ನಂಜನಗೂಡು: ಇಲ್ಲಿನ ನಗರಸಭೆಯ ವಿವಿಧ ಸುಂಕ ವಸೂಲಾತಿ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ಶನಿವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರಸಭೆ ವ್ಯಾಪ್ತಿಯಲ್ಲಿ ನೆಲ ಸುಂಕ ವಸೂಲಾತಿ ಹಕ್ಕನ್ನು ಮಂಜುನಾಥ್ ₹8.5 ಲಕ್ಷ ಮೊತ್ತದ ಬಿಡ್ ಕೂಗಿ ಪಡೆದುಕೊಂಡರು. ಖಾಸಗಿ ಬಸ್ ನಿಲ್ದಾಣ ಹಾಗೂ ಟೆಂಟೊ ಸ್ಟ್ಯಾಂಡ್‌ಗಳಲ್ಲಿ ವಾಹನ ನಿಲುಗಡೆ ವಸೂಲಾತಿ ಸುಂಕವನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು ಯಾರು ಮುಂದಾಗದಿದ್ದರಿಂದಾಗಿ ಹರಾಜನ್ನು ಮುಂದುಡಲಾಯಿತು.
ನೀರು ಸರಬರಾಜು ಯೋಜನೆಯ ಮತ್ತು ಬೀದಿ ದೀಪ ನಿರ್ವಹಣೆಯ ಹಳೆಯ ಅನುಪಯುಕ್ತ ಸಾಮಗ್ರಿ ಮತ್ತು ಆರೋಗ್ಯ ಶಾಖೆಯ ಅನುಪಯುಕ್ತ ವಾಹನಗಳು ಹಾಗೂ ಹಳೆಯ ಟೈರ್‌ಗಳ ಹರಾಜು ಬಿಡ್‌ಗಳಲ್ಲಿ ಒಬ್ಬರೆ ವ್ಯಕ್ತಿ ಭಾಗವಹಿಸಿದ್ದರಿಂದ ₹3.8 ಲಕ್ಷ ಬಿಡ್‌ಗೆ ಹಕ್ಕನ್ನು ನೀಡಲಾಯಿತು. ಸದಸ್ಯರು ಒಬ್ಬರೆ ಬಿಡ್‌ದಾರರಿಗೆ ಹಕ್ಕನ್ನು ನೀಡುವ ವಿಚಾರವಾಗಿ ತಕರಾರು ತೆಗೆದರು.
ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ‘ಕೆಲವು ಬಾಬ್ತುಗಳ ಬಿಡ್ ನಡೆಸಲು ಯಾರು ಭಾಗವಹಿಸಿಲ್ಲ, ಕೆಲವಕ್ಕೆ ಬಬ್ಬರೆ ವ್ಯಕ್ತಿ ಬಿಡ್ ಕೂಗಿದ್ದಾರೆ, ಈ ವಿಚಾರವನ್ನು ನಗರಸಭೆ ಕೌನ್ಸಿಲ್ ಮುಂದೆ ಇಟ್ಟು ನಗರಸಭೆ ಅಧ್ಯಕ್ಷರು ಈ ವಿಚಾರವಾಗಿ ಕೈಗೊಳ್ಳಲಾಗುವ ತಿರ್ಮಾನದಂತೆ ಮುಂದುವರೆಯಲಾಗುವುದು’ ಎಂದು ತಿಳಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರೆಹೆನಬಾನು, ಸದಸ್ಯರಾದ ಪ್ರದೀಪ್, ಗಾಯಿತ್ರಿ, ಖಾಲೀದ್ ಅಹಮ್ಮದ್, ಕಪಿಲೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.