ ಕಾರ್ಯದರ್ಶಿಯೂ ಆಗಿರುತ್ತಾರೆ. ಪರೀಕ್ಷೆ ನಡೆಸಲು ನಮಗೇ ಅವಕಾಶ ಕೊಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ 2–3 ಬಾರಿ ಪತ್ರ ಬರೆದಿದ್ದೇನೆ. ಎರಡೇ ತಿಂಗಳಲ್ಲಿ ಪರೀಕ್ಷೆ, ಮೌಲ್ಯಮಾಪನ ಮುಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೇನೆ. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ’ ಎಂದು ತೋಡಿಕೊಂಡರು.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

1,500 ವಿದ್ಯಾರ್ಥಿಗಳಿಗೆ ತೊಂದರೆ ಅರ್ಚಕರಾಗಲು ಈ ಪರೀಕ್ಷೆ ಪಾಸಾಗಬೇಕು ಇಲಾಖೆಯಿಂದ ಕ್ರಮ ಕೈಗೊಂಡಿಲ್ಲ: ದೂರು
ಪರೀಕ್ಷೆ ಜರುಗದೇ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಬೇರೆ ವಿದ್ಯೆಗೆ ಹೋಗುತ್ತಿದ್ದಾರೆ. ಅರ್ಚಕ ವೃತ್ತಿಯಿಂದಲೇ ದೂರವಾಗುವ ಸ್ಥಿತಿ ಎದುರಾಗಿದೆ
ಪಿ.ಸತ್ಯನಾರಾಯಣ ಪ್ರಾಂಶುಪಾಲ ಮಹಾರಾಜ ಸಂಸ್ಕೃತ ಪಾಠಶಾಲೆ
ಪ್ರಮಾಣಪತ್ರ ವಿತರಣೆ ಸ್ಥಗಿತ!
ವಿದ್ಯಾರ್ಥಿಗಳಿಗೆ 2009ರಿಂದ ಘಟಿಕೋತ್ಸವ ಪ್ರಮಾಣಪತ್ರ (ಆಗಮ ಪ್ರವರ ಆಗಮ ಪ್ರವೀಣಕ್ಕೆ ಸಂಬಂಧಿಸಿದ್ದು) ಕೊಡುತ್ತಿಲ್ಲ. ಅಂಕಪಟ್ಟಿಯನ್ನು ಮಾತ್ರವೇ ಕೊಡಲಾಗುತ್ತಿದೆ. ಹಿಂದೆ ಮೈಸೂರು ಮಹಾರಾಜರು ಕೊಡುತ್ತಿದ್ದ ಅರ್ಹತಾ ಪತ್ರವದು (ಅನ್ನದ ಚೀಟಿ ಎಂದೂ ಕರೆಯಲಾಗುತ್ತಿತ್ತು). ಅದನ್ನು ಮುಂದುವರಿಸಲಾಗಿತ್ತು. ಇಲಾಖೆಯು ಕ್ರಮೇಣ ನಿಲ್ಲಿಸಿದೆ. ಯಾರೂ ಅಂಕಪಟ್ಟಿಯನ್ನು ಫ್ರೇಮ್‌ ಹಾಕಿಸಿ ಇಟ್ಟುಕೊಳ್ಳುವುದಿಲ್ಲ. ಪ್ರಮಾಣಪತ್ರ ನೀಡಿದರೆ ಅದನ್ನು ಸಂರಕ್ಷಿಸಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಮನವಿ ವಿದ್ಯಾರ್ಥಿಗಳದಾಗಿದೆ.
ಹಸ್ತಾಂತರವಾಗದ ಹಾಸ್ಟೆಲ್‌ ಕಟ್ಟಡ!
ಮೈಸೂರು ಸಂಸ್ಕೃತ ಪಾಠಶಾಲೆಗೆ 2023–24ನೇ ಸಾಲಿನಲ್ಲಿ ಮೊದಲನೇ ವರ್ಷಕ್ಕೆ 200 ಮಂದಿ ಪ್ರವೇಶ ಪಡೆದಿದ್ದಾರೆ. ಕೋವಿಡ್‌ ಕಾರಣದಿಂದ ಮುಚ್ಚಿದ್ದ ಹಾಸ್ಟೆಲ್‌ ಅನ್ನು ಈ ಬಾರಿ ತೆರೆಯಲಾಗಿದ್ದು ಈಗಾಗಲೇ 100 ಮಂದಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ‘ಅಕ್ಷಯಪಾತ್ರೆ ಯೋಜನೆಗೆ ದಾನಿಗಳ ನೆರವಿನಿಂದ ತಿಂಗಳಿಗೆ ₹80 ಸಾವಿರ ಕಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದೇನೆ. ಸರ್ಕಾರದಿಂದ ಹೊಸದಾಗಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗಿದೆ. ಆದರೆ 3–4 ತಿಂಗಳಾದರೂ ಹಸ್ತಾಂತರಿಸಿಲ್ಲ. ಅದರಲ್ಲಿ ಗಿಡಗಳು ಬೆಳೆದುಕೊಂಡಿವೆ. ಅನೈತಿಕ ಚಟುವಟಿಕೆಯೂ ನಡೆಯುತ್ತಿದೆ’ ಎಂದು ಪ್ರಾಂಶುಪಾಲರು ತಿಳಿಸಿದರು. ಸ್ವಂತ ಹಣದಲ್ಲಿ ನಿರ್ವಹಣೆ!: ‘155 ವರ್ಷದ ಇತಿಹಾಸವಿರುವ ಪಾಠಶಾಲೆ ಇದು. ವಿದ್ಯುತ್‌ ನೀರು ಹಾಗೂ ಫೋನ್‌ ಬಿಲ್‌ ಅನ್ನು ಮೂರೂವರೆ ವರ್ಷದಿಂದ ಸರ್ಕಾರದವರು ನೀಡಿಲ್ಲ. ಹಲವು ಬಾರಿ ಪತ್ರ ವ್ಯವಹಾರ ಮಾಡಿದರೂ ಪ್ರಯೋಜನವಾಗಿಲ್ಲ. ಸ್ವಂತ ಹಣದಿಂದ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಇಲ್ಲೇ ಕಲಿತಿದ್ದೇನೆ; ಅನ್ನದ ಋಣ ತೀರಿಸಲೆಂದು ಸ್ವಂತ ಹಣ ಬಳಸುತ್ತಿದ್ದೇನೆ. ಉನ್ನತ ಶಿಕ್ಷಣ ಇಲಾಖೆಯು ಇತ್ತ ಗಮನಹರಿಸಬೇಕು’ ಎಂದು ಕೋರುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.