ADVERTISEMENT

ಮೈಸೂರು: ‘ಒಳಮೀಸಲು ಸದ್ಬಳಕೆ ಆಗಲಿ’

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 6:06 IST
Last Updated 1 ಡಿಸೆಂಬರ್ 2025, 6:06 IST
ಮೈಸೂರಿನ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಮತ್ತು ಬಾಬುಜಗಜೀವನ್‌ ರಾಂ ಭಾವಚಿತ್ರಗಳಿಗೆ ಎಚ್‌.ಗೋವಿಂದಯ್ಯ ಪುಷ್ಪನಮನ ಸಲ್ಲಿಸಿದರು. ಮರಡೀಪುರ ರವಿಕುಮಾರ್, ನಾರಾಯಣ್‌, ಹರೀಶ್‌ ಕುಮಾರ್‌, ಎಂ.ತಿರುಮಲೇಶ್‌, ಭರತ್‌ ಸಿ.ಯಾರಮ್‌ ಪಾಲ್ಗೊಂಡರು– ಪ್ರಜಾವಾಣಿ ಚಿತ್ರ
ಮೈಸೂರಿನ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಮತ್ತು ಬಾಬುಜಗಜೀವನ್‌ ರಾಂ ಭಾವಚಿತ್ರಗಳಿಗೆ ಎಚ್‌.ಗೋವಿಂದಯ್ಯ ಪುಷ್ಪನಮನ ಸಲ್ಲಿಸಿದರು. ಮರಡೀಪುರ ರವಿಕುಮಾರ್, ನಾರಾಯಣ್‌, ಹರೀಶ್‌ ಕುಮಾರ್‌, ಎಂ.ತಿರುಮಲೇಶ್‌, ಭರತ್‌ ಸಿ.ಯಾರಮ್‌ ಪಾಲ್ಗೊಂಡರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಒಂದೂವರೆ ದಶಕದ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ದೊರೆತಿದ್ದು, ದಲಿತ ಸಮುದಾಯ ಒಗ್ಗಟ್ಟಿನಿಂದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಚಿಂತಕ ಎಚ್‌. ಗೋವಿಂದಯ್ಯ ಹೇಳಿದರು.

ಇಲ್ಲಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಪರ ವೇದಿಕೆ, ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಡಾ.ಬಾಬು ಜಗಜೀವನ್‌ರಾಂ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ಭಾನುವಾರ ನಡೆದ ಉಪನ್ಯಾಸ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಒಳಮೀಸಲು ಕುರಿತು ನ್ಯಾ.ನಾಗಮೋಹನ್‌ ದಾಸ್‌ ಸಮಿತಿಯು ವೈಜ್ಞಾನಿಕ ವರದಿ ನೀಡಿದೆ. ಆದರೂ ಕೆಲವರು ವರದಿ ವಿರೋಧಿಸಿ ಬೀದಿಗೆ ಇಳಿದರು. ಹಲವು ಅಡೆತಡೆಗಳ ನಡುವೆಯೂ ರಾಜ್ಯ ಸರ್ಕಾರ ಒಳ ಮೀಸಲು ಜಾರಿ ಮಾಡಿದ್ದು, ಇದನ್ನು ಸಂಪೂರ್ಣ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದಲಿತ ಸಮುದಾಯದ ವಿದ್ಯಾವಂತರು ಒಳ ಮೀಸಲು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ವಿದ್ಯಾರ್ಥಿ ಜೀವನದ ದಿಸೆಯಲ್ಲಿಯೇ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ನ್ಯಾಯ ಪರ ವೇದಿಕೆಯ ಮರಡೀಪುರ ರವಿಕುಮಾರ್‌ ಮಾತನಾಡಿ, ‘ವಿದ್ಯಾರ್ಥಿಗಳು ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದಲಿತ ಸಮುದಾಯದ ವಿದ್ಯಾರ್ಥಿಗಳು ಇರುವ ಅವಕಾಶ ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು’ ಎಂದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು. ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಹರೀಶ್‌ ಕುಮಾರ್‌, ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್‌, ಭರತ್‌ ಸಿ.ಯಾರಮ್‌ ವಿಶೇಷ ಉಪನ್ಯಾಸ ನೀಡಿದರು.

ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಎನ್‌.ಸಿ.ವೆಂಕಟರಾಜು, ನಿರಾಶ್ರಿತರ ಪರಿಹಾರ ಕೇಂದ್ರ ನಿರ್ದೇಶಕ ಚಂದ್ರಪ್ಪ ಗೋಕಾಕ್‌, ಮಾಜಿ ಮೇಯರ್‌ ನಾರಾಯಣ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ (ಎಡಗೈ) ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಥ ಓಣಿಕೇರಿ ಪಾಲ್ಗೊಂಡಿದ್ದರು. ಗಾಯಕರಾದ ಕೆ.ಎನ್‌. ನಾಗೇಶ್‌, ಶಾಕ್ಯ ಸುಂದರ್‌ ಬಾಣೂರು ಪರಿವರ್ತನ ಗೀತೆಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.