ADVERTISEMENT

ಮೈಸೂರು | ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಸುಸೂತ್ರ

ಕನ್ನಡ ವಿಷಯ: 525 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:05 IST
Last Updated 1 ಮಾರ್ಚ್ 2026, 4:05 IST
ಮೈಸೂರಿನಲ್ಲಿ ಶನಿವಾರ ದ್ವಿತೀಯ ಪಿಯು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾದರು
ಮೈಸೂರಿನಲ್ಲಿ ಶನಿವಾರ ದ್ವಿತೀಯ ಪಿಯು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾದರು   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಆರಂಭವಾದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಿತು.

ನಗರದ 28 ಸೇರಿದಂತೆ ಜಿಲ್ಲೆಯ ಒಟ್ಟು 51 ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಿತು. ಮೊದಲ ದಿನವಾದ ಕನ್ನಡ ಹಾಗೂ ಅರೇಬಿಕ್ ವಿಷಯದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಜರುಗಿತು.

ಜಿಲ್ಲೆಯಲ್ಲಿ 32,835 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಇದರಲ್ಲಿ ಕನ್ನಡ ವಿಷಯದ ಪರೀಕ್ಷೆಗೆ ಒಟ್ಟು 28,865 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಅದರಲ್ಲಿ 525 ಮಂದಿ ಗೈರು ಹಾಜರಾದರು. ಅರೇಬಿಕ್ ವಿಷಯದ ಪರೀಕ್ಷೆಗೆ ನೋಂದಾಯಿಸಿದ್ದ ಇಬ್ಬರೂ ವಿದ್ಯಾರ್ಥಿಗಳೂ ಹಾಜರಾದರು.

ADVERTISEMENT

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 23 (ಎಚ್‌.ಡಿ. ಕೋಟೆ 3, ಪಿರಿಯಾಪಟ್ಟಣ 4, ತಿ.ನರಸೀಪುರ 4, ಕೆ.ಆರ್. ನಗರ 3, ನಂಜನಗೂಡು 5 ಹಾಗೂ ಹುಣಸೂರು 4) ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.

ಭದ್ರತೆಯಲ್ಲಿ: ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಡಿ ನಗರದ ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಇಡಲಾಗಿತ್ತು. ಶನಿವಾರ ಬೆಳಿಗ್ಗೆ ಅವುಗಳನ್ನು ನಿಯೋಜಿತ ವಾಹನಗಳ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆಯಲ್ಲಿ ರವಾನಿಸಲಾಯಿತು. ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಬೆಳವಣಿಗೆಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಖಜಾನೆಯ ಹೊರಗೆ ಮತ್ತು ಒಳಗೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ನಿಗಾ ವ್ಯವಸ್ಥೆಯೊಂದಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲಿನ ವೆಬ್‌ಕಾಸ್ಟಿಂಗ್‌ ಅನ್ನು ಅಧಿಕಾರಿಗಳು ವೀಕ್ಷಿಸಿ ಮೇಲುಸ್ತುವಾರಿ ವಹಿಸಿದರು.

ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರತಿ ಕೇಂದ್ರಕ್ಕೆ ಇಬ್ಬರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

‘ಪಿಯು ಪರೀಕ್ಷೆಯ ಮೊದಲ ದಿನ ಸುಸೂತ್ರವಾಗಿ ನಡೆದಿದೆ. ಅಹಿತಕರ ಘಟನೆ ಅಥವಾ ಪರೀಕ್ಷಾ ಅಕ್ರಮದ ಯಾವುದೇ ಪ್ರಕರಣ ವರದಿಯಾಗಿಲ್ಲ. ಯಾವುದೇ ರೀತಿಯ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಿಡಿಪಿಯು ಎಂ.ಸಿ. ನಾಗಮ್ಮ ತಿಳಿಸಿದರು. 

ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ಪರೀಕ್ಷಾ ಕೇಂದ್ರದ ಬಳಿ ಕರ್ನಾಟಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಪೆನ್ ನೀಡಿ ಶುಭ ಹಾರೈಸಿದರು

ಅರೇಬಿಕ್‌ ಪರೀಕ್ಷೆಗೆ ನೋಂದಾಯಿಸಿದ್ದ ಇಬ್ಬರೂ ಹಾಜರು ಯಾವುದೇ ಅಕ್ರಮ ವರದಿಯಾಗಿಲ್ಲ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ, ಕ್ಯಾಮೆರಾ ನಿಗಾ

ಪರೀಕ್ಷಾರ್ಥಿಗಳಿಗೆ ಹೂ ಪೆನ್‌ ನೀಡಿ ಶುಭಾಶಯ

ದ್ವಿತೀಯ ಪಿಯು ಪರೀಕ್ಷಾರ್ಥಿಗಳಿಗೆ ಕರ್ನಾಟಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಗುಲಾಬಿ ಹೂವು ಹಾಗೂ ಪೆನ್‌ ವಿತರಿಸಿ ಶುಭಾಶಯ ಕೋರಿದರು.  ರಮಾವಿಲಾಸ ರಸ್ತೆಯ ಮರಿಮಲ್ಲಪ್ಪ ಕಾಲೇಜು ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಈ ವೇಳೆ ಮಾತನಾಡಿದ ವೇದಿಕೆಯ ವಿನಯ್‌ಕುಮಾರ್ ‘ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಆತಂಕಪಡಬಾರದು. ಭಯಪಟ್ಟರೆ ಓದಿದ್ದೆಲ್ಲವೂ ಮರೆತು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಲವಲವಿಕೆಯಿಂದ ಎದುರಿಸಬೇಕು. ಒತ್ತಡದಿಂದ ಹೊರಬರಬೇಕು’ ಎಂದು ಸಲಹೆ ನೀಡಿದರು. ಕೆಪಿಸಿಸಿ ಸದಸ್ಯ ನಜರ್‌ಬಾದ್‌ ನಟರಾಜ್‌ ಮುಖಂಡರಾದ ವಿಕ್ರಂ ಅಯ್ಯಂಗಾರ್ ಎಸ್.ಎನ್. ರಾಜೇಶ್ ಗುರುರಾಜ್ ಶೆಟ್ಟಿ ನೀತು ಉಮೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.