ADVERTISEMENT

400 ಎಕರೆ ಖಾಸಗಿ ಬಡಾವಣೆ: ಎಂಡಿಎ ಅಸ್ತು

ಸಾಧಕರಿಗೆ ಬಿಡಿ ನಿವೇಶನಕ್ಕೆ ಉಪ ಸಮಿತಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:06 IST
Last Updated 9 ಆಗಸ್ಟ್ 2025, 4:06 IST
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿದರು
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿದರು    

ಮೈಸೂರು: ನಗರ ಹಾಗೂ ಹೊರವಲಯದಲ್ಲಿ 400 ಎಕರೆಯಲ್ಲಿ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಎಂಡಿಎ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಅನುಮೋದನೆ ನೀಡಿದೆ.

ಈ ಪ್ರಾಧಿಕಾರ ರಚನೆಯಾದ ನಂತರ ಇದೇ ಮೊದಲಿಗೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ ನಾಗರಿಕ ಸೌಕರ್ಯ (ಸಿಎ) ನಿವೇಶನಗಳನ್ನು ವಿವಿಧ ಸರ್ಕಾರಿ ಹಾಗೂ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಗೆ ಮಂಜೂರು ಮಾಡಲು ನಿರ್ಧರಿಸಲಾಯಿತು. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸಮರ್ಪಕವಾಗಿ ಗಣಕೀಕೃತಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.

ADVERTISEMENT

ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ಹುಡ್ಕೊ, ಇಡಬ್ಲ್ಯುಎಸ್‌, ಎಲ್‌ಐಜಿ, ಎಂಐಜಿ, ಎಚ್‌ಐಜಿ ಮತ್ತು ಬ್ಯಾಂಕ್‌ಗಳ ನೆರವಿನ ಮೂಲಕ ಹಂಚಿಕೆ ಮಾಡಿರುವ ಮನೆಗಳ ಮಂಜೂರಾತಿದಾರರು ಮನೆಯ ಬಾಕಿ ಕಂತನ್ನು ಬಡ್ಡಿ ಸಹಿತ ಹಣ ಪಾವತಿಸಿ ಕ್ರಯಪತ್ರ ಪಡೆಯಲು ಗಡುವು ನಿಗದಿಗೊಳಿಸಿ ಕಡೆಯ ಅವಕಾಶ ನೀಡಲು ನಿರ್ಣಯ ಕೈಗೊಳ್ಳಲಾಯಿತು.

2023ರ ಫೆ.8ರಂದು ಅಧಿಸೂಚನೆ ಹೊರಡಿಸಿ, ಪ್ರವರ್ಗ-ಬಿ, ಸಿ, ಡಿ, ಇ, ಎಫ್ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಲು ಸ್ವೀಕೃತವಾದ ಅರ್ಜಿಗಳ ಸಂಬಂಧ ಉಪ ಸಮಿತಿ ರಚಿಸಲು ನಿರ್ಣಯಿಸಲಾಯಿತು.

2025–26ನೇ ಸಾಲಿನಲ್ಲಿ ತಾಂತ್ರಿಕ ಶಾಖೆಗೆ ಸಂಬಂಧಿಸಿದ ₹244 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಮೈಸೂರು-ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದ ವಿಸ್ತರಿತ ಪ್ರದೇಶಕ್ಕೆ ಗಡಿಯ ಎಲ್ಲೆಯ ವಿವರಗಳನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲು ಹಾಗೂ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ್ ಯೋಜನೆಯಡಿ ಜಿ.ಐ.ಎಸ್. ಅಡಿಯಲ್ಲಿ ಮಹಾಯೋಜನೆಯನ್ನು ಪರಿಷ್ಕರಿಸಲು ನಿರ್ಣಯಿಸಲಾಯಿತು.

ಪ್ರಾಧಿಕಾರದ ಅಭಿಲೇಖಾಲಯದಲ್ಲಿರುವ ದಾಖಲೆಗಳನ್ನು ಗಣಕೀಕೃತಗೊಳಿಸಲು, ಎಂಡಿಎ ಆಸ್ತಿಯನ್ನು ಸಂರಕ್ಷಿಸುವ ಸಂಬಂಧ ಮೊಬೈಲ್ ಆ್ಯಪ್ ಸಿದ್ಧಪಡಿಸುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. 

ಯುದ್ಧ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮೃತರಾದ ಕ್ಯಾಪ್ಟನ್ ಪ್ರಾಂಜಲ್ ಎ.ವಿ. ಅವರ ಅವಲಂಬಿತರಾದ ಅದಿತಿ ಜಿ.ಮುದ್ದೆಬಿಹಾಳ್ಕರ್ ಅವರಿಗೆ ಸೈನಿಕ ಕಲ್ಯಾಣ ಸಮಿತಿ ಮತ್ತು ಪುನರ್ವಸತಿ ಇಲಾಖೆಯಿಂದ ಸ್ವೀಕೃತವಾದ ಪ್ರಸ್ತಾವದಂತೆ ಒಂದು 40X60 ಅಡಿ ಅಳತೆಯ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ನಿರ್ಣಯಿಸಲಾಯಿತು ಎಂದು ಪ್ರಾಧಿಕಾರ ತಿಳಿಸಿದೆ.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್‌ ಆಸೀಫ್, ಎಂಡಿಎ ಪ್ರಭಾರ ಆಯುಕ್ತ ರಕ್ಷಿತ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.