
ಮೈಸೂರು: ದೆಹಲಿ ಕೆಂಪುಕೋಟೆ ಬಳಿ ಸ್ಫೋಟ ಸಂಭವಿಸಿದ್ದರಿಂದ ನಗರದಲ್ಲಿ ಮಂಗಳವಾರ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ತಪಾಸಣೆಯೂ ನಡೆಯಿತು.
ನಗರದ ಕೇಂದ್ರ ರೈಲು ನಿಲ್ದಾಣ, ಅರಮನೆ, ಬಸ್ ನಿಲ್ದಾಣ, ದೇವರಾಜ ಮಾರುಕಟ್ಟೆ, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ, ದಸರಾ ವಸ್ತು ಪ್ರದರ್ಶನ ಮೈದಾನದಂಥ ಹೆಚ್ಚಿನ ಜನದಟ್ಟಣೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಕಟ್ಟುನಿಟ್ಟಿನ ತಪಾಸಣೆಯನ್ನು ಪೊಲೀಸರು ನಡೆಸಿದರು.
ಪ್ರವಾಸಿ ಸ್ಥಳಗಳ ಪ್ರವೇಶ ದ್ವಾರಗಳಲ್ಲಿ ಹೆಚ್ಚುವರಿಯಾಗಿ ಡಿಎಫ್‌ಎಂಡಿ (ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್) ಹಾಗೂ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಆಯಕಟ್ಟಿನ ಸ್ಥಳಗಳು ಹಾಗೂ ವೃತ್ತಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರ್‌ರಾಜ್ ಅವರು ವಿವಿಧೆಡೆ ಭೇಟಿ ನೀಡಿ ವಾಹನ ಹಾಗೂ ಪ್ರಯಾಣಿಕರ ಸರಕುಗಳನ್ನು ಪರಿಶೀಲಿಸಿದರು.
‘ನಗರ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯೊಂದಿಗೆ 10 ವಿಶೇಷ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಬರುವ ವ್ಯಕ್ತಿಗಳ ಮಾಹಿತಿ ಪರಿಶೀಲಿಸಲಾಗುತ್ತಿದೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.
‘ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಅನುಮಾನಾಸ್ಪದ ವಸ್ತು ಗುರುತಿಸಲು ಎಎಸ್ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದ್ದು, ನಗರದ ಎಲ್ಲಾ ವಸತಿಗೃಹಗಳು, ಹೋಂಸ್ಟೇ, ಹೋಟೆಲ್‌ಗಳಲ್ಲಿ ನಿರಂತರ ತಪಾಸಣೆ ಕೈಗೊಳ್ಳಲಾಗಿದೆ. ನಗರದಲ್ಲಿ ನೆಲೆಸಿದ ಹೊಸಬರು, ಅವರ ಭೇಟಿ ಕಾರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದರು.
‘ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ ಇಡಲಾಗಿದ್ದು, ಅನಗತ್ಯ, ಪ್ರಚೋದನಕಾರಿ ಹಾಗೂ ಶಾಂತಿ ಕದಡುವ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.