ಎಚ್.ಡಿ.ಕೋಟೆ: ‘ಪಟ್ಟಣದ ಶಿವಾಜಿ ರಸ್ತೆ ತೀವ್ರ ಹದಗೆಟ್ಟಿದ್ದು ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಸಂಪೂರ್ಣ ಹೊಂಡ, ತಗ್ಗುಗಳಿಂದ ಭರ್ತಿಯಾಗಿದ್ದು, ಮಳೆಗಾಲದ ನೀರೂ ನಿಂತು ಹಳ್ಳದಲ್ಲಿ ಸಾಗುವಂತಾಗಿದೆ.
ಬೆಳಗನಹಳ್ಳಿ ರಸ್ತೆ, 2ನೇ ಮುಖ್ಯ ರಸ್ತೆ, ಕಾಳಿದಾಸ ರಸ್ತೆಗಳಲ್ಲೂ ಗುಂಡಿ ನಿರ್ಮಾಣವಾಗಿವೆ. ಕೆಲ ಗುಂಡಿಗಳು ಬೈಕ್ ಸವಾರರಿಗಂತೂ ದೊಡ್ಡ ಸವಾಲಾಗಿದ್ದು, ಪಾದಾಚಾರಿಗಳ ಮೈಮೇಲೂ ಕೆಸರು ಎರಚುತ್ತಿವೆ. ವಾಹನ ದಟ್ಟಣೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹತ್ತಾರು ವರ್ಷಗಳಿಂದ ರಸ್ತೆ ದುರಸ್ತಿ ಕಾಮಗಾರಿಗಳು ನಡೆಯದಿರುವುದು ಸಮಸ್ಯೆಯನ್ನು ತೀವ್ರವಾಗಿಸಿದೆ.
ಶಾಲಾ–ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ‘ರಸ್ತೆಯ ಹೆಸರಿನಲ್ಲಿ ಕೊಳಚೆ ನೀರಿನಲ್ಲಿಯೇ ಸಂಚಾರ ಮಾಡಬೇಕೇ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ರಸ್ತೆ ಆಕ್ರಮಿಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿ ತೆರಳುವಂತಾಗಿದೆ. ವೇಗವಾಗಿ ಬರುವ ವಾಹನಗಳಿಂದ ಜೀವ ಕೈಯಲ್ಲಿಡಿದು ಸಂಚರಿಸಬೇಕಾಗಿದೆ’ ಎಂದು ನಿವೃತ್ತ ಬ್ಯಾಂಕ್ ನೌಕರ ವೀರಪ್ಪ ಆತಂಕ ವ್ಯಕ್ತಪಡಿಸಿದರು.
‘ಪಟ್ಟಣದ ರಸ್ತೆಯಲ್ಲಿ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದೂ ಪಾದಾಚಾರಿಗಳ ಸಂಚಾರಕ್ಕೆ ತೊಡಕಾಗಿದೆ. ಮೂಲ ಸೌಕರ್ಯ ಕಲ್ಪಿಸುವತ್ತ ಯಾರು ಗಮನಹರಿಸುತ್ತಿಲ್ಲ’ ಎಂದು ಹಿರಿಯ ನಾಗರಿಕ ಸಿ.ಎನ್.ನಾಗಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಶಿವಾಜಿ ರಸ್ತೆ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರಲಿದ್ದು ದುರಸ್ತಿಗೆ ₹12 ಲಕ್ಷ ಕಾಯ್ದಿರಿಸಲಾಗಿದ್ದು ಮಳೆ ನಿಂತ ನಂತರ ಕಾರ್ಯಾರಂಭಗೊಳ್ಳಲಿದೆ
- ಪಿ. ಸುರೇಶ್ ಮುಖ್ಯಾಧಿಕಾರಿ ಪುರಸಭೆ ಎಚ್.ಡಿ.ಕೋಟೆ
ಶಾಸಕರ ಸೂಚನೆಗೂ ಬೆಲೆಯಿಲ್ಲ ಈಚೆಗೆ ನಡೆದ ಕೆ.ಡಿ.ಪಿ.ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್ ಅವರಿಗೆ ವಾಹನ ನಿಲುಗಡೆ ವ್ಯವಸ್ಥೆ ಮಾಡುವಂತೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ ನೀಡಿದ್ದರೂ ಯಾವುದೇ ಬದಲಾವಣೆ ಕಂಡಿಲ್ಲ. ಇತರ ವ್ಯವಸ್ಥೆಗಳಲ್ಲೂ ಸುಧಾರಣೆಯಾಗಿಲ್ಲ. ‘ಅನುದಾನ ದೊರೆತ ಕೂಡಲೇ ರಸ್ತೆಯನ್ನು ಉತ್ತಮಗೊಳಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈಗ ಅನುದಾನ ಇಲ್ಲದೆ ಇರುವುದರಿಂದ ತಡವಾಗಿದೆ’ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.