ADVERTISEMENT

ನಾಗರಹೊಳೆ: ನಿಯಂತ್ರಣಕ್ಕೆ ಬಂದ ಬೆಂಕಿ

ರಾತ್ರಿ ಇಡೀ ಗಸ್ತು ತಿರುಗಿದ ಅರಣ್ಯ ಇಲಾಖೆ ಸಿಬ್ಬಂದಿ, ಸಂಘಟಿತ ಪ್ರಯತ್ನದಿಂದ ಯಶಸ್ಸು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:54 IST
Last Updated 5 ಮಾರ್ಚ್ 2021, 2:54 IST
ಮೈಸೂರಿನ ಕುಕ್ಕರಹಳ್ಳಿ ಸಮೀಪದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ‘ಪುಷ್ಪಕಾಶಿ’ ಉದ್ಯಾನಕ್ಕೆ ಗುರುವಾರ ಬೆಂಕಿ ಬಿದ್ದು ಹಲವು ಮರ, ಗಿಡಗಳು ದಹಿಸಿದವು
ಮೈಸೂರಿನ ಕುಕ್ಕರಹಳ್ಳಿ ಸಮೀಪದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ‘ಪುಷ್ಪಕಾಶಿ’ ಉದ್ಯಾನಕ್ಕೆ ಗುರುವಾರ ಬೆಂಕಿ ಬಿದ್ದು ಹಲವು ಮರ, ಗಿಡಗಳು ದಹಿಸಿದವು   

ಎಚ್.ಡಿ.ಕೋಟೆ: ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಲ್ಲಿ ಉಗ್ರ ರೂಪ ತಳೆದಿದ್ದ ಬೆಂಕಿಯು, ಗುರುವಾರ ನಿಯಂತ್ರಣಕ್ಕೆ ಬಂದಿದೆ.

ನೂರಾರು ಎಕರೆಯಷ್ಟು ಅರಣ್ಯ ಸುಟ್ಟು ಹೋಗಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಆದರೆ, ಇದನ್ನು ನಿರಾಕರಿಸಿರುವ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್, ‘ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕಿದ್ದು, 20 ಹೆಕ್ಟೇರ್ ಪ್ರದೇಶದಷ್ಟು ಅರಣ್ಯ ಭಸ್ಮವಾಗಿದೆ’ ಎಂದು ಹೇಳಿದ್ದಾರೆ.

‘ಅಂತರಸಂತೆಯ ಉದ್ಬೂರು ಭಾಗದಿಂದ ಕಾರಾಪುರದ ಸಮೀಪದ ಮೈಸೂರು– ಮಾನಂದವಾಡಿಯ ಹಳೆಯ ರಸ್ತೆಯವರೆಗೆ ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿ ಬೆಂಕಿ ಧಗಧಗಿಸಿತ್ತು. ಕನಿಷ್ಠ ಎಂದರೂ ಇಲ್ಲಿ ನೂರಾರು ಎಕರೆಯಷ್ಟು ಪ್ರದೇಶದ ಕಾಡು ನಾಶವಾಗಿದೆ’ ಎಂದು ಸಮೀಪದ ಉದ್ಬೂರಿನ ನಿವಾಸಿಯೊಬ್ಬರು ಹೇಳುತ್ತಾರೆ.

ADVERTISEMENT

‘ಕೌಂಟರ್‌ ಫೈಯರ್’ ಮೂಲಕ ಹಾಗೂ ಅರಣ್ಯ ಇಲಾಖೆಯ ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿ, ಅಗ್ನಿಶಾಮಕ ಪಡೆಯ ಸಂಘಟಿತ ಪ್ರಯತ್ನದಿಂದ ಬೆಂಕಿಯನ್ನು ಕ್ಷಿಪ್ರವಾಗಿ ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಬಿದ್ದ ಪ್ರದೇಶದಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಇಡೀ ಗಸ್ತು ಕಾರ್ಯ ನಡೆಸಿ, ಗಾಳಿಗೆ ಮತ್ತೆ ಮತ್ತೆ ಹೊತ್ತಿಕೊಳ್ಳುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.

ನಂಜನಗೂಡಿನಲ್ಲಿ 6 ಹೆಕ್ಟೇರ್ ಕುರುಚಲು ಕಾಡು ನಾಶ: ನಂಜನಗೂಡಿನ ಕೋಣನೂರು ಗುಡ್ಡದ ಸಮೀಪ ಬುಧವಾರ ಸಂಜೆ ಕಾಣಿಸಿಕೊಂಡ ಬೆಂಕಿಯಿಂದ, ಅಂದಾಜು 6 ಹೆಕ್ಟೇರ್‌ನಷ್ಟು ಪ್ರದೇಶದ ಕುರುಚಲು ಕಾಡು ನಾಶವಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಕ್ಷಿತ್ ತಿಳಿಸಿದ್ದಾರೆ.

ಅರಣ್ಯ ಇಲಾಖೆ ನೆಟ್ಟಿದ್ದ ಮರಗಿಡಗಳಿಗೆ ಯಾವುದೇ ಹಾನಿಯಾಗಿಲ್ಲ. ಕೇವಲ ಲಂಟಾನ ಮತ್ತು ಕುರುಚಲು ಗಿಡಗಳಷ್ಟೇ ಸುಟ್ಟು ಹೋಗಿವೆ ಎಂದು ಅವರು ಹೇಳಿದ್ದಾರೆ. ಗುರುವಾರ, ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಇದರ ಆಸುಪಾಸಿನ ಕೆಲವು ಬಾಳೆತೋಟಗಳಿಗೂ ಹಾನಿಯಾಗಿದೆ.

ಮೈಸೂರಿನ ಕುಕ್ಕರಹಳ್ಳಿ ಸಮೀಪ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ‘ಪುಷ್ಪಕಾಶಿ’ ಉದ್ಯಾನಕ್ಕೆ ಗುರುವಾರ ಬೆಂಕಿ ಬಿದ್ದು ಹಲವು ಗಿಡ–ಮರಗಳು ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.