ಸಿದ್ದರಾಮಯ್ಯ , ಮುಖ್ಯಮಂತ್ರಿ
ಮೈಸೂರು: ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿ ಐದನೇ ದಿನವಾದ ಶುಕ್ರವಾರ ಮೈಸೂರು ನಗರ ಮತ್ತು ತಾಲ್ಲೂಕು ಕೇಂದ್ರದಲ್ಲಿ ಸಮೀಕ್ಷೆಯು ಆರಂಭವಾಯಿತು. ಉಳಿದ ತಾಲ್ಲೂಕು ಕೇಂದ್ರಗಳಲ್ಲಿ ನೆಟ್‌ವರ್ಕ್ ಸಮಸ್ಯೆ ನಡುವೆಯೇ ಸಮೀಕ್ಷೆ ಮೊದಲ ದಿನದಿಂದ ನಡೆಯುತ್ತಿದೆ.
ನಗರ–ತಾಲ್ಲೂಕು ಪ್ರದೇಶದಲ್ಲಿ ಸಮೀಕ್ಷೆ ಆರಂಭವಾದರೂ, ಆ್ಯಪ್ ಸರ್ವರ್ ಸ್ಪಂದಿಸದಿರುವುದೂ ಸೇರಿ ಹಲವು ಸವಾಲುಗಳ ನಡುವೆಯೇ ಸಮೀಕ್ಷೆದಾರರು ಒಂದೊಂದು ಮನೆಯ ಮುಂದೆಯೂ ಗಂಟೆಗಟ್ಟಲೆ ಕಾದರು. ಸಂಜೆವರೆಗೂ ಬೆರಳೆಣಿಕೆಯಷ್ಟು ಮಂದಿಯ ಸಮೀಕ್ಷೆಯಷ್ಟೇ ಮಾಡಲು ಸಾಧ್ಯವಾಯಿತು.
‘ಮೊದಲ ಮನೆಗೆ ಹೋದಾಗ ಮಾಲೀಕರು ಒಳಗೆ ಬಿಟ್ಟುಕೊಳ್ಳಲಿಲ್ಲ. ಕೆಲವು ತಿಂಗಳ ಹಿಂದೆ ಯಾರೋ ಬಂದು ಏನೇನೋ ಪ್ರಶ್ನೆಗಳನ್ನು ಕೇಳಿ ಹೋಗಿದ್ದರು. ಈಗ ಮತ್ತೆ ಇದು ಯಾಕೆ? 60 ಪ್ರಶ್ನೆಗಳನ್ನು ಮೊದಲು ಕೊಡಿ ಎಂದರು. ಆದರೆ ನಮ್ಮ ಬಳಿಕ ಪ್ರಶ್ನೆಗಳ ಪ್ರತಿ ಇರಲಿಲ್ಲ’ ಎಂದು ಸಮೀಕ್ಷೆದಾರರರೊಬ್ಬರು ಸಾರ್ವಜನಿಕರ ಆಕ್ಷೇಪಗಳ ಬಗ್ಗೆ ಗಮನ ಸೆಳೆದರು.
‘ಇನ್ನೊಂದು ಮನೆಯಲ್ಲಿ ರೇಷನ್ ಕಾರ್ಡ್ ಕೊಡೋಕೆ ಹಿಂದುಮುಂದು ನೋಡಿದರು. ಆಮೇಲೆ ಕೊಟ್ಟರೂ ಫೋಟೋ ಅಪ್‌ಲೋಡ್ ಆಗಲೇ ಇಲ್ಲ’ ಎಂದು ವಿಷಾದಿಸಿದರು. ಇನ್ನೂ ಕೆಲವೆಡೆ ಆ್ಯಪ್‌ನಲ್ಲಿ ಆಧಾರ್ ಮಾಹಿತಿ ದಾಖಲಿಸಲು ಆಗಲಿಲ್ಲ.
‘ಮಾಹಿತಿ ಕೊಡುವವರು ಸಿದ್ದವಾಗಿದ್ದರೂ ಆ್ಯಪ್ ಸ್ಪಂದಿಸದೇ ಗಂಟೆ ಕಟ್ಟಲೆ ಕಾಯಬೇಕಾಯಿತು. ನಾವು ಸಿದ್ದರಿದ್ದರೂ ಸಾರ್ವಜನಿಕರು ಕಾಯುತ್ತಾ ನಿಲ್ಲಲು ಸಿದ್ಧವಿರಲಿಲ್ಲ’ ಎಂದು ಮತ್ತೊಬ್ಬ ಸಮೀಕ್ಷೆದಾರರು ಅಸಹಾಯಕತೆ ವ್ಯಕ್ತಪಡಿಸಿದರು.
ಯುಎಚ್‌ಐಡಿ ಇದ್ದರೂ ಮನೆ ಖಾಲಿ: ‘ಸಿದ್ಧಾರ್ಥನಗರದ ಕೇಂದ್ರೀಯ ವಿದ್ಯಾಲಯದ ಸಮೀಪದ ಬಡಾವಣೆಯಲ್ಲಿ ಮೂರು ಮನೆಗಳಿ ಯುನಿಕ್ ಐಡೆಂಟಿಫಿಕೇಶನ್ ನಂಬರ್ ಉಳ್ಳ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು. ಆದರೆ ಅವುಗಳಲ್ಲಿ ಎರಡು ಮನೆಗಳು ಖಾಲಿ ಇದ್ದವು. ಆಗ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯೇ ಇರಲಿಲ್ಲ’ ಎಂದು ಸಮೀಕ್ಷೆದಾರರು ತಿಳಿಸಿದರು.
‘ಇನ್ನೊಂದು ಮನೆಯಲ್ಲಿ, ಬೇರೆ ಊರಿನಿಂದ ಬಂದು ಬಾಡಿಗೆಗೆ ವಾಸಿಸುತ್ತಿದ್ದವರು ತಮ್ಮ ಮಾಹಿತಿ ನೀಡಲು ನಿರಾಕರಿಸಿದರು’ ಎಂದು ತಿಳಿಸಿದರು. ಕೆಲವೆಡೆ ಸ್ಟಿಕರ್‌ನಲ್ಲಿ ಯುಎಚ್‌ಐಡಿ ನಂಬರ್ ಇದ್ದರೂ, ಸಮೀಕ್ಷೆ ಐಡಿ ಇಲ್ಲದೆ ತೊಂದರೆಯಾಯಿತು.
ಶುಕ್ರವಾರದ ಸಮೀಕ್ಷೆಯ ಪ್ರಗತಿ ಕುರಿತು ಮಾಹಿತಿ ಪಡೆಯಲು ಪಾಲಿಕೆ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ಎಂ.ದಾಸೇಗೌಡ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಮೇಲ್ವಿಚಾರಕರು ಯಾರು? ದೊರೆಯದ ಉತ್ತರ!
ಮೈಸೂರು: ಸಮೀಕ್ಷೆ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯಾರಿಗೆ ಹೇಳಬೇಕು? ಸಮೀಕ್ಷೆಯ ಮೇಲ್ವಿಚಾರಕರು ಯಾರು ಎಂಬ ಪ್ರಶ್ನೆಗೆ ಶುಕ್ರವಾರವೂ ಉತ್ತರ ಸಿಗಲಿಲ್ಲ. ಸಮೀಕ್ಷೆದಾರರಿರುವ ವಾಟ್ಸ್ ಅಪ್ ಗುಂಪುಗಳಲ್ಲಿ ಹಲವರು ಬೆಳಿಗ್ಗೆಯಿಂದ ಸಂಜೆವರೆಗೂ ಈ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ‘ಮೇಲ್ವಿಚಾರಕರು ಕರೆ ಮಾಡುತ್ತಾರೆ’ ಎಂದು ಅಧಿಕಾರಿಗಳು ನೀಡಿದ್ದ ಭರವಸೆಯೂ ಈಡೇರಲಿಲ್ಲ.
ಕರ್ತವ್ಯ ನಿರ್ವಹಿಸುವ ಮತ್ತು ವಾಸವಿರುವ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಿಗೆ ನಿಯೋಜಿಸಬೇಕು ಎಂಬ ಬೇಡಿಕೆಯೂ ಅರಣ್ಯರೋದನವಾಯಿತು. ‘ಗಂಗೋತ್ರಿ ಬಡಾವಣೆಯಲ್ಲಿ ಮನೆ ಇದೆ. ಆದರೆ ಸಮೀಕ್ಷೆ ನಡೆಸಲು ನಜರಾಬಾದ್ ಪ್ರದೇಶಕ್ಕೆ ಹೋಗಬೇಕು. ಮ್ಯೂಚುಯಲ್ ಆಗಿ ಸ್ಥಳ ಬದಲಾಯಿಸಿಕೊಳ್ಳುವ ಅವಕಾಶವೂ ಇಲ್ಲ’ ಎಂದು ಸಮೀಕ್ಷಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಸಮೀಕ್ಷೆದಾರರು ‘ಎದುರಿಸಿದ’ ಸಮಸ್ಯೆಗಳು
ಯುಎಚ್ಐಡಿ ನಮೂದಿಸಿದರೆ ಆ್ಯಂಪ್‌ನಲ್ಲಿ ಸರ್ಚ್ ಪ್ರಕ್ರಿಯೆ ಶುರುವಾ ಗದಿರುವುದು
ಯುಎಚ್ಐಡಿಗೂ ಮನೆಯಲ್ಲಿ ಅಂಟಿಸಿರುವ ಸ್ಟಿಕರ್‌ನಲ್ಲಿರುವ ಯುಹೆಚ್ಐಡಿಗೂ ವ್ಯತ್ಯಾಸವಿರುವುದು
ಮಾಹಿತಿ ನೀಡುವವರ ಆಧಾರ್ ಕಾರ್ಡ್ ಅಥೆಂಟಿಕೇಶನ್‌ಗಾಗಿ ಅಗತ್ಯವಿದ್ದ ಇಕೆವೈಸಿಗೆ ಅಡಚಣೆ
ರೇಷನ್ ಕಾರ್ಡ್ ಇದ್ದರೂ, ಅದು ಚಾಲನೆಯಲ್ಲಿದ್ದರೆ ಮಾತ್ರ ಸಮೀಕ್ಷೆ ಸಾಧ್ಯವಾಗುತ್ತಿರುವುದು
ನಮ್ಮ ಪ್ರದೇಶದ ಮೇಲ್ವಿಚಾರಕರು ಯಾರು ಎಂಬ ಮಾಹಿತಿಯನ್ನೇ ನಮಗೆ ನೀಡಿಲ್ಲ. ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದೂ ಗೊತ್ತಾಗುತ್ತಿಲ್ಲ.–ಸಮೀಕ್ಷೆದಾರರು, ನಜರಾಬಾದ್ ಪ್ರದೇಶ
ಬೆಳಿಗ್ಗೆಯಿಂದ ಸಂಜೆ 4ರವರೆಗೂ ಎರಡು ಮನೆಯ ಸಮೀಕ್ಷೆಯನ್ನಷ್ಟೇ ಮಾಡಲು ಸಾಧ್ಯವಾಯಿತು. ನನಗೆ ನಿಯೋಜಿಸಿದ 240 ಮನೆಗಳ ಸಮೀಕ್ಷೆ ನಡೆಸಲು ಎಷ್ಟು ದಿನ ಬೇಕಾಗುತ್ತದೆಂಬ ಭಯ ಮೂಡಿದೆ.–ಸಮೀಕ್ಷೆದಾರರು, ಮೈಸೂರು ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.