ADVERTISEMENT

ಮೈಸೂರು: ‘ಸಿಗ್ನಲ್‌’ ನೀಡದ ದೀಪಗಳು

ಮುಖ್ಯರಸ್ತೆಗಳಲ್ಲೇ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವ ವಾಹನಗಳು

ಶಿವಪ್ರಸಾದ್ ರೈ
Published 11 ಸೆಪ್ಟೆಂಬರ್ 2024, 5:40 IST
Last Updated 11 ಸೆಪ್ಟೆಂಬರ್ 2024, 5:40 IST
ಮೈಸೂರಿನ ಕೌಟಿಲ್ಯ ವೃತ್ತದಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್‌ ನಿರ್ವಹಣೆಯಿಲ್ಲದೆ ಬೆಳಗುತ್ತಿಲ್ಲ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಕೌಟಿಲ್ಯ ವೃತ್ತದಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್‌ ನಿರ್ವಹಣೆಯಿಲ್ಲದೆ ಬೆಳಗುತ್ತಿಲ್ಲ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಸಿಗ್ನಲ್‌ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ವಾಹನ ಚಾಲಕರು ರಸ್ತೆ ದಾಟಲು ಪರದಾಡುತ್ತಿದ್ದು, ಅಪಘಾತವಾಗುವ ಅಪಾಯದ ನಡುವೆ ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಂಚಾರ ನಿಯಮ ಉಲ್ಲಂಘನೆಗೂ ಇದು ಆಸ್ಪದ ನೀಡುತ್ತಿದೆ.

ಕಳೆದ 15 ದಿನಗಳಿಂದ ಪ್ರಮುಖ ವೃತ್ತಗಳ ಸಿಗ್ನಲ್‌ ದೀಪಗಳು ಬೆಳಗುತ್ತಿಲ್ಲ. ಇವುಗಳ ನಿರ್ವಹಣೆಗಾಗಿ ಹೊರಗುತ್ತಿಗೆ ನೀಡಲಾಗುತ್ತಿದ್ದು, ಅವರಿಗೆ ಪಾವತಿಸಬೇಕಾದ ಮೊತ್ತದ ವಿಚಾರವಾಗಿ ಗೊಂದಲ ಮೂಡಿರುವುದರಿಂದ ದುರಸ್ತಿ ಕಾರ್ಯ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

ನಗರದ ಒಂಟಿಕೊಪ್ಪಲಿನಲ್ಲಿರುವ ವಿ.ವಿ. ಪುರಂ ಠಾಣೆ ಸಮೀಪದ ವೃತ್ತದಲ್ಲಿ ಐದು ರಸ್ತೆಗಳು ಕೂಡುತ್ತವೆ. ಈ ಭಾಗದಲ್ಲಿ ಶಾಲಾ–ಕಾಲೇಜುಗಳು ಹೆಚ್ಚಿರುವುದರಿಂದ ಹಾಗೂ ಒಂದು ರಸ್ತೆ ಹೆಬ್ಬಾಳ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದರಿಂದ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಸಂಜೆ ಮತ್ತು ಬೆಳಿಗ್ಗೆ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ಇಲ್ಲಿನ ಸಿಗ್ನಲ್‌ ಲೈಟ್‌ಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದು, ಎಲ್ಲ ಕಡೆಯಿಂದಲೂ ಒಮ್ಮೆಲೆ ವಾಹನಗಳು ನುಗ್ಗುತ್ತವೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅಪಘಾತ ಸಂಭವಿಸಿದ ಹಾಗೂ ಕೆಲವರು ಗಾಯಗೊಂಡ ಉದಾಹರಣೆಗಳೂ ಇವೆ ಎನ್ನುತ್ತಾರೆ ರಸ್ತೆ ಬಳಕೆದಾರರು.

ADVERTISEMENT

ಮುಡಾ ಕಚೇರಿ ಬಳಿಯ ವೃತ್ತದಲ್ಲಿ ನಾಲ್ಕು ರಸ್ತೆಗಳು ಕೂಡುತ್ತವೆ. ರೈಲ್ವೆ ನಿಲ್ದಾಣದಿಂದ ವೇಗವಾಗಿ ರಾಮಕೃಷ್ಣ ವೃತ್ತದ ಕಡೆಗೆ ತೆರಳುವ ವಾಹನಗಳು ಹಾಗೂ ಕ್ರಾಫರ್ಡ್‌ ಭವನದಿಂದ ಮರಿಮಲ್ಲಪ್ಪ ವಿದ್ಯಾಸಂಸ್ಥೆಗೆ ತೆರಳುವ ರಸ್ತೆಯಲ್ಲಿ ಸಾಗುವ ವಾಹನಗಳು ಏಕಕಾಲದಲ್ಲಿ ನುಗ್ಗುತ್ತಿರುತ್ತವೆ. ವಾಹನ ಚಾಲಕರು, ಸವಾರರು ಗೊಂದಲಕ್ಕೆ ಒಳಗಾಗುವಂತಾಗಿದೆ. ಇದರ ನಡುವೆ ದಿಢೀರನೆ ಬರುವ ದ್ವಿಚಕ್ರವಾಹನ ಸವಾರರಿಂದ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.

‘ರಾಮಕೃಷ್ಣ ಆಶ್ರಮದ ಬಳಿಯ ಆಕಾಶವಾಣಿ ವೃತ್ತ, ವಿಜಯಾಬ್ಯಾಂಕ್‌ ವೃತ್ತ, ಕೌಟಿಲ್ಯ ವೃತ್ತ ಹೀಗೆ ಹಲವು ಕಡೆಗಳಲ್ಲಿ ಇದೇ ರೀತಿಯ ಸಮಸ್ಯೆ ಮುಂದುವರಿದಿದೆ. ಕೆಲವೆಡೆ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸರನ್ನೂ ನಿಯೋಜಿಸಿಲ್ಲ. ನಿಯೋಜಿಸಿದ್ದಲ್ಲೂ ಅವರು ನಿಗಾ ವಹಿಸುತ್ತಿಲ್ಲ. ಇದರಿಂದ ಪಾದಚಾರಿಗಳೂ ರಸ್ತೆ ದಾಟಲು ತೊಂದರೆ ಅನುಭವಿಸುವಂತಾಗಿದೆ’ ಎಂದು ಹಿರಿಯ ನಾಗರಿಕರೊಬ್ಬರು ತಿಳಿಸಿದರು.

ಸಿಗ್ನಲ್ ದೀಪಗಳ ನಿರ್ವಹಣೆ ಕುರಿತು ಪೊಲೀಸ್‌ ಅಧಿಕಾರಿಗಳಲ್ಲೇ ಗೊಂದಲಗಳಿವೆ. ಯಾರು ನಿರ್ವಹಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಅಧಿಕಾರಿಗಳು ಮತ್ತೊಬ್ಬರತ್ತ ಬೆರಳು ತೋರುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ನಿರಾಕರಿಸಿದರು.

‘ನಗರಪಾಲಿಕೆಯ ಮೂಲಕ ಹೊರಗುತ್ತಿಗೆ ನೀಡಿ ಸಿಗ್ನಲ್‌ ಲೈಟ್‌ಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗುತ್ತಿದ್ದು, ಈ ಬಗ್ಗೆ ಕಮಿಷನರ್‌ ಕಚೇರಿಯೊಂದಿಗೆ ಮಾತುಕತೆ ನಡೆದಿದ್ದು, ಕೆಲವೇ ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಾಹನ ಓಡಾಟ ಹೆಚ್ಚಿರುವಲ್ಲೂ ಕಾರ್ಯನಿರ್ವಹಿಸದ ದೀಪಗಳು ನಿರ್ವಹಣೆ ಸಮಸ್ಯೆಯಿಂದ ಅವ್ಯವಸ್ಥೆ? ಅ‍ಪಘಾತ ಸಾಧ್ಯತೆ; ಜೀವಭಯದಲ್ಲಿ ಸವಾರರು

ಟ್ರಾಫಿಕ್‌ ಸಿಗ್ನಲ್‌ ಕಾರ್ಯನಿರ್ವಹಿಸದಿರುವುದರಿಂದ ರಸ್ತೆ ದಾಟಲು ಭಯಪಡುವಂತಾಗಿದೆ. ಶೀಘ್ರ ದುರಸ್ತಿ ಕಾರ್ಯ ನಡೆದು ನಿರಾತಂಕವಾಗಿ ಸಂಚರಿಸಲು ಅನುವು ಮಾಡಿಕೊಡಲಿ
ದಿನೇಶ್‌ ಬೈಕ್‌ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.