ADVERTISEMENT

ಮೈಸೂರು | ನ್ಯೂನತೆ ಮರೆಸಿದ ಸಾಂಸ್ಕೃತಿಕ ಸಂಜೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 3:55 IST
Last Updated 17 ಫೆಬ್ರುವರಿ 2026, 3:55 IST
ಮೈಸೂರಿನ ಕಿರುರಂಗಮಂದಿರದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮರ್ಥನಂ ಸಂಸ್ಥೆಯ ಗುರು ರಾಘವೇಂದ್ರ ಮಾತನಾಡಿದರು  ಪ್ರಜಾವಾಣಿ ಚಿತ್ರ
ಮೈಸೂರಿನ ಕಿರುರಂಗಮಂದಿರದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮರ್ಥನಂ ಸಂಸ್ಥೆಯ ಗುರು ರಾಘವೇಂದ್ರ ಮಾತನಾಡಿದರು  ಪ್ರಜಾವಾಣಿ ಚಿತ್ರ   

ಮೈಸೂರು: ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ನೃತ್ಯ, ನಾಟಕಗಳ ಪರಿಪಕ್ವತೆ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿತು. ನೆರೆದಿದ್ದವರ ಚಪ್ಪಾಳೆಯು ಮಕ್ಕಳ ಉತ್ಸಾಹ ಇಮ್ಮಡಿಗೊಳಿಸಿತು.

ಸಮರ್ಥನಂ ಅಂಗವಿಕಲರ ಸಂಸ್ಥೆಯು ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಕಲಚೇತನರಿಗಾಗಿ ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಸಿನಿ ಗೀತೆಗಳಿಗೆ ಮಕ್ಕಳು ಹೆಜ್ಜೆ ಹಾಕುತ್ತಿದ್ದಾಗ, ಪೋಷಕರ ಕಣ್ಣಂಚಿನಲ್ಲಿ ನೀರು ಜಿನುಗಿತು. ತಾಯಿ, ಮಗುವಿನ ಭಾವನಾತ್ಮಕ ಕ್ಷಣಗಳಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.

ಮಾರ್ಕ್‌ ಚಲನಚಿತ್ರದ ಸೈಕೊ ಸೈತಾನ್‌, ಉಪೇಂದ್ರ ಅಭಿನಯದ ಸೂಪರ್‌ ರಂಗ ಸಿನಿ ಗೀತೆಗಳಿಗೆ ಭರ್ಜರಿ ಸ್ಟೆಪ್‌ ಹಾಕಿದರು. ಸಮರ್ಥನಂ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಗೀತ ಗಾಯನ ಕಾರ್ಯಕ್ರಮವು ಕಿವಿ ಇಂಪಾಗಿಸಿತು. ಚಾರುಸ್ಮತಾ ಅವರು ಭರತನಾಟ್ಯದ ಮೂಲಕ ಮನಗೆದ್ದರು.

ADVERTISEMENT

ಮರ್ಸಿ ಕಿವುಡ ಮತ್ತು ಮೂಗ ಮಕ್ಕಳ ಶಾಲೆ, ಪುಟ್ಟವೀರಮ್ಮ ಕಿವುಡು ಬಾಲಕಿಯರ ವಸತಿ ಶಾಲೆ, ಮೌಂಟ್‌ ಪೋರ್ಟ್‌ ವಿಶೇಷ ಶಾಲೆ, ಸಮರ್ಥನಂ ಬುದ್ಧಿ ವಿಕಲಚೇತನ ಶಾಲೆ, ಸಾಯಿರಂಗ ವಿದ್ಯಾಸಂಸ್ಥೆಯ ಕಿವುಡು ಮತ್ತು ಮೂಗ ಮಕ್ಕಳ ಶಾಲೆ, ಸರ್ಕಾರಿ ಕಿವುಡು ಮತ್ತು ಮೂಗ ಮಕ್ಕಳ ಶಾಲೆ, ಜೆಎಸ್‌ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ನೀಡಿದ ಪ್ರದರ್ಶನಕ್ಕೆ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಚಿಸಿದರು.

ಶೇಷಾದ್ರಿಪುರಂ ಪದವಿ ಕಾಲೇಜು ವಿದ್ಯಾರ್ಥಿಗಳ ನೃತ್ಯ, ಮೈಸೂರಿನ ಕಲಾವಿದರ ಜನಪದ ಮತ್ತು ರಂಗಗೀತೆ, ಕೆಎಆರ್‌ಪಿ ಮೌಂಟೆಡ್‌ ಕಂಪನಿ (ಪೊಲೀಸ್‌ ಬ್ಯಾಂಡ್‌) ವಾದ್ಯಗೋಷ್ಠಿಯು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಚಾಲನೆ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್‌.ರಾಘವೇಂದ್ರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಮಕ್ಕಳಲ್ಲಿನ ಲೋಪ ಗುರುತಿಸಿ, ಅವರನ್ನು ಮುಖ್ಯಭೂಮಿಕೆಗೆ ತರುವ ಕೆಲಸವಾಗಬೇಕು. ಅಂಗವಿಕಲರ ಬಗ್ಗೆ ಅನುಕಂಪ ಸೂಚಿಸುವ ಬದಲು ಅವಕಾಶ ನೀಡಬೇಕಿದ್ದು, ಆ ಹಿನ್ನೆಲೆಯಲ್ಲಿ ಸಂಘ– ಸಂಸ್ಥೆಗಳೊಂದಿಗೆ ಇಲಾಖೆಯೂ ಕೆಲಸ ಮಾಡುತ್ತಿದೆ. ಸಮರ್ಥನಂ ಸಂಸ್ಥೆಯು ವಸತಿಯುತ ಶಾಲೆಯೊಂದರ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಅದು ಸಾಕಾರಗೊಳ್ಳಲಿದೆ’ ಎಂದು ಹೇಳಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಟ್ರಸ್ಟಿ ಬೂಸೇಗೌಡ, ಪ್ರಾಂಶುಪಾಲರಾದ ಗೀತಾ, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲರಾದ ಸೌಮ್ಯಾ ಈರಪ್ಪ, ಸಮಾಜ ಸೇವಕ ಶ್ರೀಧರ್ ದೀಕ್ಷಿತ್, ಗುರುರಾಘವೇಂದ್ರ, ದೇವರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.