ADVERTISEMENT

ನಾಗರಹೊಳೆ: ಸಫಾರಿ ಸಮಯ, ಶುಲ್ಕ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 16:00 IST
Last Updated 2 ಜೂನ್ 2025, 16:00 IST
ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿರುವುದು (ಸಂಗ್ರಹ ಚಿತ್ರ)
ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿರುವುದು (ಸಂಗ್ರಹ ಚಿತ್ರ)   

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಸಮಯ ಮತ್ತು ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಭಾನುವಾರದಿಂದ ಜಾರಿಗೆ ಬಂದಿದೆ.

ನಾಗರಹೊಳೆ ಅಭಯಾರಣ್ಯದಲ್ಲಿ ಎಚ್.ಡಿ. ಕೋಟೆ ತಾಲ್ಲೂಕು ಅಂತರಸಂತೆ ವಲಯದ ಕಾಕನಕೋಟೆ (ದಮ್ಮನಕಟ್ಟೆ), ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಮತ್ತು ಕೊಡಗಿನ ನಾಣಚ್ಚಿ ಗೇಟ್ ಬಳಿ ಮೂರು ಕೇಂದ್ರಗಳಿಂದ ಪ್ರತಿ ದಿನ ಸಫಾರಿಗೆ ಕರೆದೊಯ್ಯಲಾಗುತ್ತಿದೆ. ಕಬಿನಿ ಹಿನ್ನೀರು ವ್ಯಾಪ್ತಿಯ ಕಾಕನಕೋಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋಗುವವರು ಹೆಚ್ಚಾಗಿರುತ್ತಿದ್ದುದರಿಂದ ಕೆಲವರಿಗೆ ಟಿಕೆಟ್ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ, ಸಮಯ ಪರಿಷ್ಕರಿಸಲಾಗಿದೆ. ಇದರಿಂದ, ಹೆಚ್ಚಿನ ಮಂದಿ ಪ್ರವಾಸಿಗರಿಗೆ ಸಫಾರಿಗೆ ತೆರಳಲು ಅವಕಾಶ ದೊರೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಕನಕೋಟೆ ಸಫಾರಿ ಕೇಂದ್ರದಿಂದ ಇದುವರೆಗೆ ಬಸ್‌ನಲ್ಲಿ 3 ಗಂಟೆಯ ಅವಧಿಯ ಸಫಾರಿಗೆ ವಯಸ್ಕರಿಗೆ ₹ 865, ಮಕ್ಕಳಿಗೆ ₹ 430, ಜೀಪ್‌ನಲ್ಲಿ ತೆರಳಲು ಒಬ್ಬರಿಗೆ ₹ 855 ನಿಗದಿಪಡಿಸಲಾಗಿತ್ತು. ಹೊಸ ವೇಳಾಪಟ್ಟಿಯಂತೆ ಬೆಳಿಗ್ಗೆ ಮತ್ತು ಸಂಜೆ ತಲಾ 2 ಗಂಟೆ ಅವಧಿಯ ಸಫಾರಿ ಇರಲಿದೆ. ಬೆಳಿಗ್ಗೆ 6ರಿಂದ 8, 8.15ರಿಂದ 10.15, ಮಧ್ಯಾಹ್ನ 2.15ರಿಂದ 4.15, ಸಂಜೆ 4.30ರಿಂದ 6.30ರವರೆಗೆ ಸಫಾರಿ ವಾಹನ ತೆರಳುತ್ತದೆ. ಬಸ್‌ನಲ್ಲಿ 2 ಗಂಟೆಯ ಸಫಾರಿಗೆ ₹ 600, ಮಕ್ಕಳಿಗೆ ₹ 300 ನಿಗದಿಪಡಿಸಲಾಗಿದೆ. ಜೀಪ್‌ನಲ್ಲಿ ತೆರಳಲು ತಲಾ ₹ 1ಸಾವಿರ ಪಾವತಿಸಬೇಕು.

ADVERTISEMENT

ವೀರನಹೊಸಹಳ್ಳಿ ಗೇಟ್‌ನಿಂದ ನಿತ್ಯ ಬೆಳಿಗ್ಗೆ 6.15ರಿಂದ 9.45ರವರೆಗೆ, ಮಧ್ಯಾಹ್ನ 3ರಿಂದ 6.30ರವರೆಗೆ ಇರುವ ಬಸ್ ಸಫಾರಿಗೆ ವಯಸ್ಕರಿಗೆ ₹ 600, ಮಕ್ಕಳಿಗೆ ₹ 300, ಜೀಪ್‌ಗೆ ತಲಾ ₹ 1ಸಾವಿರ ನಿಗದಿ ಮಾಡಲಾಗಿದೆ.

ಕೊಡಗು ಜಿಲ್ಲೆಯ ಕುಟ್ಟ ಸಮೀಪದ ನಾಣಚ್ಚಿ ಗೇಟ್ ಕೇಂದ್ರದಿಂದ ನಿತ್ಯ ಬೆಳಿಗ್ಗೆ 6ರಿಂದ 8, ಬೆಳಿಗ್ಗೆ 8.15ರಿಂದ 10.15ರವರೆಗೆ, ಮಧ್ಯಾಹ್ನ 2.15ರಿಂದ 4.15ರವರೆಗೆ, 4.30ರಿಂದ 6.30ರವರೆಗೆ ತಲಾ 2 ಗಂಟೆ ಅವಧಿಯ ಸಫಾರಿ ಇರಲಿದ್ದು, ವಯಸ್ಕರಿಗೆ ತಲಾ ₹ 600 ಹಾಗೂ ಮಕ್ಕಳಿಗೆ ₹ 300, ಜೀಪ್ ಸಫಾರಿಗೆ ₹ 1ಸಾವಿರ ನಿಗದಿಪಡಿಸಲಾಗಿದೆ.

ಸಫಾರಿ ವೇಳೆ ಪ್ರವಾಸಿಗರು ಒಯ್ಯುವ ಕ್ಯಾಮೆರಾ ಶುಲ್ಕವನ್ನೂ ಪರಿಷ್ಕರಿಸಲಾಗಿದೆ. ಲೆನ್ಸ್ ಇಲ್ಲದ ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕೆ ಶುಲ್ಕವಿಲ್ಲ. 200 ಎಂಎಂನಿಂದ 500 ಎಂಎಂ ಲೆನ್ಸ್‌ ಹೊಂದಿದ್ದರೆ ₹ 1ಸಾವಿರ+ ಜಿಎಸ್‌ಟಿ, 500 ಎಂಎಂಗಿಂತ ಹೆಚ್ಚಿನ ಸಾಮರ್ಥ್ಯದ ಲೆನ್ಸ್ ತೆಗೆದುಕೊಂಡು ಬಂದರೆ ₹ 1,500+ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕು. ಈ ಹಿಂದೆ ಲೆನ್ಸ್ ಇಲ್ಲದ ಕ್ಯಾಮೆರಾಕ್ಕೂ ಶುಲ್ಕ ಪಾವತಿಸಬೇಕಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.