
ಮೈಸೂರು–ಹುಣಸೂರು ನಡುವೆ ನಿರ್ಮಾಣ ಹಂತದಲ್ಲಿರುವ ಬೈಪಾಸ್ ರಸ್ತೆ
ಪ್ರಜಾವಾಣಿ ಚಿತ್ರ
ಮೈಸೂರು: ಮೈಸೂರು–ಕುಶಾಲನಗರ ಹೆದ್ದಾರಿಯು 92 ಉದ್ದದ ಪ್ರಯಾಣವನ್ನು ಇನ್ನಷ್ಟು ಸುಗಮವಾಗಿಸುತ್ತಿದೆ. ಆದರೆ ಬೈಪಾಸ್‌ಗಳ ನಿರ್ಮಾಣದಿಂದ ಈ ಭಾಗದ ಮೇಲಾಗುವ ಪರಿಣಾಮಗಳ ಕುರಿತು ಚರ್ಚೆ ಜೋರಾಗಿದೆ.
ಹೊಸ ಮಾರ್ಗವು ಮೈಸೂರು ನಗರದ ಜೊತೆಗೆ ಸಂಪರ್ಕವನ್ನೇ ಕಡಿದುಕೊಂಡು ಮತ್ತೊಂದು ಪರ್ಯಾಯ ರಸ್ತೆಯಲ್ಲಿ ಪ್ರಯಾಣಿಕರನ್ನು ಮಡಿಕೇರಿಗೆ ತಲುಪಿಸುತ್ತದೆ. ಹಾಗೆಯೇ ಮಡಿಕೇರಿ ಕಡೆಯಿಂದ ಬೆಂಗಳೂರಿಗೆ ಹೋಗುವವರಿಗೆ ಸಾಂಸ್ಕೃತಿಕ ನಗರಿಯ ಸಂಪರ್ಕವೇ ಇರುವುದಿಲ್ಲ. 84 ಕಿ.ಮೀ. ಉದ್ದಕ್ಕೂ ಹೊಸ ರಸ್ತೆ ತಲೆ ಎತ್ತುತ್ತಿದ್ದು, ನಗರಗಳ ಸಂಪರ್ಕ ಇರುವುದಿಲ್ಲ. ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು ಹಾಗೂ ಮೈಸೂರಿನಲ್ಲಿ ಹೊಸ ಬೈಪಾಸ್ ರಸ್ತೆಗಳು ನಿರ್ಮಾಣ ಆಗಲಿದ್ದು, ಈ ನಗರಗಳು ಹೆದ್ದಾರಿಯೊಂದಿಗೆ ಹೊಂದಿದ್ದ ನಂಟು, ವ್ಯಾಪಾರ–ವಹಿವಾಟಿಗೆ ಧಕ್ಕೆ ಆಗುವ ಸಾಧ್ಯತೆ ಇದೆ.
ಮಡಿಕೇರಿಗರಿಗೆ ಅನುಕೂಲ: ಮಡಿಕೇರಿಯ ಆತಿಥ್ಯ ಉದ್ಯಮಕ್ಕೆ ಹೊಸ ಹೆದ್ದಾರಿಯಿಂದ ಒಂದಿಷ್ಟು ಅನುಕೂಲ ಆಗಲಿದೆ. ಬೆಂಗಳೂರಿಗರು ಕೆಲವು ವರ್ಷಗಳ ಹಿಂದಿನವರೆಗೂ ಮಡಿಕೇರಿ ತಲುಪಲು 6–7 ಗಂಟೆಗಳ ತ್ರಾಸದ ಪ್ರಯಾಣ ಮಾಡಬೇಕಿತ್ತು. ಬೆಂಗಳೂರು–ಮೈಸೂರು ಹೊಸ ಹೆದ್ದಾರಿ ಈ ಪ್ರಯಾಣದ ಹೊರೆಯನ್ನು ಈಗಾಗಲೇ ಹಲವು ಗಂಟೆ ಇಳಿಸಿದೆ. ಇದೀಗ ಈ ಹೆದ್ದಾರಿಯೂ ಉದ್ಘಾಟನೆ ಆದಲ್ಲಿ 3–4 ಗಂಟೆಯಲ್ಲೇ ಬೆಂಗಳೂರು–ಮಡಿಕೇರಿ ಪ್ರಯಾಣ ಸಾಧ್ಯವಾಗಲಿದೆ. ಪ್ರವಾಸಿಗರು ವಾರಾಂತ್ಯದಲ್ಲಿ ಮಡಿಕೇರಿಯ ಹೋಮ್‌ಸ್ಟೆ– ರೆಸಾರ್ಟ್, ಪ್ರವಾಸಿ ತಾಣಗಳಲ್ಲಿ ವಿಹರಿಸಿ ಹೆಚ್ಚಿನ ಟ್ರಾಫಿಕ್ ಕಿರಿಕಿರಿ ಇಲ್ಲದೆಯೇ ವಾಪಸ್ ಆಗಬಹುದಾಗಿದೆ. ಇದು ಪ್ರವಾಸೋದ್ಯಮ ದೃಷ್ಟಿಯಿಂದ ಮಡಿಕೇರಿಗೆ ಅನುಕೂಲ ಆಗಲಿದೆ ಎನ್ನುತ್ತಾರೆ ಆ ವಲಯದವರು.
‘ಮೂರ್ನಾಲ್ಕು ಗಂಟೆಯಲ್ಲೇ ಬೆಂಗಳೂರಿನಿಂದ ಬಂದು ಹೋಗಬಹುದು ಎಂದಾದರೆ ಜನರು ಒಂದು ದಿನಕ್ಕೆ ತಮ್ಮ ಪ್ರಯಾಣ ಸೀಮಿತಗೊಳಿಸಬಹುದು. ಹಾಗಾದರೆ ಮಡಿಕೇರಿ ಹೋಮ್‌ಸ್ಟೇ– ರೆಸಾರ್ಟ್‌ಗಳಲ್ಲಿ ಉಳಿಯುವವರ ಸಂಖ್ಯೆ ಕಡಿಮೆಯೂ ಆಗಬಹುದು’ ಎಂದೂ ಉದ್ಯಮಿಯೊಬ್ಬರು ಆತಂಕ ವ್ಯಕ್ತಪಡಿಸಿದರು.
ವಾಣಿಜ್ಯ–ವಹಿವಾಟಿಗೇನು ಅನುಕೂಲ: ‘ಹೊಸ ಹೆದ್ದಾರಿಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲ ಆಗಲಿದೆ. ಆದರೆ, ಮೈಸೂರು–ಮಡಿಕೇರಿ ನಡುವೆ ಹೆಚ್ಚು ಕೈಗಾರಿಕೆಗಳಿಲ್ಲ. ಹೀಗಾಗಿ ವಾಣಿಜ್ಯ ದೃಷ್ಟಿಯಿಂದ ಹೊಸ ಹೆದ್ದಾರಿ ಹೆಚ್ಚು ಲಾಭ ಆಗದು’ ಎನ್ನುತ್ತಾರೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು.
ಒಂದೊಮ್ಮೆ ಹೆದ್ದಾರಿ ಪೂರ್ಣಗೊಂಡ ಬಳಿಕ ಮೈಸೂರಿನ ಆತಿಥ್ಯ ಉದ್ಯಮಕ್ಕೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಮೈಸೂರು ಹೊರವಲಯ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕುಶಾಲನಗರ ಪಟ್ಟಣಗಳಲ್ಲಿನ ಹೆದ್ದಾರಿ ಬದಿ ವ್ಯಾಪಾರ ವಹಿವಾಟಿಗೆ ಹಿನ್ನಡೆ ಆಗುವ ಆತಂಕ ಅಲ್ಲಿನ ವರ್ತಕರದ್ದು.
ಬೈಪಾಸ್ ನಿರ್ಮಾಣದಿಂದ ಮೈಸೂರಿನ ಹೋಟೆಲ್–ರೆಸ್ಟೋರೆಂಟ್‌ಗಳಿಗೆ ಶೇ 10–15ರಷ್ಟು ಗ್ರಾಹಕರು ಕಡಿಮೆ ಆಗಲಿದ್ದು ಆತಿಥ್ಯ ವಲಯ ಸೊರಗಲಿದೆ. ಈ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇವೆಸಿ. ನಾರಾಯಣ ಗೌಡ ಅಧ್ಯಕ್ಷ ಮೈಸೂರು ಜಿಲ್ಲಾ ಹೋಟೆಲ್‌ಗಳ ಮಾಲೀಕರ ಸಂಘ
ಹೊಸ ಹೆದ್ದಾರಿಯಿಂದ ಮಡಿಕೇರಿ ಭಾಗದ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲಿದೆ. ಮೈಸೂರು–ಮಡಿಕೇರಿ ನಡುವೆ ಕೈಗಾರಿಕೆಗಳು ಕಡಿಮೆ ಇದ್ದು ವಾಣಿಜ್ಯ ವ್ಯವಹಾರಕ್ಕೆ ಹೆಚ್ಚೇನು ಲಾಭವಿಲ್ಲಕೆ.ಬಿ.ಲಿಂಗರಾಜು ಅಧ್ಯಕ್ಷ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಚತುಷ್ಪಥ ಹೆದ್ದಾರಿ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಯೋಜನೆ. ಆದರೆ ಬೈಪಾಸ್ ನಿರ್ಮಾಣದಿಂದ ಪಟ್ಟಣಗಳಲ್ಲಿ ವ್ಯಾಪಾರ– ವ್ಯವಹಾರ ಕಡಿಮೆಯಾಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗಂತೂ ತೀರಾ ಕಷ್ಟಬಿ.ಅರ್.ನಾಗೇಂದ್ರ ಪ್ರಸಾದ್ ಅಧ್ಯಕ್ಷ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ
ತಳ್ಳಿ ಹಾಕುವಂತಿಲ್ಲ...
‘ಬೆಂಗಳೂರು–ಮೈಸೂರು ಹೊಸ ಹೆದ್ದಾರಿಯಿಂದ ಈ ಮಾರ್ಗದ ಹಲವು ಪಟ್ಟಣಗಳ ಆರ್ಥಿಕ ವಹಿವಾಟಿಗೆ ಧಕ್ಕೆಯಾಗಿದೆ. ಬಿಡದಿಯ ತಟ್ಟೆ ಇಡ್ಲಿ ಮದ್ದೂರು ವಡೆ ಸವಿಯುವುದಕ್ಕೆ ಆ ಹೋಟೆಲ್‌ಗಳಿಗೆ ಹೋಗುವವರ ಸಂಖ್ಯೆ ಕ್ಷೀಣಿಸಿದೆ. ಚನ್ನಪಟ್ಟಣದ ಗೊಂಬೆ ಬೇಡಿಕೆ ಕಳೆದುಕೊಂಡಿದ್ದು ರಾಮನಗರದ ಜಾನಪದ ಲೋಕ ಸೇರಿದಂತೆ ಹಲವು ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಹಲವು ದೊಡ್ಡ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಮೈಸೂರು–ಕುಶಾಲನಗರದ ನಡುವಿನ ಪಟ್ಟಣಗಳ ಮೇಲೂ ಇದೇ ಮಾದರಿ ಪರಿಣಾಮದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ’ ಎಂಬುದು ವರ್ತಕರ ವಲಯದ ಆತಂಕ. ‘ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಂತೆಯೇ ಇಲ್ಲಿಯೂ ಹೆದ್ದಾರಿಗೆ ನಿರ್ಬಂಧಿತ ಪ್ರವೇಶ ಹೊಂದಲಿದ್ದು ವಾಹನಗಳು ಬೇಕಾದಲ್ಲಿ ತಾವು ರಸ್ತೆಯ ಎಡಬಲಕ್ಕೆ ಹೊರಳಲು ಆಗದು. ಹೀಗಾಗಿ ಹೊಸ ಹೆದ್ದಾರಿ ಅಕ್ಕಪಕ್ಕ ಹೋಟೆಲ್ ತೆರೆಯಲು ಯೋಚಿಸಬೇಕಾಗುತ್ತದೆ’ ಎನ್ನುತ್ತಾರೆ ಉದ್ಯಮಿಗಳು.
ಸೊರಗುವುದು ಖಂಡಿತ: ನಾರಾಯಣಗೌಡ
‘ಬೆಂಗಳೂರಿನಿಂದ ಮಡಿಕೇರಿಗೆ ಹೋಗುವವರು ಮೈಸೂರಿಗೆ ಬಂದು ಇಲ್ಲಿ ರಾತ್ರಿ ಉಳಿದು ಮರುದಿನ ಪ್ರಯಾಣ ಮುಂದುವರಿಸುತ್ತಿದ್ದರು. ಆದರೆ ಬೈಪಾಸ್‌ಗಳ ನಿರ್ಮಾಣದಿಂದ ಈ ಹೆದ್ದಾರಿ ಮೈಸೂರಿನ ಜೊತೆಗೆ ಸಂಪರ್ಕವನ್ನೇ ಕಳೆದುಕೊಳ್ಳಲಿದೆ. ಇದರಿಂದಾಗಿ ಮೈಸೂರಿನ ಆತಿಥ್ಯ ವಲಯ ಸೊರಗುವುದು ಖಂಡಿತ’ ಎನ್ನುತ್ತಾರೆ ಮೈಸೂರು ಜಿಲ್ಲಾ ಹೋಟೆಲ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ.
ಪ್ರವಾಸಿ ಸರ್ಕ್ಯೂಟ್ ಅಸ್ತವ್ಯಸ್ಥ..
ಮೈಸೂರು ಹಾಗೂ ಮಡಿಕೇರಿ ಜಿಲ್ಲೆಗಳು ತನ್ನದೇ ಆದ ಪ್ರವಾಸಿ ಸಂಪರ್ಕ ಸರ್ಕ್ಯೂಟ್ ಅನ್ನು ಒಳಗೊಂಡಿವೆ. ಎರಡೂ ಕಡೆಗಳಿಗೂ ಪ್ರತಿ ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಬರುವ ಪ್ರವಾಸಿಗರಲ್ಲಿ ಬೆಂಗಳೂರಿಗರದ್ದೇ ಸಿಂಹಪಾಲು. ಬೆಂಗಳೂರಿನಿಂದ ಹೊರಟವರು ಮೈಸೂರಿನ ಆತಿಥ್ಯ ಸವಿದು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಸುತ್ತಾಡಿ ನಂತರ ಮಡಿಕೇರಿಯ ಪರಿಸರದಲ್ಲಿ ಕಾಲ ಕಳೆದು ಇದೇ ಮಾರ್ಗದಲ್ಲಿ ವಾಪಸ್ ಆಗುತ್ತಾರೆ. ಇದನ್ನೇ ನಂಬಿಕೊಂಡು ಸಾಕಷ್ಟು ಹೋಟೆಲ್–ರೆಸ್ಟೋರೆಂಟ್ ವಿವಿಧ ಉತ್ಪನ್ನ ಮಾರಾಟ ಸಹ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.