ತಿ.ನರಸೀಪುರ: ತುಪ್ಪ ಮತ್ತು ಬೆಣ್ಣೆಯ ಜೊತೆಗೆ ನಂದಿನ ಹಾಲಿನ ಇತರೆ ಉತ್ಪನ್ನಗಳನ್ನು ಹೆಚ್ಚು ಬಳಸುವಂತೆ ಮೈಮೂಲ್ ಅಧ್ಯಕ್ಷ ಆರ್.ಚೆಲುವರಾಜು ನಂದಿನಿ ಹಾಲಿನ ಗ್ರಾಹಕರಿಗೆ ಕರೆ ನೀಡಿದರು.
ತಾಲ್ಲೂಕಿನ ಕುಳ್ಳನಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶನಿವಾರ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ನಂದಿನಿ ಹಾಲಿನ 250 ಉತ್ಪನ್ನಗಳು ಈಗಾಗಲೇ ಜನಪ್ರಿಯತೆ ಪಡೆದಿವೆ. ಹಾಲು ಉತ್ಪಾದಕರು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವುದರಿಂದಲೇ ಇಂದು ನಂದಿನಿ ಬಹು ಎತ್ತರಕ್ಕೆ ಬೆಳೆದಿದೆ. ಮೈಸೂರು ಹಾಲು ಒಕ್ಕೂಟದಿಂದ ಪನೀರ್ ಹಾಗು ಚಾಕೊಲೇಟ್ ತಯಾರಿಕಾ ಘಟಕ ತೆರೆಯುವ ಉದ್ದೇಶವಿದೆ.
ಇದು ರೈತರಿಗೆ ಅನುಕೂಲ ಕಲ್ಪಿಸಲಿದೆ. ಒಕ್ಕೂಟಕ್ಕೂ ಉತ್ತಮ ಲಾಭ ಸಿಗಲಿದೆ. ಲಾಭದ ಫಲವು ರೈತರಿಗೆ ಸೇರಲಿದೆ ಎಂದು ಅಭಿಪ್ರಾಯ ಪಟ್ಟರು.
ಒಕ್ಕೂಟಕ್ಕೆ ದಿನಂಪ್ರತಿ ಪೂರೈಕೆ ಯಾಗುತ್ತಿರುವ 9 ಲಕ್ಷ ಲೀಟರ್ ಹಾಲಿನಲ್ಲಿ 3 ಲಕ್ಷ ಲೀಟರ್ ಹಾಲು ಉಳಿಯುತ್ತಿರುವುದರಿಂದ, ಹಾಲಿನ ಪೌಡರ್ ಮಾಡಿ ಕ್ಷೀರಭಾಗ್ಯ ಹಾಗೂ ಇತರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದರು.
ಮೈಮೂಲ್ ಮಾಜಿ ಅಧ್ಯಕ್ಷ ಓಂ ಪ್ರಕಾಶ್ ಮಾತನಾಡಿ, ತಾಲ್ಲೂಕಿನಲ್ಲಿ ವ್ಯವಸಾಯದ ಜೊತೆಗೆ ರೈತರು ಹೈನುಗಾರಿಕೆ ಅಳವಡಿಸಿಕೊಂಡಿ ರುವುದರಿಂದ ಇಂದು 147 ಸಹಕಾರ ಸಂಘಗಳಿದ್ದು, ಉತ್ತಮ ಹಾಲು ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಹಾಲಿಗೆ ನಾವೇ ಹೆಚ್ಚಿನ ಹಣ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಹಸುಗಳಿಗೆ ಕಳಪೆ ಗುಣಮಟ್ಟದ ಪಶು ಆಹಾರ ನೀಡದಂತೆ ಹಾಲು ಉತ್ಪಾದಕರಿಗೆ ಸಲಹೆ ನೀಡಿದರು. ಸಂಘದ ಕಾರ್ಯದರ್ಶಿ ಕೆ.ಸಿ.ಭವಾನಿ ಸಂಘದ ವಾರ್ಷಿಕ ವರದಿ ಮಂಡಿಸಿ, ಸಂಘವು ಪ್ರಸಕ್ತ ಸಾಲಿನಲ್ಲಿ ₹2,11,654 ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು.
ಈ ವೇಳೆ ಅರಣ್ಯ ಇಲಾಖೆ ವತಿಯಿಂದ ಸಂಘದ ಸದಸ್ಯರಿಗೆ ಸಸಿಗಳನ್ನು ನೀಡಲಾಯಿತು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಬಿ.ತಿಮ್ಮೇಗೌಡ, ಉಪಾಧ್ಯಕ್ಷ ಶಿವಕುಮಾರ್, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಲಿಂಗರಾಜು, ವಲಯ ಅರಣ್ಯಾಧಿಕಾರಿ ರಾಜೇಶ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಪ್ರಮೋದ್, ಆರ್ಥಿಕ ಸಾಕ್ಷರ ಸಲಹೆಗಾರ ಬಿ.ಜಯರಾಮು, ಪಿ.ಪುಟ್ಟಸ್ವಾಮಿ, ಡಾ.ದಿವಾಕರ್, ಡಾ.ಶಿವಪ್ರಸಾದ್, ಸಂಘದ ನಿರ್ದೇಶಕರಾದ ಕೆ.ಪಿ.ರಂಗನಾಥ, ಕೆ.ಆರ್.ಶಿವರಾಮು, ಪುಟ್ಟಸ್ವಾಮಿ, ವೆಂಕಟೇಶ್, ಶ್ರೀಕಂಠೇಗೌಡ, ಭಾಗ್ಯಮ್ಮ, ಪುಟ್ಟಸ್ವಾಮಿ, ಭಾಗ್ಯಮ್ಮ ಸೇರಿದಂತೆ ಗ್ರಾಮಸ್ಥರು, ಷೇರುದಾರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.