
ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ನಾತಕ ವಿಭಾಗದ ಸೆಮಿಸ್ಟರ್ ಪರೀಕ್ಷೆಗಳು ಸೋಮವಾರದಿಂದ ಆರಂಭ ಆಗಲಿದ್ದು, ನೆರೆಯ ಜಿಲ್ಲೆಗಳ ಪುನರಾವರ್ತಿತ ಅಭ್ಯರ್ಥಿಗಳು ಮೈಸೂರಿಗೇ ಬಂದು ಪರೀಕ್ಷೆ ಬರೆಯಬೇಕಿದೆ.
ಒಂದು ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸದ್ಯ ಪ್ರತ್ಯೇಕ ವಿಶ್ವವಿದ್ಯಾಲಯಗಳು ತಲೆಎತ್ತಿವೆ. ತಮ್ಮ ವ್ಯಾಪ್ತಿಯಲ್ಲಿನ ಕಾಲೇಜುಗಳ ಪದವಿ ಪರೀಕ್ಷೆಗಳನ್ನು ತಾವೇ ನಿರ್ವಹಿಸುತ್ತಿವೆ. ಆಯಾ ಕಾಲೇಜುಗಳಲ್ಲಿಯೇ ಪದವಿ ಪರೀಕ್ಷೆಗೆ ಅವಕಾಶವೂ ಇದೆ. ಆದರೆ ಈ ಹಿಂದೆ ಮೈಸೂರು ವಿ.ವಿ.ಯಲ್ಲಿ ನೋಂದಾಯಿಸಿಕೊಂಡಿದ್ದು ಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ಪದವಿ ಪೂರೈಸದ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪಠ್ಯಕ್ರಮದ ಅಡಿ ಮತ್ತೆ ಪರೀಕ್ಷೆಗೆ ಮರು ನೋಂದಣಿ ಆಗಿರುವವರಿಗೆ ಆಯಾ ಜಿಲ್ಲೆ/ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳ ಬದಲು ಮೈಸೂರು ವಿಶ್ವವಿದ್ಯಾಲಯದ ಮೌಲ್ಯಭವನದಲ್ಲಿ ಪರೀಕ್ಷೆ ಆಯೋಜಿಸಲಾಗುತ್ತಿದೆ.
ಆರ್ಥಿಕ ಸಂಕಷ್ಟದಲ್ಲಿ ಇರುವ ಮೈಸೂರು ವಿಶ್ವವಿದ್ಯಾಲಯವು ಪರೀಕ್ಷೆ ಆಯೋಜನೆಯಿಂದ ಆಗುವ ಹೊರೆ ತಪ್ಪಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದು, ಇಡೀ ವಿಶ್ವವಿದ್ಯಾಲಯಕ್ಕೆ ಒಂದೇ ಪರೀಕ್ಷಾ ಕೇಂದ್ರವನ್ನು ನಿಗದಿ ಮಾಡಿದೆ. ಇದಕ್ಕೆ ವಿದ್ಯಾರ್ಥಿ ಸಮೂಹದಿಂದ ಆಕ್ಷೇಪವೂ ವ್ಯಕ್ತವಾಗಿದೆ.
‘ಹಾಸನ–ಸಕಲೇಶಪುರದಂತಹ ದೂರದ ಊರುಗಳಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಕಾಲೇಜು ಇಲ್ಲವೇ ಸಮೀಪದ ಕೇಂದ್ರಗಳಲ್ಲಿಯೇ ಪದವಿ ಪರೀಕ್ಷೆ ಬರೆಯುತ್ತಿದ್ದರು. ಈಗ ಪುನರಾವರ್ತಿತ ಅಭ್ಯರ್ಥಿಗಳನ್ನು ಮೈಸೂರಿಗೇ ಬಂದು ಪರೀಕ್ಷೆ ಬರೆಯುವಂತೆ ಸೂಚಿಸಿರುವುದು ಸರಿಯಲ್ಲ. ಇದರಿಂದ ಆಗುವ ಸಮಯದ ವ್ಯಯ, ಖರ್ಚಿನ ಕಾರಣಕ್ಕೆ ಎಷ್ಟೋ ಮಂದಿ ಗೈರಾಗಬಹುದು. ಹಾಗಾದಲ್ಲಿ ಮತ್ತೆ ಅವರು ಪದವಿ ಪೂರ್ಣಗೊಳಿಸುವ ಅವಕಾಶದಿಂದ ವಂಚಿತರಾಗುತ್ತಾರೆ’ ಎಂದು ಕಾಲೇಜೊಂದರ ಉಪನ್ಯಾಸಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
‘ಈ ಹಿಂದೆ ಇದ್ದಂತೆಯೇ ಸ್ಥಳೀಯ ಕೇಂದ್ರಗಳಲ್ಲೇ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಇಲ್ಲವೇ ತಮ್ಮ ಜಿಲ್ಲಾ ಕೇಂದ್ರದ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ಆದರೂ ಕೇಂದ್ರ ತೆರೆದು ಅಲ್ಲಿ ಪರೀಕ್ಷೆ ಆಯೋಜಿಸಬೇಕು’ ಎನ್ನುವುದು ವಿದ್ಯಾರ್ಥಿಗಳ ಆಗ್ರಹ.
ಪುನರಾವರ್ತಿತ ಅಭ್ಯರ್ಥಿಗಳು ಇರುವ ಕಾಲೇಜುಗಳು ಪರೀಕ್ಷಾ ಕಾರ್ಯಕ್ಕೆ ತಮ್ಮ ಕಾಲೇಜಿನಿಂದಲೇ ಇಬ್ಬರು ಕೊಠಡಿ ಮೇಲ್ವಿಚಾರಕರನ್ನೂ ಕಳುಹಿಸಬೇಕು’ ಎಂದು ವಿಶ್ವವಿದ್ಯಾಲಯವು ಆದೇಶ ಹೊರಡಿಸಿದೆ. ಇದಕ್ಕೆ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಈ ಹಿಂದೆ ಮೈಸೂರು ವಿಶ್ವವಿದ್ಯಾಲಯವೇ ಪರೀಕ್ಷಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜಿಸುತ್ತಿತ್ತು. ಈಗ ನಾವು ಬೇರೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಇದ್ದು, ಇದರಿಂದ ಎಲ್ಲಕ್ಕೂ ತೊಂದರೆ’ ಎನ್ನುವುದು ಅವರ ಆಕ್ಷೇಪ.
ವಿಶ್ವವಿದ್ಯಾಲಯ ಹೇಳುವುದೇನು?
‘ಎನ್‌ಇಪಿ ಅಡಿ ನೋಂದಾಯಿಸಿಕೊಂಡಿರುವ ಪುನರಾವರ್ತಿತ ಅಭ್ಯರ್ಥಿಗಳಿಗೆ ಮಾತ್ರ ಮೈಸೂರಿನಲ್ಲಿ ಪರೀಕ್ಷೆ ಆಯೋಜಿಸಿದ್ದೇವೆ. ನಾಲ್ಕು ಜಿಲ್ಲೆಗಳ 400ಕ್ಕೂ ಹೆಚ್ಚು ಕಾಲೇಜುಗಳಿಂದ ಹೆಚ್ಚೆಂದರೆ 800–1000 ಮಂದಿ ಮಾತ್ರ ಮರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಿಂದ ಯಾರಿಗೂ ತೊಂದರೆ ಆಗದು’ ಎನ್ನುತ್ತಾರೆ ಮೈಸೂರು ವಿ.ವಿ. ಪರೀಕ್ಷಾಂಗ ಕುಲಸಚಿವ ನಾಗರಾಜು. ‘ಬಹುತೇಕ ಕಾಲೇಜುಗಳಲ್ಲಿ ಒಬ್ಬರು–ಇಬ್ಬರು ಮಾತ್ರ ಮರು ಪರೀಕ್ಷೆ ತೆಗೆದುಕೊಂಡಿರುತ್ತಾರೆ. ಅಂತಹವರಿಗೆ ಅಲ್ಲಿಯೇ ಪರೀಕ್ಷೆ ನಡೆಸಿದರೆ ಹಣಕಾಸಿನ ಹೊರೆ ಹೆಚ್ಚುತ್ತದೆ. ಹಣಕಾಸಿನ ನಿರ್ವಹಣೆ ಜೊತೆಗೆ ಪರೀಕ್ಷೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ನಿರ್ವಹಿಸಲು ಮೈಸೂರಿನಲ್ಲೇ ಪರೀಕ್ಷೆ ಆಯೋಜಿಸಿದ್ದೇವೆ. ಆಯಾ ಕಾಲೇಜು ಸಿಬ್ಬಂದಿ ತಮ್ಮ ಕೇಂದ್ರದ ಬದಲಿಗೆ ಇಲ್ಲಿಗೆ ಬಂದು ಕಾರ್ಯ ನಿರ್ವಹಿಸುತ್ತಾರೆ. ಯಾರಿಗೂ ಹೆಚ್ಚುವರಿ ಹೊರೆಯಾಗದು’ ಎನ್ನುವುದು ಅವರ ಸ್ಪಷ್ಟನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.