ಹಂಪಾಪುರ: ಭೋಪಾಲ್‌ನಲ್ಲಿ ಡಿ.22ರಂದು ನಡೆಯಲಿರುವ ರಾಷ್ಟ್ರಮಟ್ಟದ ಬಾಲ್ ರಂಗ್ ನೃತ್ಯ ಸ್ಪರ್ಧೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹುಲಿವೇಷ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಒದಗಿ ಬಂದಿರುವುದು ವಿಶೇಷ.
ಮಧ್ಯಪ್ರದೇಶ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಗೆ ಈಗಾಗಲೇ ವಿದ್ಯಾರ್ಥಿಗಳು ಭೋಪಾಲ್‌ನತ್ತ ಪಯಣ ಬೆಳೆಸಿದ್ದಾರೆ.
ಶಾಲಾ ವಿದ್ಯಾರ್ಥಿಗಳಾದ ಆರ್.ನವೀನ್, ಬಿ.ಚಿರಂಜೀವಿ, ಬೀರೇಶ್, ಪಿ.ಹೇಮಂತ್, ಧರ್ಮೇಶ್, ಪಿ.ಪ್ರಜ್ವಲ್, ಎಸ್.ಸಂಜಯ್ ಗೌಡ, ಎಂ.ರವಿಕುಮಾರ್, ಪವನ್, ಎಚ್.ಪಿ.ಮುತ್ತುರಾಜು ಈ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಈ ಪೈಕಿ 8 ವಿದ್ಯಾರ್ಥಿಗಳು ಹುಲಿ ಕುಣಿತ ಪ್ರದರ್ಶನ ನೀಡಲಿದ್ದು, ಉಳಿದ ಇಬ್ಬರು ವಿದ್ಯಾರ್ಥಿಗಳು ವಾದ್ಯ ಸಹಕಾರ ನೀಡಲಿದ್ದಾರೆ.
ಶಾಲೆಯ ಚಿತ್ರಕಲಾ ಶಿಕ್ಷಕಿ ಕೆ.ಸಂಗೀತಾ ಅವರ ಶ್ರಮದಿಂದಾಗಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮುತ್ತಿದೆ.
ಶಾಲೆಯ ವಿದ್ಯಾರ್ಥಿಗಳನ್ನು ಚಿತ್ರಕಲಾ ಸ್ಪರ್ಧೆ, ನೃತ್ಯ ಸೇರಿದಂತೆ ಹಲವಾರು ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದ ಪರಿಣಾಮ ಮಕ್ಕಳು ಇದೀಗ ತಮ್ಮ ಪ್ರತಿಭೆಯನ್ನು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಪ್ರದರ್ಶಿಸುವ ಅವಕಾಶ ಪಡೆದುಕೊಂಡಿದ್ದಾರೆ.
‘ಬೇರೆ ರಾಜ್ಯದಲ್ಲಿ ನಡೆಯುತ್ತಿರುವ ಸ್ಪರ್ಧೆಗೆ ನಮ್ಮ ತಂಡ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಗೆಲ್ಲುವ ಹುಮ್ಮಸ್ಸು ಇಮ್ಮಡಿಗೊಳಿಸಿದೆ’ ಎಂದು ವಿದ್ಯಾರ್ಥಿ ಚಿರಂಜೀವಿ ತಿಳಿಸಿದರು.
‘ಶಾಲೆಗೆ ದೊರೆತ ಕೀರ್ತಿ’
‘ಭೋಪಾಲ್‌ನಲ್ಲಿ ಪ್ರತಿ ವರ್ಷ ಬಾಲ್ ರಂಗ್ ನೃತ್ಯ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಮಕ್ಕಳು ಪಾಲ್ಗೊಳ್ಳುತ್ತಾರೆ. ಮಕ್ಕಳಲ್ಲಿ ರಾಷ್ಟ್ರೀಯ ಏಕತೆಯ ಮನೋಭಾವ ಮೂಡಿಸುವುದು ವಿವಿಧ ರಾಜ್ಯಗಳ ಸಂಸ್ಕೃತಿ ಪರಿಚಯಿಸುವುದು ಮುಖ್ಯ ಉದ್ದೇಶ. ಈ ಮೊದಲು ಬಾಲ್ ರಂಗ್ ನೃತ್ಯ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಅವಕಾಶ ದೊರೆತಿರುವುದು ಶಾಲೆಗೆ ದೊರೆತ ಕೀರ್ತಿ’ ಎಂದು ಚಿತ್ರಕಲಾ ಶಿಕ್ಷಕಿ ಕೆ.ಸಂಗೀತಾ ಪ್ರಜಾವಾಣಿಯೊಂದಿಗೆ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.