ಮೈಸೂರು: ನಗರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.1 ಮತ್ತು 2ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದಲ್ಲಿ ಪೊಲೀಸರ ತಂಡ ಪರಿಶೀಲನೆ ನಡೆಸಿತು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ಸೆ.1ರಂದು ವಜ್ರ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಲಿದ್ದು, ಅಲ್ಲಿನ ಕಾರ್ಯಕ್ರಮದ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆಯಲಾಯಿತು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಭದ್ರತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಆವರಣದೊಳಗೆ ಆಹ್ವಾನಿತ ಗಣ್ಯರಿಗೆ ಮಾತ್ರವೇ ಪ್ರವೇಶವಿದ್ದು, ಅದನ್ನು ನಿಯಂತ್ರಿಸುವ ಬಗ್ಗೆ ಚರ್ಚಿಸಲಾಯಿತು.
ಅಂದು ಬೆಳಿಗ್ಗೆ 8.30ಕ್ಕೆ ಅರಮನೆಗೆ ಹಾಗೂ ರಾತ್ರಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ದ್ರೌಪದಿ ಮುರ್ಮು ಭೇಟಿ ನೀಡಲಿದ್ದು, ಅಲ್ಲಿನ ಭದ್ರತೆಯ ಕುರಿತೂ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕರ ಓಡಾಟ ನಿರ್ಭಂಧ ಹಾಗೂ ರಾಷ್ಟ್ರಪತಿ ಸ್ವಾಗತಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಾಸ್ತವ್ಯ ಹೂಡಲಿರುವ ರೇಡಿಸನ್ ಬ್ಲೂ ಹೋಟೆಲ್‌ನಲ್ಲಿಯೂ ಪರಿಶೀಲಿಸಿದರು.
ನಗರದಲ್ಲಿ ರಾಷ್ಟ್ರಪತಿ ಓಡಾಡುವ ರಸ್ತೆ ಸ್ವಚ್ಛಗೊಳಿಸುವ ಹಾಗೂ ಡಾಂಬರೀಕರಣದ ಕೆಲಸಗಳು ಭರದಿಂದ ಸಾಗಿದೆ. ರಸ್ತೆಯಲ್ಲಿನ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿರುವ ಕುರಿತು ಪರಿಶೀಲಿಸಿದರು. ಡಿಸಿಪಿಗಳಾದ ಆರ್.ಎನ್.ಬಿಂದುರಾಣಿ, ಕೆ.ಎಸ್.ಸುಂದರ್ ರಾಜ್, ಆಯಿಷ್ ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ ಭಾಗವಹಿಸಿದ್ದರು.
ಉತ್ತನಹಳ್ಳಿಗೆ ಭೇಟಿ: ಕಳೆದ ವರ್ಷದಿಂದ ಯುವ ದಸರಾವನ್ನು ಉತ್ತನಹಳ್ಳಿ ಮೈದಾನದಲ್ಲಿ ನಡೆಸುತ್ತಿದ್ದು, ಈ ವರ್ಷದ ಸಿದ್ಧತೆಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಸಿ.ಲಕ್ಷ್ಮಿಕಾಂತ ರೆಡ್ಡಿ ಶುಕ್ರವಾರ ಮೈದಾನಕ್ಕೆ ಭೇಟಿ ನೀಡಿದರು.
ವೇದಿಕೆಯ ಸ್ಥಳ, ವಾಹನ ನಿಲುಗಡೆಯ ಬಗ್ಗೆ ಚರ್ಚಿಸಿದರು. ಎಂಡಿಎ ಆಯುಕ್ತ ರಕ್ಷಿತ್ ಸಿದ್ಧತೆಯ ಬಗ್ಗೆ ವಿವರಣೆ ನೀಡಿದರು. ಎಸ್‌ಪಿ ಎನ್.ವಿಷ್ಣುವರ್ಧನ್ ಸಂಚಾರ ವ್ಯವಸ್ಥೆ ಹಾಗೂ ಭದ್ರತೆಯ ಕುರಿತು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.