ADVERTISEMENT

ಮೈಸೂರು | ಅರ್ಧ ಜೀವವಾದ ಪುರಭವನ; ಬೀಳುವ ಹಂತದಲ್ಲಿ ಪಾರಂಪರಿಕ ಕಟ್ಟಡದ ಒಂದು ಭಾಗ

ಮೋಹನ್ ಕುಮಾರ ಸಿ.
Published 30 ಜುಲೈ 2025, 8:02 IST
Last Updated 30 ಜುಲೈ 2025, 8:02 IST
ಮೈಸೂರಿನ ರಂಗಾಚಾರ್ಲು ಪುರಭವನದ ಬಲಭಾಗವು ಕುಸಿಯುವ ಹಂತದಲ್ಲಿದ್ದು, ಕಬ್ಬಿಣದ ಕಂಬಿಯಿಂದದ ಬೀಳದಂತೆ ತಡೆಯಲಾಗಿದೆ –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ರಂಗಾಚಾರ್ಲು ಪುರಭವನದ ಬಲಭಾಗವು ಕುಸಿಯುವ ಹಂತದಲ್ಲಿದ್ದು, ಕಬ್ಬಿಣದ ಕಂಬಿಯಿಂದದ ಬೀಳದಂತೆ ತಡೆಯಲಾಗಿದೆ –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ಅದು ಕಲ್ಯಾಣಿ ಮೈದಾನ. 18ನೇ ಶತಮಾನದಲ್ಲಿ ದೊಡ್ಡಪೇಟೆ ಎಂದೇ ಕರೆಯಲಾಗುತ್ತಿದ್ದ ಅಶೋಕ ರಸ್ತೆಗೆ ಹೊಂದಿಕೊಂಡ ಜಾಗವದು. ನಾಟಕ, ಸಂಗೀತ ಕಛೇರಿಗಳು ನಡೆಯುತ್ತಿದ್ದ ಈ ಮೈದಾನದಲ್ಲಿ ‍ಶಾಶ್ವತವಾದ ಥಿಯೇಟರ್ ಬೇಕೆಂದು ನಿರ್ಧರಿಸಿದ ಮೈಸೂರಿಗರು, ತಮ್ಮ ಬೆವರ ಹಣದಿಂದ ಕಟ್ಟಿಸಿದ ಭವನವೇ ‘ರಂಗಾಚಾರ್ಲು ಪುರಭವನ’! 

‘ಸಾಂಸ್ಕೃತಿಕ ನಗರಿ’ ಎಂದು ಮೈಸೂರು ಇಂದು ಕರೆಸಿಕೊಳ್ಳುತ್ತಿದ್ದರೆ ಒಡೆಯರ ಜೊತೆಗೆ ಈ ‘ಪುರಭವನ’ಕ್ಕೆ ಶ್ರೇಯ ತುಸು ಹೆಚ್ಚೇ ಸಿಗಬೇಕು. ಜನರ ನಿಧಿಗೆ ತಮ್ಮ ಕಾಣ್ಕೆ ಸೇರಿಸಿದ ಹತ್ತನೇ ಚಾಮರಾಜ ಒಡೆಯರ್, ಏ.1, 1884ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕರ್ನಾಟಕ ಕಲಾಮಂದಿರ ನಿರ್ಮಾಣ ಆಗುವವರೆಗೆ ವೃತ್ತಿ ರಂಗಭೂಮಿಯ ನಾಟಕಗಳು, ಸಂಗೀತ ಕಛೇರಿಗಳು ನಡೆಯುತ್ತಿದ್ದದ್ದು ಇಲ್ಲೇ. ಇಂಥ 141 ವರ್ಷದ ಐತಿಹಾಸಿಕ ಪಾರಂಪರಿಕ ಕಟ್ಟಡವು ಇದೀಗ ಅರ್ಧ ಜೀವವಾಗಿದೆ. 

2022ರಲ್ಲಿ ಮಹಾರಾಣಿ ಕಾಲೇಜು ಕಟ್ಟಡ ಬಿದ್ದಂತೆಯೇ ‍ಪುರಭವನ ಉರುಳಲು ಸಿದ್ಧವಾಗಿದ್ದು, ದೊಡ್ಡ ಮಳೆಯ ಸಿಡಿಲೊಂದಕ್ಕೆ ಕಾಯುತ್ತಿದೆ. ವೇದಿಕೆಯ ಬಲಭಾಗದ ಕಟ್ಟಡದ ಕಾರಿಡಾರ್‌ನ ಮರ ತೀರುಗಳಿಗೆ ಕಬ್ಬಿಣದ ಕಂಬಿಗಳು ಆಸರೆಯಾಗಿ ನಿಲ್ಲಿಸಲಾಗಿದೆ. ಅದರಿಂದ ಕಟ್ಟಡ ಉಸಿರಾಡುತ್ತಿದೆಯಷ್ಟೇ. 

ADVERTISEMENT

ಅರ್ಧ ಜೀವ ಮಾಡಿದ ವ್ಯವಸ್ಥೆಯ ಬಗ್ಗೆ ಕಲಾವಿದರು, ಪೌರಾಣಿಕ ನಾಟಕಾಭಿಮಾನಿಗಳು ಹಾಗೂ ಇತಿಹಾಸ ತಜ್ಞರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ಬಿದ್ದ ಮೇಲೆ ಬರುತ್ತಾರೆ: ‘ಕಳೆದ ವರ್ಷ ಹೇಗಿತ್ತೋ ಅದೇ ಶಿಥಿಲ ಸ್ಥಿತಿಯಲ್ಲಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಿದ್ದ ಮೇಲೆ ವೀಕ್ಷಿಸಲು ಬರುತ್ತಾರಷ್ಟೇ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು.

‘ಪ್ರವಾಸೋದ್ಯಮ ಬೆಳೆಯಬೇಕು ಎನ್ನುವ ಜನಪ್ರತಿನಿಧಿಗಳು ಪಾರಂಪರಿಕ ಕಟ್ಟಡಗಳನ್ನು ಬೀಳಿಸಿ, ಹೊಸದಾಗಿ ಕಟ್ಟಬೇಕೆಂದೂ ಹೇಳುತ್ತಾರೆ. ಇಂಥವರಿದ್ದಾಗ ಯಾರಿಗೆ ಏನು ಹೇಳಿ ಪ್ರಯೋಜನ. ಬರೀ ನಮ್ಮದು ಅರಣ್ಯ ರೋಧನ. ಮೈಸೂರಿನ ಒಂದೊಂದೇ ಸ್ಮೃತಿಯನ್ನು ಅಳಿಸುವ ಯತ್ನ ನಡೆದಿದೆ. ಸಂಘಟನೆಗಳು ಸತ್ತು ಹೋಗಿವೆ. ಮೊದಲು ಲ್ಯಾನ್ಸ್‌ಡೌನ್‌ ಕಟ್ಟಡ ಮುಚ್ಚಿದರು. ಇದೀಗ ದೇವರಾಜ ಮಾರುಕಟ್ಟೆ ಒಡೆಯುವುದನ್ನೇ ನೋಡುತ್ತಿದ್ದಾರೆ. ಅದಕ್ಕೂ ಮೊದಲು ಪುರಭವನವೇ ಆ ಸಾಲಿಗೆ ಸೇರಲಿದೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಬೇಸರ ವ್ಯಕ್ತಪಡಿಸಿದರು. 

‘ಮಹಾತ್ಮ ಗಾಂಧೀಜಿ, ರವೀಂದ್ರನಾಥ ಟ್ಯಾಗೋರ್ ಇಲ್ಲಿಗೆ ಎರಡು ಬಾರಿ ಬಂದಿದ್ದರು. ಸ್ವಾತಂತ್ರ್ಯ ಚಳವಳಿ ಸೇರಿದಂತೆ ಕನ್ನಡ ನಾಡನ್ನು ಕಟ್ಟಿದ ಮೈಸೂರು ಚಲೋ, ರೈತ, ಪ್ರಗತಿಪರ ಹಾಗೂ ಗೋಕಾಕ್ ಚಳವಳಿಗಳಿಗೆ ಪುರಭವನದ ಅಂಗಳವು ವೇದಿಕೆಯಾಗಿತ್ತು. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ರಾಜ್‌ಕುಮಾರ್, ಪೃಥ್ವಿರಾಜ್‌ ಕಪೂರ್ ಇಲ್ಲಿ ನಾಟಕವಾಡಿದ್ದಾರೆ. ಆಳುವವರಿಗೆ ಇದರ ಸಂರಕ್ಷಣೆಗಾಗಿ ಇದಕ್ಕಿಂತ ದೊಡ್ಡ ಕಾರಣವೇನು ಬೇಕು’ ಎಂದು ಪ್ರಶ್ನಿಸಿದರು.

ದಿವಾನ್ ರಂಗಾಚಾರ್ಲು (ಪುರಭವನದ ಶತಮಾನೋತ್ಸವದಲ್ಲಿ ಪಾಲಿಕೆ ಪ್ರಕಟಿಸಿದ್ದ ಪುಸ್ತಕದಲ್ಲಿ) 
ಈಗಾಗಲೇ ಭೇಟಿ ನೀಡಿ ಶಿಥಿಲಗೊಂಡ ಭಾಗವನ್ನು ಪರಿಶೀಲಿಸಲಾಗಿದೆ. ಸಂರಕ್ಷಣೆಗೆ ಅಗತ್ಯ ಕ್ರಮವನ್ನು ಶೀಘ್ರ ತೆಗೆದುಕೊಳ್ಳುವೆ
ಶೇಖ್‌ ತನ್ವೀರ್ ಆಸೀಫ್‌ ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.