ಮೈಸೂರಿನಲ್ಲಿ ಗುರುವಾರ ನಡೆದ 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಪತ್ರಿಕಾ ವಿತರಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.
ಮೈಸೂರು: ‘ಪ್ರಸ್ತುತ ದೃಶ್ಯ ಮಾಧ್ಯಮ ಸಾಕಷ್ಟು ವ್ಯಾಪಿಸಿದ್ದರೂ, ಬಹಳಷ್ಟು ಮಂದಿಗೆ ದಿನಪತ್ರಿಕೆ ಓದಿದರಷ್ಟೆ ಸಮಾಧಾನ ಆಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾದರಷ್ಟೇ ಅದು ನಿಜವಾದ ಸುದ್ದಿ. ಅಂತಹ ಪತ್ರಿಕೆಗಳನ್ನು ತಲುಪಿಸುವ ವಿತರಕರದು ಮಹತ್ತರವಾದ ಕಾರ್ಯ’ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಮೈಸೂರಿನ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದ ‘ತಾತಯ್ಯನವರ ವೇದಿಕೆ’ಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಮತ್ತು 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ ನಾಲ್ಕನೇ ಅಂಗ. ಜಗತ್ತಿನಲ್ಲಿ ಆಗುವ ಸಂಗತಿಗಳನ್ನು ತಿಳಿಸಿಕೊಡುವ ಕೆಲಸವನ್ನು ಮುದ್ರಣ ಮಾಧ್ಯಮ ಮಾಡುತ್ತಿದೆ. ಪತ್ರಿಕೆಗಳನ್ನು ಓದುಗರ ಬಳಿಗೆ ತಲುಪಿಸುವ ಕೆಲಸವನ್ನು ವಿತರಕರು ನಿಷ್ಠೆ- ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಪತ್ರಿಕೆ ಬರುವುದು ತಡವಾದರೆ ಚಡಪಡಿಸುವ ಓದುಗರು ಇಂದಿಗೂ ಬಹಳಷ್ಟು ಮಂದಿ ಇದ್ದಾರೆ. ಮಳೆ, ಚಳಿ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಪತ್ರಿಕೆ ವಿತರಿಸುವ ಮಹತ್ತರ ಜವಾಬ್ದಾರಿಯನ್ನು ವಿತರಕರು ಮಾಡುತ್ತಿದ್ದಾರೆ’ ಎಂದರು.
ಏನು ಬೇಕಾದರೂ ಆಗಬಹುದು:
‘ಅಮೆರಿಕದಲ್ಲಿ ಪತ್ರಿಕೆಗಳನ್ನು ಹೊರಗಿಟ್ಟು ಹೋಗುತ್ತಾರೆ. ನಮ್ಮಲ್ಲಿ ಈಗಲೂ ಗೌರವಯುತವಾಗಿ ಮನೆಯೊಳಕ್ಕೇ ಕೊಡುವ ಕೆಲಸವನ್ನು ವಿತರಕರು ಮಾಡುತ್ತಿದ್ದಾರೆ. ಇದು ಶ್ಲಾಘನೀಯವಾದುದು. ಇದೂ ಗೌರವಯುತವಾದ ಕೆಲಸ. ಒಂದು ಕಾಲದಲ್ಲಿ ನಿಮ್ಮ ಕಷ್ಟಗಳನ್ನು ಕೇಳುವವರೇ ಇರಲಿಲ್ಲ. ಈಗ, ಸರ್ಕಾರ ಆಲಿಸುತ್ತಿದೆ. ‘ಸಂಘ ಮಾಡಿರುವುದು ಒಳ್ಳೆಯ ಬೆಳವಣಿಗೆ. ಪತ್ರಿಕಾ ವಿತರಕರು ಏನು ಬೇಕಾದರೂ ಆಗಬಹುದು, ದೇಶದ ಮೊದಲ ಪ್ರಜೆಯೂ ಆಗಬಹುದು ಎಂಬುದಕ್ಕೆ ಮಾಜಿ ರಾಷ್ಡ್ರಪತಿ ಅಬ್ದುಲ್ ಕಲಾಂ ಸಾಕ್ಷಿ. ಕೆ.ವಿ. ಪ್ರಭಾಕರ್ ಕೂಡ ಪತ್ರಿಕಾ ವಿತರಕರಾಗಿದ್ದರು. ಅವರಿಗ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಹುದ್ದೆಗೆ ಏರಿದ್ದಾರೆ’ ಎಂದು ಹೇಳಿದರು.
‘ಪತ್ರಿಕೆಗಳು ಮುದ್ರಣಾಲಯಗಳಲ್ಲಿಯೇ ಉಳಿದರೆ ಉದ್ದೇಶ ಈಡೇರುವುದಿಲ್ಲ’ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ವಿತರಕರ ಸಂಘವೀಗ ಒಂದು ಹಳಿಗೆ ಬಂದು ನಿಂತಿದೆ. ಹೋರಾಟ ಫಲವಾಗಿ ವಿಮೆ ದೊರೆಯುತ್ತಿದೆ. ಇನ್ನಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಿಕೊಳ್ಳಲು ಸಂಘಟನೆ ಬಹಳ ಮುಖ್ಯವಾಗಿದೆ. ಕೆ.ವಿ. ಪ್ರಭಾಕರ್ ಅವರು ಪತ್ರಿಕಾ ವಿತರಕರ ದನಿ ಹಾಗೂ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪತ್ರಕರ್ತರಾದ ಎನ್.ನಾಗಣ್ಣ, ಅಂಶಿ ಪ್ರಸನ್ನಕುಮಾರ್, ಎಂ.ಆರ್. ಸತ್ಯನಾರಾಯಣ ಮಾತನಾಡಿದರು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ‘ಮುಡಾ’ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಒಕ್ಕೂಟ ಹಾಗೂ ಸಂಘದ ಪದಾಧಿಕಾರಿಗಳು, ಪತ್ರಕರ್ತರಾದ ಸಿ.ಕೆ. ಮಹೇಂದ್ರ, ಎಸ್.ಟಿ.ರವಿಕುಮಾರ್, ಎಂ.ಸುಬ್ರಹ್ಮಣ್ಯ, ಧರ್ಮಪುರ ನಾರಾಯಣ, ಬಿ.ರಾಘವೇಂದ್ರ, ಟಿಪಿಎಂಎಲ್ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ಪ್ರಕಾಶ್, ವಿವಿಧ ಪತ್ರಿಕೆಗಳ ಪ್ರಸರಣ ವಿಭಾಗದ ಪ್ರತಿನಿಧಿಗಳಾದ ಟಿ.ಎಸ್. ಗೋಪಿನಾಥ್, ಶ್ರೀಧರ್, ಸರ್ವಜನಾಂಗ ಹಿರತಕ್ಷಣಾ ವೇದಿಕೆಯ ವೇಣುಗೋಪಾಲ್, ಪತ್ರಿಕಾ ವಿತರಕರ ಸಂಘದ ಹುಬ್ಬಳ್ಳಿ ಅಧ್ಯಕ್ಷ ಮನೋಹರ ಪರ್ವತಿ, ಜಿಲ್ಲಾಧ್ಯಕ್ಷ ಜೆ.ಎಸ್. ಹೋಮದೇವ ಮೊದಲಾದವರು ಪಾಲ್ಗೊಂಡಿದ್ದರು.
ನಾಡಗೀತೆಯೊಂದಿಗೆ ಪತ್ರಿಕಾ ವಿತರಕರ ಗೀತೆಯನ್ನು ಅಮ್ಮ ರಾಮಚಂದ್ರ ತಂಡದವರು ಪ್ರಸ್ತುತಪಡಿಸಿದರು.
ಹಿರಿಯೂರಿನ ಏಕಾಂತಪ್ಪ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.