ದಸರಾ ಮಹೋತ್ಸವ ಅಂಗವಾಗಿ ಚಾಮುಂಡಿ ಬೆಟ್ಟದ ಮೇಲೆ ಇರುವ ಮಹಿಷಾಸುರ ಪ್ರತಿಮೆ ಸಿದ್ಧವಾಗಿರುವುದು.
ಪ್ರಜಾವಾಣಿ ಚಿತ್ರ : ಅನೂಪ್ ಆರ್. ತಿಪ್ಪೇಸ್ವಾಮಿ.
ಮೈಸೂರು: ನಗರದ ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಸೆ.23ರ ಮಧ್ಯರಾತ್ರಿ 12 ರಿಂದ ಸೆ.25ರ ಬೆಳಗ್ಗೆ 6 ಗಂಟೆಯವರೆಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ನೇತೃತ್ವದಲ್ಲಿ ಸಾಹಿತಿಗಳು ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಸೆ.24ರ ಬೆಳಗ್ಗೆ 9.30ಕ್ಕೆ ಮಾಲಾರ್ಪಣೆ ಮಾಡಿ, ನಂತರ ಬೆಳಗ್ಗೆ 11ಕ್ಕೆ ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
'ಕೆಲವು ಸಂಘ- ಸಂಸ್ಥೆಯವರು ಮಹಿಷಾ ದಸರಾ ಆಚರಣೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅದೇ ದಿನ ಪ್ರತಿಭಟನೆ ನಡೆಸುವ ಮಾಹಿತಿ ಇದೆ. ಮಹಿಷಾ ದಸರಾ ಆಚರಣೆ ವಿಚಾರದಲ್ಲಿ ಎರಡು ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತದೆ. ಅಲ್ಲದೆ, ವಿವಿಧ ಹಿಂದೂಪರ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುತ್ತದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ನಾಡಹಬ್ಬ ದಸರಾ ಹಿನ್ನಲೆಯಲ್ಲಿ ದೇಶ- ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಾಮುಂಡಿಬೆಟ್ಟದಲ್ಲಿ ವಾಸಿಸುವವರಿಗೆ ಅನ್ವಯಿಸದಂತೆ ಮಹಿಷಾಸುರನ ಪ್ರತಿಮೆ ಸುತ್ತಲೂ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಘೋಷಿಸಿಲಾಗಿದೆ' ಎಂದು ಆಯುಕ್ತರು ತಿಳಿಸಿದ್ದಾರೆ.
'ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಹಾಗೂ ಸಭೆ ಸಮಾರಂಭ ಮೆರವಣಿಗೆ, ಪ್ರತಿಭಟನೆ, ರ್ಯಾಲಿ ನಡೆಸಲು ಪ್ರಯತ್ನಿಸಿದಲ್ಲಿ ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.