
ಮೈಸೂರು: ‘ಸಾಂಸ್ಕೃತಿಕ ರಾಜಧಾನಿ ಮೈಸೂರು ಕಳೆದ ಕೆಲವು ದಿನಗಳಿಂದ ಕ್ರೀಡಾ ರಾಜಧಾನಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಿರಂತರವಾಗಿ ಆಟೋಟ ಸ್ಪರ್ಧೆ ಆಯೋಜಿಸುತ್ತಿದ್ದು, ಹಗ್ಗ- ಜಗ್ಗಾಟ ಕ್ರೀಡೆಯು ಭಾರಿ ಆಕರ್ಷಣೆಯೊಂದಿಗೆ ಯಶಸ್ಸು ಕಂಡಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
‘ಸಂಸದರ ಕ್ರೀಡಾ ಮಹೋತ್ಸವ’ದ ‘ಫಿಟ್ ಯುವ ಫಾರ್ ವಿಕಸಿತ್ ಭಾರತ’ ಯೋಜನೆಯಡಿ ನಗರದ ಓವೆಲ್ ಮೈದಾನದಲ್ಲಿ ಭಾನುವಾರ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಹಳ್ಳಿ ಸೊಗಡಿನ ಹಗ್ಗ-ಜಗ್ಗಾಟ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆತದ್ದು ಖುಷಿ ತಂದಿದೆ. ಓವಲ್ ಮೈದಾನ ಕ್ರೀಡಾ ಸಂಗಮಕ್ಕೆ ಸಾಕ್ಷಿಯಾಗಿದ್ದು ಸಂತಸ ನೀಡಿದೆ’ ಎಂದು ಹೇಳಿದರು.
ಸ್ಪರ್ಧಿ ಚಂದ್ರಕಲಾ ಮಾತನಾಡಿ, ‘ಇಂತಹ ಪಂದ್ಯಗಳು ಆಯೋಜನೆಗೊಳ್ಳುತ್ತಿರುವುದು ಖುಷಿ ತಂದಿದೆ’ ಎಂದರು.
ಮೈಸೂರು ನಗರ ಪೊಲೀಸ್ ಸಿಬ್ಬಂದಿ ಶಿವಕುಮಾರ್, ‘ಇಂತಹ ಕ್ರೀಡಾಕೂಟ
ಗಳು ನಿರಂತರವಾಗಿ ನಡೆದರೆ ನಮ್ಮೂರಿನ ಪ್ರತಿಭೆಗಳಿಗೆ ಅವಕಾಶ ದೊರೆದಂತಾಗುತ್ತದೆ’ ಎಂದರು.
ಮೈಸೂರು ಪ್ಯಾಂಥರ್ಸ್‌ನ ರಮೇಶ್ ಮಾತನಾಡಿದರು. ಸ್ಪರ್ಧೆಯಲ್ಲಿ 35ಕ್ಕೂ ಹೆಚ್ಚು ತಂಡಗಳ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ನಿಖಿಲೇಶ್, ಕೇಬಲ್ ಮಹೇಶ್, ದಿನೇಶ್ ಗೌಡ, ರಾಕೇಶ್ ಭಟ್, ಪೈಲ್ವಾನ್ ರವಿ, ಗೋಪಾಲ್ ಅರಸು ಹಾಜರಿದ್ದರು.
ಕ್ರೀಡೆಯಲ್ಲಿ ಭಾಗಿಯಾಗಿ ಆರೋಗ್ಯ ಕಾಪಾಡಿಕೊಳ್ಳಿ–ಸಂಸದ 35ಕ್ಕೂ ಹೆಚ್ಚು ತಂಡ, 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ
ಸ್ಪರ್ಧೆಯ ಫಲಿತಾಂಶದ ವಿವರ
ಪುರುಷರ ವಿಭಾಗ: 560 ಕೆ.ಜಿ.ಗಿಂತ ಕಡಿಮೆ ವಿಭಾಗದಲ್ಲಿ ಮೈಸೂರು ಪ್ಯಾಂಥರ್ಸ್ ಪ್ರಥಮ ಯದುವೀರ್ ಬ್ರಿಗೇಡ್ 2ನೇ ಸ್ಥಾನ ಪಡೆಯಿತು. 640 ಕೆ.ಜಿ.ಗಿಂತ ಕಡಿಮೆ ವಿಭಾಗದಲ್ಲಿ ಫೈರ್ ಫೈಟರ್ಸ್ ಪ್ರಥಮ ಮೈಸೂರು ಸಿಟಿ ಪೊಲೀಸ್ ತಂಡ 2ನೇ ಸ್ಥಾನ ಗಳಿಸಿತು. 720 ಕೆ.ಜಿ.ಗಿಂತ ಕಡಿಮೆ ತೂಕದ ವಿಭಾಗದಲ್ಲಿ ಮೈಸೂರು ಟೈಗರ್ ಪ್ರಥಮ ಸಿಎಫ್ಒ ಝೋನ್ ಮೈಸೂರು ಫೈರ್ 2ನೇ ಸ್ಥಾನ ಗೆದ್ದಿತು. ಮಹಿಳೆಯರ ವಿಭಾಗ: 600 ಕೆ.ಜಿ.ಗಿಂತ ಕಡಿಮೆ ವಿಭಾಗದಲ್ಲಿ ಮಾರಮ್ಮ ಕೊಡಗು ತಂಡ ಮೈಸೂರು ಬಿಜೆಪಿ ಮಹಿಳಾ ಮೋರ್ಚಾ ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದವು. 540 ಕೆ.ಜಿ.ಗಿಂತ ಕಡಿಮೆ ತೂಕದ ವಿಭಾಗದಲ್ಲಿ ಕೂರ್ಗ್ ವಿಂಗ್ಸ್ ಪ್ರಥಮ ಹಾಗೂ ರೈನ್ ಬೋ ವಾರಿಯರ್ಸ್ ತಂಡ 2ನೇ ಸ್ಥಾನ ಪಡೆಯಿತು. ಪ್ರತಿ ವಿಭಾಗದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಪದಕ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.