ನಂಜನಗೂಡು: ‘ನಗರಸಭೆಗೆ ಸರ್ಕಾರದ ವಿವಿಧ ಅನುದಾನಗಳು ಹಾಗೂ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ನೀರಿನ ತೆರಿಗೆ ಬಾಬ್ತುಗಳಿಂದ ₹63.9 ಕೋಟಿ ಹಣ ಸಂಗ್ರಹವಾಗುತ್ತಿದ್ದು, ಅಭಿವೃದ್ಧಿ ಕಾಮಗಾರಿ ಅನುದಾನ, ನೌಕರರ ವೇತನ ಕಳೆದು ನಗರಸಭೆಗೆ ₹75.73ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ 2025-26ನೇ ಸಾಲಿನ ಆಯ-ವ್ಯಯ ಮಂಡಿಸಿ ಮಾತನಾಡಿದರು.
‘ಗುಂಡಿ ಮುಚ್ಚಲು ₹1 ಕೋಟಿ ಹಾಗೂ ಇತರೆ ಕರ್ಚುಗಳೂ ಸೇರಿದಂತೆ ಒಟ್ಟು ₹51.66.35 ಕೋಟಿ ವೆಚ್ಚವಾಗಲಿದ್ದು, ನಗರಸಭೆ ಪ್ರಾರಂಭಿಕ ಶಿಲ್ಕು ₹16.59 ಕೋಟಿ ಸೇರಿ ಒಟ್ಟು ಪಾವತಿ ₹63.24 ಕೋಟಿಗಳು. ಆದಾಯದಿಂದ ವೆಚ್ಚವನ್ನು ಕಳೆದು ₹75.73 ಲಕ್ಷ ಉಳಿತಾಯವಾಗಲಿದೆ’ ಎಂದು ಹೇಳಿದರು.
ಸದಸ್ಯ ಹೆಚ್.ಎಸ್.ಮಹದೇವಸ್ವಾಮಿ ಮಾತನಾಡಿ, ‘ಕಳೆದ ಬಜೆಟ್‌ನಲ್ಲಿ ಪೌರಕಾರ್ಮಿಕರ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನ ಮೀಸಲಿಡಲಾಗಿತ್ತು, ಈ ಬಾರಿ ಪೌರ ಕಾರ್ಮಿಕರ ಅಭಿವೃದ್ಧಿಗೆ ಮಾನ್ಯತೆ ನೀಡಲಾಗಿಲ್ಲ. ರೆವಿನ್ಯು ಬಡಾವಣೆಗಳ 8 ಸಾವಿರ ಮನೆಗಳಿಂದ ಎರಡು ಪಟ್ಟು ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ, ಆದರೂ ಇವುಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ’ ಎಂದು ದೂರಿದರು.
ಆಯುಕ್ತ ವಿಜಯ್ ಮಾತನಾಡಿ,‘ಕಳೆದ ನವೆಂಬರ್‌ನಲ್ಲಿ ಸರ್ಕಾರ ಈ ಬಡಾವಣೆಗಳ ಆಸ್ತಿ ತೆರಿಗೆ ಬಗ್ಗೆ ತಿದ್ದುಪಡಿ ಮಸೂದೆ ಮಂಡಿಸಿದ್ದು, ಆ ಬಡಾವಣೆಗಳಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಸದಸ್ಯ ಹೆಚ್.ಎಸ್ .ಮಹದೇವಸ್ವಾಮಿ,‘ನಮ್ಮ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕುತ್ತಿಲ್ಲ’ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.
ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ,‘ಬಜೆಡ್ ಮಂಡನೆಗೂ ಮುಂಚೆ ಎರಡು ಬಾರಿ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಸದಸ್ಯರು ಸಭೆಯಲ್ಲಿ ಭಾಗವಹಿಸದೆ, ಬಜೆಟ್ ಮಂಡನೆ ಸಭೆಯಲ್ಲಿ ತಕರಾರು ತೆಗೆಯುವುದು ಸರಿಯಲ್ಲ’ ಎಂದು ಹೇಳಿದರು.
ಸದಸ್ಯ ಕಪಿಲೇಶ್ ಮಾತನಾಡಿ,‘ನಗರಸಭೆ ಚುನಾವಣೆ ನಡೆದು ಫಲಿತಾಂಶ ಬಂದ ನಂತರ, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಸರ್ಕಾರ 18 ತಿಂಗಳು ವಿಳಂಬ ಮಾಡಿತು. ಎರಡನೆ ಅವಧಿಗೂ ಅಧ್ಯಕ್ಷ ಸ್ಥಾನದ ಚುನಾವಣೆಗಾಗಿ ಮೀಸಲಾತಿ ನಿಗಧಿಪಡಿಸಲು ವಿಳಂಬ ಧೋರಣೆ ಮುಂದುವರೆದಿದ್ದರಿಂದ ನಮ್ಮ ಅಧಿಕಾರದ ಅವಧಿ ಮೊಟಕುಗೊಂಡಿತು. ಸರ್ಕಾರ ಇನ್ನು ಮುಂದಾದರೂ ನಗರಸಭೆ ಚುನಾವಣೆ, ಮುಗಿದ ನಂತರ ಶೀಘ್ರವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರೆಹೆನಬಾನು, ಸದಸ್ಯರಾದ ಗಾಯಿತ್ರಿ ಮೋಹನ್, ಮೀನಾಕ್ಷಿ ನಾಗರಾಜು, ಗಂಗಾಧರ್, ಎಸ್.ಪಿ.ಮಹೇಶ್, ಖಾಲೀದ್ ಅಹಮ್ಮದ್, ಯೋಗೇಶ್, ಮಹದೇವಪ್ರಸಾದ್, ವಸಂತ, ಶ್ವೇತಲಕ್ಷ್ಮಿ, ಗಿರೀಶ್ ಬಾಬು, ಪಿ.ದೇವ, ನಂದಿನಿ, ಸಿದ್ದಿಕ್, ಮಂಜುಳ ಅನಂತು, ಪ್ರದೀಪ್, ಸಿದ್ದರಾಜು, ನಾಗಮಣಿ, ಮಂಗಳಮ್ಮ, ಮಹೇಶ್ ಅತ್ತಿಖಾನೆ, ಪರಿಸರ ಎಂಜಿನಿಯರ್ ಮೈತ್ರಾದೇವಿ, ಆರೋಗ್ಯಾಧಿಕಾರಿಗಳಾದ ರೇಖಾ, ವಂಸತ್ ಕುಮಾರ್ ಉಪಸ್ಥಿತರಿದ್ದರು.
ಸದಸ್ಯ ಮಹದೇವಸ್ವಾಮಿ ಸಭಾತ್ಯಾಗ ಉಪಾಧ್ಯಕ್ಷೆ ರೆಹನಾಭಾನು ಉಪಸ್ಥಿತಿ ರೆವಿನ್ಯು ಬಡಾವಣೆಗಳಿಂದ ತೆರಿಗೆ ಸಂಗ್ರಹ ಗುರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.