ADVERTISEMENT

ಕಾಂಗ್ರೆಸ್‌ ಕಚೇರಿಯಲ್ಲಿ ‘ನಮನ ಸಂಗಮ’

ಎಚ್.ಎಸ್.ದೊರೆಸ್ವಾಮಿ, ಸಿದ್ಧಲಿಂಗಯ್ಯ, ಕೃಷ್ಣ ಅವರನ್ನು ಸ್ಮರಿಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 11:42 IST
Last Updated 20 ಜೂನ್ 2021, 11:42 IST
ಕಾಂಗ್ರೆಸ್‌ ಭವನದಲ್ಲಿ ಭಾನುವಾರ ನಡೆದ ‘ನಮನ ಸಂಗಮ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕವಿ ಸಿದ್ಧಲಿಂಗಯ್ಯ ಹಾಗೂ ಮಾಜಿ ಸ್ಪೀಕರ್ ಕೃಷ್ಣ ಅವರ ಭಾವಚಿತ್ರಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಪುಷ್ಪನಮನ ಸಲ್ಲಿಸಿದರು
ಕಾಂಗ್ರೆಸ್‌ ಭವನದಲ್ಲಿ ಭಾನುವಾರ ನಡೆದ ‘ನಮನ ಸಂಗಮ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕವಿ ಸಿದ್ಧಲಿಂಗಯ್ಯ ಹಾಗೂ ಮಾಜಿ ಸ್ಪೀಕರ್ ಕೃಷ್ಣ ಅವರ ಭಾವಚಿತ್ರಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಪುಷ್ಪನಮನ ಸಲ್ಲಿಸಿದರು   

ಮೈಸೂರು:ಈಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕವಿ ಸಿದ್ಧಲಿಂಗಯ್ಯ ಹಾಗೂ ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಇಲ್ಲಿನ ಕಾಂಗ್ರೆಸ್ ಪಕ್ಷದ ಭವನದಲ್ಲಿ ಭಾನುವಾರ ಪಕ್ಷದ ಜಿಲ್ಲಾ ಮತ್ತು ನಗರ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ನಮನ ಸಂಗಮ’ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಸ್ಮರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ‘ಕವಿ ಸಿದ್ಧಲಿಂಗಯ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಇವರಿಗೆ ಜ್ಞಾನಪೀಠ ಸಿಗಲಿಲ್ಲ ಎಂಬ ಬೇಸರ ಮತ್ತು ನೋವು ನನಗೆ ಇದೆ. ಅನೇಕ ಚಳವಳಿಗಳಿಗೆ ಇವರ ಕವಿತೆಗಳೆ ಪ್ರೇರಕವಾಗಿದ್ದವು’ ಎಂದರು.

ADVERTISEMENT

ಮೊದಲ ಬಾರಿಗೆ ಶಾಸಕನಾದಾಗ ಸ್ಪೀಕರ್ ಆಗಿದ್ದ ಕೃಷ್ಣ ಅವರು ಹೊಸ ಶಾಸಕರನ್ನು ಗುರುತಿಸಿ ಅವರಿಗೆ ಮಾತನಾಡಲು ಅವಕಾಶ ಕೊಡುತ್ತಿದ್ದರು. ಅವರೊಬ್ಬ ಪ್ರಾಮಾಣಿಕ ರಾಜಕಾರಣಿ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ವಾಸು ಮಾತನಾಡಿ, ‘ದೊರೆಸ್ವಾಮಿ ಅವರು ಈಚೆಗೆ ಮೈಸೂರಿಗೆ ಬಂದಿದ್ದಾಗ ನನ್ನ ಜತೆ 30 ಜನ ಬನ್ನಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಡೋಣ ಎಂದು ಹೇಳಿದ್ದರು. ಆದರೆ, ಮೂವರೂ ಬರಲಿಲ್ಲ. ಅವರ ಕೆಚ್ಚು ಇಂದಿನ ಯುವಜನತೆಗೆ ಬರಬೇಕು’ ಎಂದು ಹೇಳಿದರು.

ಯೂತ್ ಕಾಂಗ್ರೆಸ್‌ನವರು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮಹನೀಯರ ಬದುಕು ಇಂದಿನ ಯುವಜನರಿಗೆ ಆದರ್ಶವಾಗಬೇಕು ಎಂದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಪುಷ್ಪಾ ಅಮರನಾಥ್ ಅವರು ಈ ಮೂವರನ್ನು ನೆನೆದು ಭಾವುಕರಾದರು.

‘ಸೇವೆ ಸಲ್ಲಿಸಿದವರೇ ನಿತ್ಯ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಎಲ್ಲರೂ ಎಲ್ಲರ ತಪ್ಪುಗಳನ್ನು ಮನ್ನಿಸಿಕೊಂಡು ಸೌಹಾರ್ದತೆಯಿಂದ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರು, ಪ್ರಸಕ್ತ ಕಾಲದ ರಾಜಕಾರಣ ಕುರಿತು ಬೇಸರ ವ್ಯಕ್ತಪಡಿಸಿದರು. ಮಾಜಿ ಸ್ಪೀಕರ್ ಕೃಷ್ಣ ಅವರು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಿದ್ದುದ್ದನ್ನು ನೆನಪಿಸಿಕೊಂಡ ಅವರು, ಇಂತಹವರು ನಮಗೆ ಆದರ್ಶವಾಗಬೇಕು ಎಂದರು.

ಒಗ್ಗಟ್ಟಿನ ಕೊರತೆಯಿಂದಲೇ ಕಾಂಗ್ರೆಸ್‌ಗೆ ಸೋಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮಹಿಳಾ ಘಟಕದ ನಗರಾಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮೈಸೂರು ಗ್ರಾಮಾಂತರ ವಿಭಾಗದ ಉಪಾಧ್ಯಕ್ಷ ಯಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಮುಖಂಡರಾದ ಕವಿತಾ, ಸುರೇಶ್‌ ಪಾಳ್ಯ, ಮಾಧ್ಯಮ ವಕ್ತಾರ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.