ಮೈಸೂರು: ನಗರದ ಹೊರವಲಯದ ಇಲವಾಲ ಠಾಣಾ ವ್ಯಾಪ್ತಿಯ ಜಟ್ಟಿಹುಂಡಿಯಲ್ಲಿ ಪತಿಯು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸವಿತಾ (35) ಕೊಲೆಯಾದ ಮಹಿಳೆ. ಗೋಪಾಲಪುರ ನಿವಾಸಿ ದೇವರಾಜ್ ಕೊಲೆ ಆರೋಪಿ.
‘ದೇವರಾಜ್‌ಗೆ ಎರಡು ಮದುವೆಯಾಗಿತ್ತು. ಸವಿತಾ ಎರಡನೇ ಪತ್ನಿಯಾಗಿದ್ದು, ಅವರ ಮಗಳಿಗೆ ಆರೋಗ್ಯದ ಸಮಸ್ಯೆಯಿದ್ದ ಕಾರಣ ಜಟ್ಟಿಹುಂಡಿ ಸಂತ ಜೋಸೆಫ್ ವೃದ್ಧಾಶ್ರಮದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆರು ತಿಂಗಳಿಂದ ಅಲ್ಲೇ ಕೆಲಸಕ್ಕೆ ಸೇರಿದ್ದರು. ಸವಿತಾ ಅವರು ಪ್ರತಿ ಗುರುವಾರ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಗುರುವಾರ ಬೆಳಿಗ್ಗೆ 10.30ಕ್ಕೆ ಎಂದಿನಂತೆ ಆಸ್ಪತ್ರೆಗೆ ಹೊರಟಿದ್ದರು. ಈ ವೇಳೆ ವೆಂಕಟೇಶ್ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ತನ್ನೊಂದಿಗೆ ಬರುವಂತೆ ತಿಳಿಸಿದ್ದ. ಆದರೆ ಆಕೆ ಒಪ್ಪಿಕೊಳ್ಳದೆ ನಾನು ವಿಚ್ಛೇದನ ಪಡೆಯುತ್ತೇನೆ ಎಂದಿದ್ದು, ಕೋಪಗೊಂಡ ಆತ ಚಾಕುವಿನಿಂದ ಸವಿತಾ ಅವರ ಹೊಟ್ಟೆಗೆ ಇರಿದು, ಕತ್ತು ಸೀಳಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಎಎಸ್‌ಪಿ ಎಲ್.ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.