ADVERTISEMENT

ಸೂಫಿ ಸಂಗೀತದ ಹೊನಲು: ಬಿಸಿಯೇರಿದ ಚರ್ಚೆ, ಪರಿಸರದ ಕಥೆ...

2 ದಿನಗಳ ಮೈಸೂರು ಸಾಹಿತ್ಯ ಸಂಭ್ರಮಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 20:07 IST
Last Updated 24 ಜುಲೈ 2022, 20:07 IST
ಮೈಸೂರಿನಲ್ಲಿ ಭಾನುವಾರ ನಡೆದ ‘ಮೈಸೂರು ಸಾಹಿತ್ಯ ಸಂಭ್ರಮ–2022’ರ ಗೋಷ್ಠಿಯಲ್ಲಿ 1983ರ ವಿಶ್ವಕಪ್‌ ರೋಚಕ ಕ್ಷಣಗಳ ಕುರಿತು ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಮಾತನಾಡಿದರು  – ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಭಾನುವಾರ ನಡೆದ ‘ಮೈಸೂರು ಸಾಹಿತ್ಯ ಸಂಭ್ರಮ–2022’ರ ಗೋಷ್ಠಿಯಲ್ಲಿ 1983ರ ವಿಶ್ವಕಪ್‌ ರೋಚಕ ಕ್ಷಣಗಳ ಕುರಿತು ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಮಾತನಾಡಿದರು  – ಪ್ರಜಾವಾಣಿ ಚಿತ್ರ   

ಮೈಸೂರು: ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಅವರ ‘1983ರ ಕ್ರಿಕೆಟ್‌ ವಿಶ್ವಕಪ್‌’ನ ರೋಚಕ ಕ್ಷಣಗಳ ಹಾಸ್ಯಧಾಟಿಯ ವಿವರಣೆ, ರಾಜಕಾರಣದ ವಿಷಯದಲ್ಲಿ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು–ಸಾಗರಿಕಾ ಘೋಷ್‌ ಮಧ್ಯೆ ಬಿಸಿಯೇರಿದ ಚರ್ಚೆ, ಸಂಜಯ್‌ ಗುಬ್ಬಿ ಅವರ ಪರಿಸರದ ಕಥೆಗೆ ಸಾಹಿತ್ಯಪ್ರಿಯರು ಸಾಕ್ಷಿಯಾದರು.

ಇಲ್ಲಿನ ಸದರ್ನ್‌ ಸ್ಟಾರ್‌ ಹೋಟೆಲ್‌ನಲ್ಲಿ ಭಾನುವಾರ ‘ಮೈಸೂರು ಸಾಹಿತ್ಯ ಸಂಭ್ರಮ’ಕ್ಕೆ ‘ಅಪರ್ಯಾಪ್ತ’ ತಂಡದ ಸೂಫಿ ಗಾಯನ ಹಾಗೂ ಮಕ್ಕಳ ಸಂವಾದದೊಂದಿಗೆ ತೆರೆಬಿತ್ತು. ದಿನವಿಡೀ ನಡೆದ ವಿವಿಧ ಗೋಷ್ಠಿಗಳಲ್ಲಿ ಕ್ರಿಕೆಟ್‌–ರಾಜಕಾರಣ–ಸಾಹಿತ್ಯ–ಸಂಗೀತದ ಹೂರಣದ ಸವಿ ಎಲ್ಲರದ್ದಾಗಿತ್ತು.

‘ಯೆಸ್‌, ಪ್ರೈಮ್‌ ಮಿನಿಸ್ಟರ್‌’ ಸಂವಾದದಲ್ಲಿ ಮಾತನಾಡಿದ ಸಾಗರಿಕಾ ಘೋಷ್‌, ‘50 ವರ್ಷ ಸಂಸದರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಆರ್‌ಎಸ್‌ಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ರಾಜಕಾರಣಿ. ಗುಜರಾತ್‌ ಗಲಭೆಯಾದಾಗ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸಲು ಸೂಚಿಸಿದ್ದರು. ನರಸಿಂಹರಾವ್‌ ಅವರ ಆರ್ಥಿಕ ನೀತಿಗಳನ್ನು ಮುಂದುವರಿಸಿದ್ದರು. ಹೀಗಾಗಿಯೇ ಸಂಘ ಪರಿವಾರ ಅವರನ್ನು ವಿರೋಧಿಸುತ್ತಿತ್ತು’ ಎಂದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ ಸುಗತ ಶ್ರೀನಿವಾಸರಾಜು, ‘ಮಾನವೀಯತೆ, ಭಾಷಣ ಚಾತುರ್ಯವೆಲ್ಲವೂ ವಾಜಪೇಯಿ ವ್ಯಕ್ತಿತ್ವವಾಗಿದೆ. ಆದರೆ, ಆರ್‌ಎಸ್‌ಎಸ್‌ ಸಿದ್ಧಾಂತದಿಂದ ಪ್ರೇರಿತವಾಗಿದ್ದ ಅವರೆಂದಿಗೂ ಮಾತೃ ಸಂಸ್ಥೆಯನ್ನು ಬಿಟ್ಟು ಕೊಟ್ಟಿರಲಿಲ್ಲ. ಚರಣ್‌ಸಿಂಗ್‌, ಚಂದ್ರಶೇಖರ್‌, ವಿ.ಪಿ.ಸಿಂಗ್‌, ಎಚ್‌.ಡಿ.ದೇವೇಗೌಡ ಸೂಕ್ಷ್ಮ ಅರ್ಥಶಾಸ್ತ್ರತಜ್ಞರು. ಅವರ ಕೊಡುಗೆಗಳನ್ನು ಯಾರೂ ಸ್ಮರಿಸದಿರುವುದು ವಿಪರ್ಯಾಸ. ‌ಟಿಪ್ಪು ಸುಲ್ತಾನ್‌ನಂತೆ ದೇವೇಗೌಡರನ್ನೂ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ತಮ್ಮ ಧಾರ್ಮಿಕ ಶ್ರದ್ಧೆಯನ್ನು ರಾಜಕಾರಣಕ್ಕೆ ಅವರೆಂದೂ ಬಳಸಿಕೊಂಡಿಲ್ಲ’ ಎಂದು ಪ್ರತಿಪಾದಿಸಿದರು.

‘ದೇವೇಗೌಡ ಅಧಿಕಾರದಲ್ಲಿದ್ದದ್ದು ಕೆಲವೇ ವರ್ಷಗಳಷ್ಟೇ. ಆದರೆ, ಅವರನ್ನು ಬಾಂಗ್ಲಾ, ಕಾಶ್ಮೀರ, ಪಂಜಾಬ್‌ನ ಜನರು ನಿತ್ಯ ಸ್ಮರಿಸುತ್ತಾರೆ. ಮಾಸ್‌ ಲೀಡರ್‌ಗಳ ಮಾಸ್‌ ಲೀಡರ್‌ ದೇವೇಗೌಡ. ಹೀಗಾಗಿಯೇ ಅವರನ್ನು ಮುಖ್ಯಮಂತ್ರಿ, ಪ್ರಧಾನಿ ಹುದ್ದೆಗಳಿಗೆ ಬಿಜು ಪಟ್ನಾಯಕ್‌ ಸೂಚಿಸಿದ್ದರು’ ಎಂದರು. ರವಿ ಜೋಶಿ ಸಂವಾದ ನಡೆಸಿಕೊಟ್ಟರು.

‘ನೆನಪು ಅನಂತ’ ಬಿಡುಗಡೆ: ಎಸ್ತರ್‌ ಅನಂತಮೂರ್ತಿ ಅವರ ‘ನೆನಪು ಅನಂತ’ ಕೃತಿಯನ್ನು ಪ್ರೊ.ವಿ.ಕೆ.ನಟರಾಜ್‌ ಬಿಡುಗಡೆ ಮಾಡಿದರು. ಇತಿಹಾಸಕಾರ ಡಾ.ಪೃಥ್ವಿದತ್ತ ಚಂದ್ರ ಶೋಭಿ ಸಂವಾದ ನಡೆಸಿಕೊಟ್ಟರು.

‘ಕಪಿಲ್‌ನನ್ನು ಹುಚ್ಚ ಎಂದಿದ್ದೆವು’

‘1983ರ ವಿಶ್ವಕಪ್‌ ವಿಜಯದ ಜೀವನಪಾಠಗಳು’ ಕುರಿತ ಗೋಷ್ಠಿಯಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್‌, ‘ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ ಕ್ರಿಕೆಟ್‌ ಲೀಗ್‌ನ ಮೊದಲ ಪಂದ್ಯವನ್ನೆ ಗೆಲ್ಲುತ್ತೇವೆಂದು ಕಪಿಲ್‌ ದೇವ್‌ ಹೇಳಿದಾಗ ನಾವೆಲ್ಲ ಹುಚ್ಚನೆಂದು ಕರೆದಿದ್ದೆವು. ಆದರೆ, ಆ ಒಂದು ಗೆಲುವಿಂದ ಸಿಕ್ಕ ಆತ್ಮವಿಶ್ವಾಸ ಭಾರತದ ಕ್ರಿಕೆಟ್‌ ದಿಕ್ಕನ್ನು ಬದಲಿಸಿತು’ ಎಂದರು.

‘ಗುರಿಯನ್ನು ಬೆಂಬತ್ತುವ ಛಲವನ್ನು ಕಪಿಲ್‌ದೇವ್‌, ವಿರಾಟ್‌ ಕೊಹ್ಲಿ ಅವರಿಂದ ಕಲಿಯಬೇಕು. ಕ್ರಿಕೆಟ್‌ ದಿಗ್ಗಜರೆಲ್ಲ ಮೊದಲ ದಿನಗಳಲ್ಲಿ ಜನಸಾಮಾನ್ಯರಂತೆ ಬಸ್‌, ರೈಲುಗಳಲ್ಲಿ ಓಡಾಡಿದ್ದಾರೆ. ಉಚಿತವಾಗಿ ಊಟ ಸಿಗುತ್ತದೆಂದರೆ ಆಗೆಲ್ಲ ನಾವೂ ದೌಡಾಯಿಸಿದ್ದೇವೆ. ನಡೆದು ಬಂದ ದಾರಿಯನ್ನು ಮರೆಯಬಾರದು’ ಎಂದು ಶ್ರೀಕಾಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.