ADVERTISEMENT

ಮೈಸೂರು | ಸೈಕಲ್‌ ಏರಿ ‘ಪರಂಪರೆ’ ಸವಾರಿ

ಪಾರಂಪರಿಕ ಕಟ್ಟಡಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:09 IST
Last Updated 26 ಸೆಪ್ಟೆಂಬರ್ 2025, 4:09 IST
ಪಾರಂಪರಿಕ ಸೈಕಲ್ ಸವಾರಿಯಲ್ಲಿ ಪಾಲ್ಗೊಂಡ ಆಸಕ್ತರು –ಪ್ರಜಾವಾಣಿ ಚಿತ್ರ
ಪಾರಂಪರಿಕ ಸೈಕಲ್ ಸವಾರಿಯಲ್ಲಿ ಪಾಲ್ಗೊಂಡ ಆಸಕ್ತರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದಲ್ಲಿ ಗುರುವಾರ ನಡೆದ ಪಾರಂಪರಿಕ ಸೈಕಲ್ ಸವಾರಿಯಲ್ಲಿ ನೂರಾರು ಯುವಕ-ಯುವತಿಯರು, ಟ್ರಿನ್ ಟ್ರೀನ್ ಸೈಕಲ್ ಏರಿ ನಗರದ ಪಾರಂಪರಿಕ ಕಟ್ಟಡಗಳ ಮಾಹಿತಿ ಪಡೆದು ಫುಳಕಿತರಾದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಸೈಕಲ್ ಸವಾರಿಯಲ್ಲಿ 'ನಮ್ಮ ಪರಂಪರೆ ನಮ್ಮ ಹೆಮ್ಮೆ' ಎಂಬ ಟೀ ಶರ್ಟ್ ಧರಿಸಿ ಹಾಜರಿದ್ದ ಆಸಕ್ತರು ಪುರಭವನ, ದೊಡ್ಡ ಗಡಿಯಾರ,10ನೇ ಚಾಮರಾಜೇಂದ್ರ ವೃತ್ತ, ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ ಸೇರಿದಂತೆ ನಗರದ 20 ಪಾರಂಪರಿಕ ಕಟ್ಟಡಗಳತ್ತಾ ಸಾಗಿದರು. ಆಯಾ ಕಟ್ಟಡದ ಮುಂಭಾಗದಲ್ಲಿ ಇತಿಹಾಸ ತಜ್ಞರಾದ ಪ್ರೊ. ಡಾ.ಶೆಲ್ವಪಿಳೈ ಅಯ್ಯಂಗಾರ್ ಹಾಗೂ ಪ್ರೊ. ರಂಗನಾಥ ರವರು ಕಟ್ಟಡಗಳ ಹಿನ್ನೆಲೆ, ವಾಸ್ತುಶಿಲ್ಪ ಸೇರಿ ರೋಚಕ ಇತಿಹಾಸದ ಸಂಗತಿಗಳನ್ನು ತಿಳಿಸಿದರು.

ಪುರಭವನದ ಮುಂಭಾಗ, ಅಲ್ಟ್ರಾ ಸೈಕ್ಲಿಸ್ಟ್‌ ನವೀನ್ ಡಿ.ಎಸ್. ಸೋಲಂಕಿ ಈ ಸವಾರಿಗೆ ಹಸಿರು ಬಾವುಟ ತೋರಿ ಚಾಲನೆ ನೀಡಿದರು. ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ ಕ್ಲಾಕ್ ಟವರ್ (ದೊಡ್ಡ ಗಡಿಯಾರ), ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ಸ್‌ ಕಟ್ಟಡ, ಜಗನ್ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಚೇರಿ, ಪದ್ಮಾಲಯ, ಹಳೇ ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಹಾಲ್, ಮೆಟ್ರೊಪೋಲ್ ವೃತ್ತ, ರೈಲ್ವೆ ನಿಲ್ದಾಣ, ಕೃಷ್ಣ ರಾಜೇಂದ್ರ ಆಸ್ಪತ್ರೆ ವೃತ್ತ, ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್, ಕಾವೇರಿ ಎಂಪೋರಿಯಂ, ಗಾಂಧಿ ವೃತ್ತ ಹಾದು ಪುರಭವನಕ್ಕೆ ಸವಾರಿಯು ವಾಪಸ್ ಆಯಿತು.

ADVERTISEMENT

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ, ತಾರಕೇಶ್‌, ಅಂಬರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.