
ಹಣ
ಹಣ
ಮೈಸೂರು: ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ‘ವಾರಸುದಾರರಿಲ್ಲದ ಠೇವಣಿ’ (ಅನ್‌ಕ್ಲೇಮ್ಡ್ ಡೆಪಾಸಿಟ್) ಹಣ ಬರೋಬ್ಬರಿ ₹ 157 ಕೋಟಿ ಇರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದೆ.
ಇದನ್ನು ಪಡೆದುಕೊಳ್ಳುವುದಕ್ಕಾಗಿ ಗ್ರಾಹಕರಿಗೆ ಅವಕಾಶವನ್ನೂ ಕೊಟ್ಟಿದೆ. ಗ್ರಾಹಕರು ‘ಹಣವನ್ನು ಹಾಗೆಯೇ ಇಟ್ಟಿರುವುದನ್ನು’ ಅಭಿಯಾನದ ಮೂಲಕ ನೆನಪಿಸಲಾಗುತ್ತಿದೆ.
ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಇಟ್ಟು ವಾಪಸ್ ಪಡೆದುಕೊಳ್ಳದೇ ಇರುವವರು, ಕುಟುಂಬದವರ ಬ್ಯಾಂಕ್ ಖಾತೆಗಳಲ್ಲಿ ಹಣವೇನಾದರೂ ಬಾಕಿ ಇರಬಹುದಾ ಎಂಬ ಪ್ರಶ್ನೆ ಇರುವವರು ಒಮ್ಮೆ ಪರೀಕ್ಷಿಸಿಕೊಳ್ಳಬಹುದು.
ಕೇಂದ್ರ ಸರ್ಕಾರದಿಂದ ನಡೆಸಲಾಗುತ್ತಿರುವ ‘ನಿಮ್ಮ ಹಣ– ನಿಮ್ಮ ಅಧಿಕಾರ’ ಅಭಿಯಾನದಲ್ಲಿ, ವಾರಸುದಾರರು ಯಾರೆಂದು ತಿಳಿಯದೆ ಬ್ಯಾಂಕ್ ಖಾತೆಗಳಲ್ಲಿ ಉಳಿದಿರುವ ಹಣವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಏನಿದು ವಾರಸುದಾರರಿಲ್ಲದ ಹಣ
ಯಾವುದೇ ಉಳಿತಾಯ ಖಾತೆ, ಚಾಲ್ತಿ ಖಾತೆ 10 ವರ್ಷ ಚಲಾವಣೆಯಲ್ಲಿ ಇಲ್ಲದಿದ್ದರೆ ಅಂತಹ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ನಿರ್ದಿಷ್ಟ ಖಾತೆಯಲ್ಲಿರುವ ಹಣವನ್ನು ವಾರಸುದಾರರಿಲ್ಲದ ಹಣ (ಅನ್‌ಕ್ಲೇಮ್ಡ್ ಡೆಪಾಸಿಟ್) ಎಂದು ವರ್ಗೀಕರಿಸಲಾಗುತ್ತದೆ. ಆ ಹಣವನ್ನು ಆರ್‌ಬಿಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸುತ್ತದೆ.
ಗ್ರಾಹಕರು ಹಣ ಪಡೆದುಕೊಳ್ಳಲು, ಸಂಬಂಧಿಸಿದ ಬ್ಯಾಂಕ್‌ಗೆ ಹಣಕ್ಕಾಗಿ ಕ್ಲೇಮ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ಜೊತೆಗೆ ಕೆವೈಸಿ ದಾಖಲೆ, ಠೇವಣಿ ವಿವರ, ಖಾತೆದಾರರ ಫೋಟೊ, ಕಾನೂನುಬದ್ಧ ಉತ್ತರಾಧಿಕಾರಿ ಎನ್ನುವುದಕ್ಕೆ ದಾಖಲೆ, ವ್ಯಕ್ತಿ ಮೃತಪಟ್ಟಿದ್ದಲ್ಲಿ ಮರಣ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಈ ಅರ್ಜಿ ಪರಿಶೀಲಿಸಿದ ಬಳಿಕ ಬ್ಯಾಂಕ್ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಬ್ಯಾಂಕ್‌ಗಳಿಗೆ ಸೂಚನೆ
‘ಕೇಂದ್ರ ಸರ್ಕಾರದ ಸೂಚನೆಯಂತೆ, ಹಣಕಾಸು ವಲಯದಲ್ಲಿ ಕ್ಲೇಮು ಪಡೆಯದ ಸ್ವತ್ತುಗಳ ದಕ್ಷ ಹಾಗೂ ತ್ವರಿತ ಇತ್ಯರ್ಥಕ್ಕಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಾಸಾಂತ್ಯದವರೆಗೆ ನಡೆಯಲಿದೆ. ಬ್ಯಾಂಕ್ ಮಟ್ಟದಲ್ಲೂ ಆಯೋಜಿಸಿ, ಕನಿಷ್ಠ 100 ಖಾತೆಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೃಷ್ಣಮೂರ್ತಿ ಎನ್.ಪಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕೆನರಾ ಬ್ಯಾಂಕ್, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 31 ಬ್ಯಾಂಕ್‌ಗಳ ಒಟ್ಟು 534 ಶಾಖೆಗಳು ಜಿಲ್ಲೆಯಲ್ಲಿವೆ. ಅದರಲ್ಲಿ 5,05,424 ಖಾತೆಗಳಿವೆ. ಇದರಲ್ಲಿ ಕ್ಲೇಮು ಪಡೆಯದ ಖಾತೆಗಳನ್ನು ಇತ್ಯರ್ಥಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೆ ನಮಗೆ ₹ 10.50 ಕೋಟಿ ಕ್ಲೇಮ್ ಮಾಡಿರುವ ಬಗ್ಗೆ ನಮಗೆ ವರದಿಯಾಗಿದೆ. ಸಾಕಷ್ಟು ಬ್ಯಾಂಕ್‌ಗಳು ವರದಿ ಮಾಡುವುದು ಬಾಕಿ ಇದೆ’ ಎಂದು ತಿಳಿಸಿದರು.
‘ಅನ್‌ಕ್ಲೇಮ್ಡ್ ಡೆಪಾಸಿಟ್‌ನಲ್ಲಿ ₹ 100, ₹500, ₹5,000 ಪ್ರಮಾಣವೇ ಜಾಸ್ತಿ ಇದೆ. ಕೆಲವರು ಇಷ್ಟು ಮೊತ್ತ ಪಡೆದುಕೊಳ್ಳಲು ನಿರ್ಲಕ್ಷಿಸುವುದುಂಟು. ಆದ್ದರಿಂದ ನಾವು ದೊಡ್ಡ ಮೊತ್ತದ ಹಣದ ಖಾತೆ ಇತ್ಯರ್ಥಪಡಿಸಲು ಆದ್ಯತೆ ನೀಡಿದ್ದೇವೆ. ಕೆಲವರು ವ್ಯಾಜ್ಯದ ಕಾರಣದಿಂದಲೂ ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.