
ಮೈಸೂರು: ಮೈಸೂರು–ಕುಶಾಲನಗರ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಬಳಕೆದಾರರಿಗೆ ಟೋಲ್ ಶುಲ್ಕದ ಹೊರೆ ಬೀಳುವುದು ಖಚಿತ. ಆದರೆ ಪ್ರಯಾಣಿಕರು ಕ್ರಮಿಸಿದ ದೂರಕ್ಕಷ್ಟೇ ಟೋಲ್ ಪಾವತಿಸಿದರೆ ಸಾಕು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಹೆದ್ದಾರಿಯನ್ನೂ ಬೆಂಗಳೂರು–ಮೈಸೂರು ಹೆದ್ದಾರಿ ಮಾದರಿಯಲ್ಲಿಯೇ ನಿರ್ಮಿಸುತ್ತಿದೆ. ಎರಡೂ ರಸ್ತೆಗಳು ನಿಯಂತ್ರಿತ ಪ್ರವೇಶ ಹೆದ್ದಾರಿಗಳಾಗಿದ್ದು (Access controlled) ಸೇವೆಗೆ ಅನುಗುಣವಾಗಿ ಟೋಲ್ ಇರಲಿದೆ.
ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮೂರು ಕಡೆ (ಕಣಮಿಣಕಿ, ಶೇಷಗಿರಿಹಳ್ಳಿ, ಗಣಂಗೂರು) ಟೋಲ್ ಪ್ಲಾಜಾಗಳನ್ನು ತೆರೆದು, ಅಲ್ಲಿ ಮಾತ್ರ ಟೋಲ್ ಸಂಗ್ರಹಿಸಲಾಗುತ್ತಿದೆ. ಜಿಪಿಎಸ್ ಆಧಾರಿತ ಟೋಲ್ ಸೇವೆ ಆರಂಭವಾಗಬೇಕು. ಆದರೆ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಒಟ್ಟು ಎಂಟು ಕಡೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ವಾಹನಗಳು ಪ್ರವೇಶ ಪಡೆದ ದ್ವಾರದಿಂದ ನಿರ್ಗಮನದವರೆಗೆ ಒಟ್ಟು ಪ್ರಯಾಣಿಸಿದ ಕಿಲೋಮೀಟರಿಗೆ ಅನುಗುಣವಾಗಿ ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ. ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯಾಫಲಕ ಗುರುತಿಸುವಿಕೆ (ಎಎನ್‌ಪಿಆರ್) ಕ್ಯಾಮೆರಾ, ಉಪಗ್ರಹ ಆಧರಿತ ಜಿಪಿಎಸ್ ವ್ಯವಸ್ಥೆಯಡಿ ಫಾಸ್ಟ್ಯಾಗ್ ಮೂಲಕವೇ ಟೋಲ್ ಸಂಗ್ರಹದ ವ್ಯವಸ್ಥೆ ಇರಲಿದೆ.
‘ಬೆಂಗಳೂರಿನ ನೈಸ್ ರಸ್ತೆ ಸೇರಿ ದೇಶದ ವಿವಿಧೆಡೆ ಇದು ಜಾರಿಯಲ್ಲಿದೆ. ಪ್ರವೇಶ ಮತ್ತು ನಿರ್ಗಮನದ ವೇಳೆಯಲ್ಲಿ ವಾಹನಗಳ ನೋಂದಣಿ ಸಂಖ್ಯೆ ಸ್ಕ್ಯಾನ್ ಆಗಲಿದೆ. ಅದರಿಂದ, ಪ್ರಯಾಣದ ದೂರದ ಲೆಕ್ಕ ಸಿಗಲಿದ್ದು, ಅಷ್ಟಕ್ಕೆ ಟೋಲ್ ಶುಲ್ಕ ಕಡಿತವಾಗಲಿದೆ’ ಎಂದು ಎನ್‌ಎಚ್‌ಎಐ ಅಧಿಕಾರಿಗಳು ವಿವರಿಸುತ್ತಾರೆ.
ಗರಿಷ್ಠ 100 ಕಿ.ಮೀ. ವೇಗದ ಮಿತಿ ಇರಲಿದೆ. ಬೈಕ್, ತ್ರಿಚಕ್ರ ವಾಹನ, ಟ್ರ್ಯಾಕ್ಟರ್, ಎತ್ತಿನಗಾಡಿಗಳಿಗೆ ಪ್ರವೇಶ ನೀಡುವ/ನೀಡದಿರುವ ಕುರಿತು ತೀರ್ಮಾನವಾಗಿಲ್ಲ.
ಹಲವು ಸೌಲಭ್ಯ:
ಹೆದ್ದಾರಿಯ ಒಂದೆಡೆ ಟೋಲ್ ಪ್ಲಾಜಾ– ಕೆಫೆಟೇರಿಯಾ ಮಾದರಿಯಲ್ಲಿ ಸೌಲಭ್ಯ ದೊರಕಲಿದೆ. ರಂಗನತಿಟ್ಟು– ಬೆಳಗೊಳ ನಡುವೆ ಪ್ಲಾಜಾ ತೆರೆಯುವ ಸಾಧ್ಯತೆ ಇದೆ. ಕೆಫೆಟೇರಿಯಾ, ಶೌಚಾಲಯ, ಆತಿಥ್ಯ ಸೇವೆಗಳು, ತುರ್ತು ವೈದ್ಯಕೀಯ ಸೇವೆ, ಆಂಬುಲೆನ್ಸ್ ಸೌಲಭ್ಯಗಳೂ ಇರಲಿವೆ.
15 ವರ್ಷ ಟೋಲ್ ಹೊರೆ
ನಾಲ್ಕು ಪ್ಯಾಕೇಜ್‌ಗಳಲ್ಲಿ ಹೆದ್ದಾರಿ ನಿರ್ಮಾಣವಾಗುತ್ತಿದ್ದು ₹ 2502 ಕೋಟಿ ವ್ಯಯಿಸಲಾಗುತ್ತಿದೆ. Hybrid annuity model(HAM) ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಒಟ್ಟು ವೆಚ್ಚದಲ್ಲಿ ಶೇ 40ರಷ್ಟನ್ನು ಕೇಂದ್ರ ಸರ್ಕಾರವೇ ಗುತ್ತಿಗೆದಾರರಿಗೆ ನೀಡಲಿದೆ. ಶೇ 60ರಷ್ಟು ಬಂಡವಾಳವನ್ನು ಗುತ್ತಿಗೆದಾರರು ಹೂಡಿಕೆ ಮಾಡಬೇಕು. 15 ವರ್ಷ ಕಾಲ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಇರಲಿದೆ. ಆ ಹಣದಲ್ಲಿ ಗುತ್ತಿಗೆದಾರರ ಬಂಡವಾಳವನ್ನು ಸರ್ಕಾರವು ಪಾವತಿಸಲಿದೆ. ಗುತ್ತಿಗೆದಾರರೇ ರಸ್ತೆಯನ್ನು ಸಂಪೂರ್ಣ ನಿರ್ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.