ಮೈಸೂರು: ‘ದೇವಾಲಯಗಳಿಗೆ ‘ನಂದಿನಿ’ ತುಪ್ಪ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದರು.
ಇಲ್ಲಿನ ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ(ಮೈಮುಲ್)ದಲ್ಲಿ ಗುರುವಾರ ನಡೆದ ಜಿಲ್ಲಾ ಒಕ್ಕೂಟಗಳ ಅಧಿಕಾರಿಗಳ ಸಭೆಯಲ್ಲಿ ‘ನಂದಿನಿ’ ತುಪ್ಪದ ವಿನೂತನ ಪ್ಯಾಕೆಟ್ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
‘ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ‘ನಂದಿನಿ’ ತುಪ್ಪ ಮಾರಾಟ ಮಾಡುತ್ತಿದ್ದೇವೆ. ಮಹದೇಶ್ವರ ದೇವಸ್ಥಾನ, ಚಾಮುಂಡೇಶ್ವರಿ ದೇಗುಲಕ್ಕೂ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತಿದ್ದೇವೆ. ಮುಜರಾಯಿ ಇಲಾಖೆಗೆ ಒಳಪಡುವ ‘ಎ’, ‘ಬಿ’ ಗ್ರೇಡ್ ದೇವಾಲಯಗಳಲ್ಲಿ ದಾಸೋಹ, ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ, ಯಾವೆಲ್ಲಾ ದೇವಾಲಯಗಳಿಂದ ಬೇಡಿಕೆ ಬಂದರೂ ಪೂರೈಸಲಾಗುವುದು. ಸದ್ಯ ನಮ್ಮಲ್ಲಿ 3ಸಾವಿರ ಮೆಟ್ರಿಕ್ ಟನ್ ತುಪ್ಪ ಸಿದ್ಧಪಡಿಸುತ್ತಿದ್ದು, ಅಷ್ಟನ್ನೂ ಮಾರುತ್ತಿದ್ದೇವೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ 1.50 ಕೋಟಿ ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿದ್ದು, 50ಲಕ್ಷ ಲೀಟರ್ ನೇರವಾಗಿ ಮಾರಾಟವಾಗುತ್ತಿದೆ. ‘ಕ್ಷೀರಭಾಗ್ಯ’ ಯೋಜನೆಗಾಗಿ 24 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸಿ, ಅದರ ಕಬ್ಬಿಣದ ಅಂಶವನ್ನು ತುಪ್ಪವಾಗಿ ಬಳಸಿಕೊಳ್ಳುತ್ತಿದ್ದೇವೆ. ಹಾಲಿನ ಪುಡಿಯನ್ನೂ ಮಾರಿ ಸೂಕ್ತ ನಿರ್ವಹಣೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಎಲ್ಲಾ ಕಡೆಗಳಲ್ಲಿಯೂ ಸಮೃದ್ಧಿ ಹಾಲು ಲಭ್ಯವಿದೆ. ಅದಕ್ಕೆ ಹೆಚ್ಚಿನ ಬೇಡಿಕೆಯಿದೆ. ಅದನ್ನು ಪೂರೈಸುವ ಕೆಲಸ ಆಗುತ್ತಿದೆ. ಫ್ಯಾಟ್ ಒಳಗೊಂಡು ಹೆಚ್ಚಾಗಿ ಸಿಹಿ ತಿಂಡಿ ಬಳಕೆಯಲ್ಲಿ ಸಮೃದ್ಧಿ ಹಾಲು ಬಳಕೆ ಮಾಡಲಾಗುತ್ತಿದ್ದು, ಅದನ್ನು ನಿರಂತರವಾಗಿ ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುತ್ತಿದೆ. ಇನ್ನೂ ಮಾಲ್ ಸೇರಿ ಇನ್ನಿತರ ಖಾಸಗಿ ಕಡೆಗಳಲ್ಲಿ ನಿಗದಿತ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ನಮಗೆ ಯಾವುದೇ ನಷ್ಟವಿಲ್ಲ. ಕಂಪನಿಯವರು ನಮ್ಮಲ್ಲಿ ನೇರವಾಗಿ ಕೊಂಡು ಅವರಿಗೆ ನಾವು ನೀಡಿರುವ ಮಾರ್ಜಿನ್ ಅನ್ನು ಅವರು ಗ್ರಾಹಕರಿಗೆ ಕೊಟ್ಟು ನಮ್ಮ ಉತ್ಪನ್ನವಾದ ನಂದಿನಿ ತುಪ್ಪವನ್ನು ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಲಾಭ’ ಎಂದು ತಿಳಿಸಿದರು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯ್ಕ್ ಕೆ.ಎನ್., ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.
Cut-off box - ಕ್ಯೂ ಆರ್ ಕೋಡ್... ಕ್ಯೂ ಆರ್ ಕೋಡ್ ಒಳಗೊಂಡ ‘ನಂದಿನಿ’ ತುಪ್ಪದ ನೂತನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಯಿತು. ‘ಪ್ಯಾಕೆಟ್ ಮೇಲೆ ಹಾಲೋಗ್ರಾಂ ಮುದ್ರಿಸಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಯಾರಿಸಿದ ದಿನಾಂಕ ಯಾವ ದಿನಾಂಕದವರೆಗೆ ಬಳಸಬಹುದು ಎಂಬಿತ್ಯಾದಿ ಮಾಹಿತಿ ದೊರೆಯುತ್ತದೆ. 500 ಗ್ರಾಂ. ಮತ್ತು 1 ಲೀಟರ್ ಪ್ಯಾಕೆಟ್ ವಿನ್ಯಾಸ ಬದಲಾಗಿದೆ. ಪ್ಯಾಕೆಟ್ ಆಕರ್ಷಕಗೊಳಿಸಿದ್ದು ತುಪ್ಪದಲ್ಲಿಯಾಗಲಿ ಅಥವಾ ದರದಲ್ಲಿಯಾಗಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಂದಿನoತೆ ಅದೇ ಸ್ವಾದದ ಪೌಷ್ಟಿಕಯುಕ್ತ ತುಪ್ಪವನ್ನು ಗ್ರಾಹಕರು ಸವಿಯಬಹುದಾಗಿದೆ’ ಎಂದು ಶಿವಸ್ವಾಮಿ ತಿಳಿಸಿದರು. ‘ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ದೂರುಗಳಿದ್ದರೂ ತಿಳಿಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.