ADVERTISEMENT

ಮೈಸೂರು: 11ನೇ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ ಶ್ವಾನ ಪ್ರದರ್ಶನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:07 IST
Last Updated 27 ಅಕ್ಟೋಬರ್ 2025, 4:07 IST
ಮೈಸೂರಿನ ಹಳೇ ಡಿಸಿ ಕಚೇರಿ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನವನನ್ನು ತೀರ್ಪುಗಾರ ಸಿ.ವಿ.ಸುದರ್ಶನ್‌ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ:ಅನೂಪ್ ರಾಘ.ಟಿ.
ಮೈಸೂರಿನ ಹಳೇ ಡಿಸಿ ಕಚೇರಿ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನವನನ್ನು ತೀರ್ಪುಗಾರ ಸಿ.ವಿ.ಸುದರ್ಶನ್‌ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ:ಅನೂಪ್ ರಾಘ.ಟಿ.   

ಮೈಸೂರು: ಟೇಬಲ್‌ ಮೇಲೆ ನಿಂತು ಬೆಡಗು ಬಿನ್ನಾಣದಿಂದ ಕೂದಲು ಬಾಚಿಸಿಕೊಳ್ಳುತ್ತಿದ್ದ ಯಾರ್ಕ್‌ಷೈರ್ ಟೆರಿಯರ್. ಕಮ್‌ ಕಮ್‌.. ಜಂಪ್‌ ಜಂಪ್‌.. ಎನ್ನುತ್ತಿದ್ದಂತೆ ಹಾರಿ ಕಾಲೆತ್ತಿ ನಿಲುತ್ತಿದ್ದ ಮುಧೋಳ್, ಎಸಿ ಕಾರಿನೊಳಗೆ ಕುಳಿತು ಉಪಚಾರ ಮಾಡಿಸಿಕೊಳ್ಳುತ್ತಿದ್ದ ಜರ್ಮನ್‌ ಶೆಫರ್ಡ್‌...

ನಗರದ ಹಳೇ ಡಿಸಿ ಕಚೇರಿ ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಭಾನುವಾರ ಕೆನೈನ್ ಕ್ಲಬ್ ಮೈಸೂರು ಆಯೋಜಿಸಿದ್ದ 11ನೇ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳು.

3 ಕೆಜಿ ಇರುವ ಮಿನಿಯೇಚರ್ ಪಿಂಷರ್ ಮತ್ತು 100 ಕೆಜಿಗೂ ಹೆಚ್ಚು ತೂಕವಿರುವ ಸೇಂಟ್ ಬರ್ನಾಡ್, ಗ್ರೇಟ್ ಡೇನ್, ಇಂಗ್ಲಿಷ್ ಮ್ಯಾಸ್ತಿಫ್, ಬುಲ್‌ಡಾಗ್, ಸೈನಿರಿಯನ್ ಅಸ್ಕಿ, ಗೋಲ್ಡನ್ ರಿಟ್ರಿವರ್, ಲ್ಯಾಬ್ರಡಾರ್ ರಿಟ್ರಿವರ್, ಜರ್ಮನ್ ಶಫರ್ಡ್, ಪಗ್, ಚೌಚೌ, ಪೊಮೆರೇನಿಯನ್, ಬಾಕ್ಸರ್‌ಗಳಲ್ಲದೆ, ದೇಶೀಯ ತಳಿಗಳಾದ ಮುಧೋಳ್, ಕೋಂಬಾಯ್, ಕ್ಯಾರವಾನ್ ಹೌಂಡ್, ರಾಜಪಾಳ್ಯಂ, ಬಿಚೋನ್ ಫ್ರಿಸ್, ಜೆರ್ಬಿರಿಯನ್ ಶೆಪ್ಸ್ಕಿಮತ್ತು ಬಾರ್ಡರ್ ಕಾಲಿ ಮೊದಲಾದ ಶ್ವಾನಗಳು ಭಾಗವಹಿಸಿದ್ದವು.‌

ADVERTISEMENT

ರಿಂಗ್‌ 1, 2, 3 ಎಂಬ ಮೂರು ಅಂಕಣಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲ ರಿಂಗ್‌ನಲ್ಲಿ ಚೆನ್ನೈನ ಸಿ.ವಿ.ಸುದರ್ಶನ್‌ ತೀರ್ಪುಗಾರರಾಗಿ ನಿರ್ವಹಿಸಿದರು. ರಿಂಗ್‌ 2ನಲ್ಲಿ ಮಲೇಷ್ಯಾದ ಡೆರಿಕ್‌ಶೆವ್ ಹಾಗೂ ರಿಂಗ್‌ 3ರಲ್ಲಿ ಬೆಂಗಳೂರಿನ ಮಂಜುನಾಥ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

35ಕ್ಕೂ ಹೆಚ್ಚು ತಳಿಗಳ 350ಕ್ಕೂ ಹೆಚ್ಚು ಶ್ವಾನಗಳು ತಮ್ಮ ವಯಸ್ಸಿಗೆ ಅನುಗುಣವಾಗಿ ಮೂರು ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿದವು.

ತುಂಟಾಟದ ಮೂಲಕ ಗಮನ: ಸ್ಪರ್ಧೆಯಲ್ಲಿ ಶ್ವಾನಗಳು ತಮ್ಮ ತುಂಟಾಟದ ಮೂಲಕ ಪ್ರಾಣಿಪ್ರಿಯರ ಗಮನ ಸೆಳೆದವು. ಶ್ವಾನಗಳ ಓಡಾಟ, ಬುದ್ಧಿವಂತಿಕೆ, ಜಾಣ್ಮೆಯನ್ನು ಪ್ರದರ್ಶನದಲ್ಲಿ ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು. ಮುದ್ದು ಮುದ್ದಾದ ಶ್ವಾನಗಳನ್ನು ಕಂಡು ಪ್ರಾಣಿಪ್ರಿಯರು ಸೆಲ್ಫಿ ತೆಗೆದುಕೊಂಡು ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿದ್ದರು. ಮಾಲೀಕರು ಬಾಯಾರಿಕೆ ತಣಿಸಲು ನಾಯಿಗಳಿಗೆ ಐಸ್ ಕ್ಯೂಬ್‌ಗಳನ್ನು ತಂದಿದ್ದರು. ಅವುಗಳಿಗೆ ಆಗಾಗ ನೀರು ಸಿಂಪಡಿಸುತ್ತಿದ್ದರು.

ಸ್ಥಳದಲ್ಲಿ ಸಾಕುಪ್ರಾಣಿಗಳ ಆಹಾರ, ಆರೋಗ್ಯ ಉತ್ಪನ್ನಗಳು ಮತ್ತು ಸೋಪ್, ಶಾಂಪೂ, ಚೈನ್‌ಗಳು, ಬೆಲ್ಟ್‌ಗಳು ಮುಂತಾದ ಪರಿಕರಗಳ ಮಳಿಗೆ ಹಾಕಲಾಗಿತ್ತು.

‘10 ವರ್ಷದಿಂದ ಭಾಗವಹಿಸುತ್ತಿರುವುದು ಸಂತಸವಿದೆ. ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳನ್ನು ಪ್ರೀತಿಸಬೇಕು. ಜಾತಿ ನಾಯಿ, ಬೀದಿ ನಾಯಿ ಎನ್ನದೆ ಎಲ್ಲಾ ನಾಯಿಗಳನ್ನು ಒಂದೇ ರೀತಿಯಲ್ಲಿ ಕಾಣಬೇಕು’ ಎಂದು ಬೆಂಗಳೂರಿನ ಶ್ವಾನ ಪ್ರಿಯ ಗೌತಮ್ ತಿಳಿಸಿದರು. 

‘ಪ್ರಾಣಿಗಳಿಗೆ ಪ್ರೀತಿ ಕಾಳಜಿ ಮುಖ್ಯ’

ಮೈಸೂರು: ‘ಪ್ರಾಣಿಗಳಿಗೆ ಪ್ರೀತಿ ಮತ್ತು ಕಾಳಜಿ ಮುಖ್ಯ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ನಗರದಲ್ಲಿ ಶ್ವಾನ ಪ್ರದರ್ಶನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಣಿಗಳಿಗೆ ಮನುಷ್ಯರಂತೆ ಭಾವನೆಗಳಿವೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು. ‘ಸ್ಪರ್ಧೆಯಲ್ಲಿ ಶಿಸ್ತು ಕ್ರೀಡಾಮನೋಭಾವ ಮುಖ್ಯ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು’ ಎಂದು ಕಿವಿಮಾತು ಹೇಳಿದರು. ಶಾಸಕ ಟಿ.ಎಸ್‌.ಶ್ರೀವತ್ಸ ಮಾತನಾಡಿ ‘ಸ್ಪರ್ಧೆಯಲ್ಲಿ ಬೇರೆ ಬೇರೆ ರಾಜ್ಯದಿಂದ ವಿವಿಧ ತಳಿಯ 300ಕ್ಕೂ ಹೆಚ್ಚು ನಾಯಿಗಳು ಭಾಗವಹಿಸಿರುವುದು ವಿಶೇಷ. ಅವುಗಳ ಬುದ್ಧಿವಂತಿಕೆ ಚತುರತೆಯನ್ನು ಪ್ರಾಣಿಪ್ರಿಯರು ಕಣ್ತುಂಬಿಕೊಳ್ಳಬಹುದು’ ಎಂದರು. ಕ್ಲಬ್‌ ಅಧ್ಯಕ್ಷ ಬಿ.ಪಿ.ಮಂಜುನಾಥ್ ರಂಗಪ್ಪ ಸಿ.ಎಸ್.ಅರುಣ್ ಹರ್ಷ ವಿ.ಮನೋಹರ್ ಎಂ.ಎಚ್.ಅಭಿಷೇಕ್ ಚರಣ್ ಚಿರಾಗ್ ಗಿರೀಶ್ ಇದ್ದರು.

ಪ್ರೀತಿಯ ಶ್ವಾನಕ್ಕೆ ಒಡತಿಯೊಬ್ಬರು ಸ್ಪರ್ಧೆಗೆ ಅಣಿಗೊಳಿಸಿದರು
ಪ್ರೀತಿಯ ಶ್ವಾನದೊಂದಿಗೆ ಅದರ ಮಾಲೀಕ ಬೆಂಗಳೂರಿನ ಗೌತಮ್  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.