
ಮೈಸೂರು: ತಾಲ್ಲೂಕಿನ ಯಾಂದಳ್ಳಿಯ ಸಪ್ತಮಾತೃಕೆ ಬಡಾವಣೆಯಲ್ಲಿರುವ 279ನೇ ನಂಬರಿನ ಮನೆ ಮೇಲೆ ಜಿಲ್ಲೆಯ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಜ.30ರಂದು ದಾಳಿ ನಡೆಸಿದ ವೇಳೆ ಪತ್ತೆಯಾಗಿದ್ದ ರಾಸಾಯನಿಕದಲ್ಲಿ ಡ್ರಗ್ಸ್ ಇರುವುದು ಎಫ್‌ಎಸ್‌ಎಲ್ ವರದಿಯಿಂದ ಬೆಳಕಿಗೆ ಬಂದಿದೆ.
‘1 ಕೆ.ಜಿ ಒಪಿಎಂ (ಒಪ್ಟಿಮೈಜ್‌ಡ್ ಪ್ಲಾಂಟ್ ಮೆಡಿಯೇಟೆಡ್ ಸೊಲ್ಯೂಶನ್) ಪತ್ತೆಯಾಗಿದೆ. ಉಳಿದ ರಾಸಾಯನಿಕಗಳು ಡ್ರಗ್ಸ್‌ಗೆ ಅಥವಾ ಇತರೆ ವಸ್ತುಗಳ ಉತ್ಪಾದನೆಗಳಿಗೂ ಬಳಸುವ ಸಾಧ್ಯತೆ ಇದೆ. ದಾಸ್ತಾನು ಮಾಡಿದ್ದ ಕಾರಣ, ಬೇರೆಡೆಗೆ ಒಯ್ಯುತ್ತಿದ್ದರೆ ಎಂದು ತನಿಖೆ ನಡೆಯುತ್ತಿದೆ’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಮನೆಯನ್ನು ಬಾಡಿಗೆಗೆ ಪಡೆದಿದ್ದ ಗಣಪತ್ ಲಾಲ್ ಹಾಗೂ ವಾಸವಿದ್ದ ಮಹೇಂದ್ರ ಇಬ್ಬರನ್ನೂ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಹೊರರಾಜ್ಯದ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಮೂಲಕ ಬಾಡಿ ವಾರಂಟ್ ಪಡೆದು ಅವರನ್ನು ಕಸ್ಟಡಿಗೆ ಪಡೆಯಲು ನಮ್ಮ ಪೊಲೀಸರು ತೆರಳಿದ್ದಾರೆ’ ಎಂದರು.
‘ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ತಯಾರಿಸುವ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ರಹಸ್ಯ ಪ್ರಯೋಗಾಲಯ ಪತ್ತೆ ಮಾಡಿದ್ದೇವೆ’ ಎಂದು ಎನ್‌ಸಿಬಿ ತಂಡವು ತಿಳಿಸುತ್ತಿದ್ದಂತೆ, ಅವರ ವಶದಲ್ಲಿದ್ದ ಗಣಪತ್‌ಲಾಲ್ ಬಾಡಿಗೆ ಪಡೆದಿದ್ದ ತಾಲ್ಲೂಕಿನ ಯಾಂದಳ್ಳಿಯ ಸಪ್ತಮಾತೃಕೆ ಬಡಾವಣೆಯಲ್ಲಿರುವ ಕಟ್ಟಡದಲ್ಲಿ ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳನ್ನು ಜಿಲ್ಲಾ ಪೊಲೀಸ್ ತಂಡವು ಪತ್ತೆ ಹಚ್ಚಿ, ಎಫ್‌ಎಸ್‌ಎಲ್ ವರದಿಗೆ ಕಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.