ADVERTISEMENT

ಮೈಸೂರು: ಕಾರ್ಮಿಕ ವಿರೋಧಿ ನಿರ್ಧಾರ ಹಿಂಪಡೆಯಲು ಪ್ರತಿಭಟನೆ

ಕಾರ್ಮಿಕ ಸಂಘಟನೆಗಳಿಂದ ಜಾಥಾ, ಪ್ರತಿಭಟನಾ ಸಭೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:26 IST
Last Updated 10 ಜುಲೈ 2025, 2:26 IST
ಮೈಸೂರಿನ ಗಾಂಧಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಿಲುವು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಎಸ್‌ಟಿಯು) ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಜಾಥಾ ನಡೆಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಗಾಂಧಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಿಲುವು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಎಸ್‌ಟಿಯು) ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಜಾಥಾ ನಡೆಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಿಲುವು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಎಸ್‌ಟಿಯು) ಕರೆ ನೀಡಿರುವ ಮುಷ್ಕರ ಬೆಂಬಲಿಸಿ ನಗರದಲ್ಲಿ ಕಾರ್ಮಿಕ ಸಂಘಟನೆಗಳು ಜಾಥಾ ನಡೆಸಿ, ಪ್ರತಿಭಟನಾ ಸಭೆ ನಡೆಸಿದವು.

ಗಾಂಧಿ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಜಮಾಯಿಸಿದ ಸಂಘಟನೆಗಳ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘12 ಗಂಟೆ ಕೆಲಸದ ನಿರ್ಧಾರ ಹಿಂಪಡೆಯಿರಿ’, ‘ಕಾರ್ಮಿಕ ವಿರೋಧಿ ಕಾನೂನು ಜಾರಿಯಾಗಲು ಬಿಡುವುದಿಲ್ಲ’, ‘ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಿರಿ’ ಇತ್ಯಾದಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ವೃತ್ತದ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಬಾಲಾಜಿ ರಾವ್‌ ಮಾತನಾಡಿ, ‘ಕೇಂದ್ರ ಸರ್ಕಾರವು ಬಂಡವಾಳಗಾರರ ಪರವಾಗಿದ್ದು ಕಾರ್ಮಿಕರ ಕಾನೂನು ತಿದ್ದುಪಡಿ ಮಾಡಿದೆ. ಅದನ್ನು ಬಳಸಿ ಕಾರ್ಖಾನೆಗಳು ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿವೆ. ಈ ಧೋರಣೆ ನಿಲ್ಲಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೆಲಸದ ಅವಧಿ ಹಿಂದಿನಂತೇ 8 ಗಂಟೆಯಷ್ಟೇ ಇರಬೇಕು, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು, ಇನ್ನಿತರೆ ಹಕ್ಕುಗಳನ್ನು ಕಸಿಯುವ ಪ್ರಯತ್ನ ಕೈಬಿಡಬೇಕು. ಎಲ್ಲಾ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಂ ನೌಕರರಿಗೆ ರಾಷ್ಟ್ರವ್ಯಾಪಿ ₹26 ಸಾವಿರ, ರಾಜ್ಯವ್ಯಾಪಿ ₹36 ಸಾವಿರ ಕನಿಷ್ಠ ವೇತನ ನಿಗದಿ ಪಡಿಸಬೇಕು. ಮನೆ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ಟೈಲರ್‌ಗಳಿಗೆ ಮಾಸಿಕ ಕನಿಷ್ಠ ₹9 ಸಾವಿರ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ವಿವಿಧ ಕಾರ್ಮಿಕ ಸಂಘಟನೆ ಮುಖಂಡರಾದ ಚಂದ್ರಶೇಖರ ಮೇಟಿ, ಎನ್‌.ಕೆ.ದೇವದಾಸ್‌, ಎಚ್.ಎಂ. ಬಸವರಾಜು, ಸೋಮರಾಜ ಅರಸ್, ಯಶೋಧರ್, ದಸಂಸ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆನಂದ್‌, ಎಚ್.ಎಸ್.ಚಂದ್ರಶೇಖರ್ ಭಾಗವಹಿಸಿದ್ದರು.

ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಜಾಥಾ

ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಗೆ ಮೊದಲು ಕಾರ್ಮಿಕ ಸಂಘಟನೆ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ಅಂಗನವಾಡಿ ಆಶಾ ಕಾರ್ಯಕರ್ತೆಯರು ವಿಕ್ರಾಂತ್ ಟೈರ್ ಎಸ್.ಕೆ.ಎಫ್ ಟೆಕ್ನೊಲಜಿಸ್ ಇನ್ಸೂರೆನ್ಸ್‌ ಕಾರ್ಪೋರೇಷನ್‌ ನೌಕರರ ಸಂಘಟನೆ ದಿನಗೂಳಿ ನೌಕರರು ಮೈಸೂರು ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಸದಸ್ಯರ ಸಹಿತ ವಿವಿಧ ಸಂಘಟನೆಯ ನೂರಾರು ಸದಸ್ಯರು ಜಾಥಾದಲ್ಲಿ ಹೆಜ್ಜೆ ಹಾಕಿದರು. ಗಾಂಧಿವೃತ್ತದಿಂದ ಹೊರಟ ಜಾಥಾವು ಕೆ.ಟಿ. ರಸ್ತೆ ಇರ್ವಿನ್ ರಸ್ತೆ ಮಕ್ಕಾಜಿ ಚೌಕದ ಮೂಲಕ ಸಾಗಿ ಗಾಂಧಿ ವೃತ್ತಕ್ಕೆ ಬಂದು ಸೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.