ADVERTISEMENT

ಉದ್ಯೋಗ ಖಾತ್ರಿ ಪ್ರಗತಿಗೆ ಸೂಚನೆ

ತಾ.ಪಂ. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 14:12 IST
Last Updated 5 ನವೆಂಬರ್ 2022, 14:12 IST

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೈಸೂರು ತಾಲ್ಲೂಕಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಪ್ರೇಮ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು. ಕಳೆದ ವರ್ಷದ ಗುರಿ ತಲುಪಬೇಕು. ಈ ಬಾರಿಯ ಗುರಿಯಂತೆ ತ್ವರಿತವಾಗಿ ಕೆಲಸ ಮಾಡಬೇಕು. ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಗಳಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜಿಸಲು ಕಾರ್ಯಕ್ರಮ ರೂಪಿಸಬೇಕು’ ಎಂದು ಸೂಚಿಸಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ದುರಸ್ತಿಗೊಳ್ಳುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ನೀಡಲು ತಡವರಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ನಿರ್ಮಿತಿ ಕೇಂದ್ರದವರು ನಮಗೆ ಮಾಹಿತಿ ನೀಡಿಲ್ಲ’ ಎಂದು ಟಿಎಚ್‌ಒ ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ‘ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸುವ ಅಗತ್ಯವಿದೆ. ಸಮನ್ವಯದ ಕೊರತೆ ಇರಬಾರದು’ ಎಂದು ಹೇಳಿದರು.

ADVERTISEMENT

‘ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಉತ್ತಮ ಫಲಿತಾಂಶ ಬರುವಂತೆಯೂ ನೋಡಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಸೂಚಿಸಿದರು.

‘ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಹೆಣ್ಣು ಮಕ್ಕಳಿಗೆ ಈ ಹಿಂದೆ ಕರಾಟೆ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಅದು ಮುಂದುವರಿದಿದೆಯೇ?’ ಎಂದು ಕೇಳಿದರು.

ಇದಕ್ಕೆ ‍ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಕೊರೊನಾ ನಂತರ ಇದು ನಿಂತಿದೆ. ಪುನರಾರಂಭಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಒತ್ತು ಕೊಡಲಾಗಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಇದರಿಂದ ಹಾಸ್ಟೆಲ್‌ಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದರು.

‘ಕಾನೂನು ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅವರು ಸರ್ಕಾರಿ ವಕೀಲರ ಬದಲಿಗೆ ಬೇರೆಯವರಲ್ಲಿ ಮಾತ್ರ ತರಬೇತಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರು ಸರ್ಕಾರಿ ವಕೀಲರಲ್ಲಿ ತರಬೇತಿ ಪಡೆಯಲು ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಡಿ.ಗಿರೀಶ್, ಸಹಾಯಕ ಲೆಕ್ಕಾಧಿಕಾರಿ ಪ್ರೇಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.