ADVERTISEMENT

ಮಾಲ್ಡೀವ್ಸ್‌ನಲ್ಲಿ ‘ನಂಜನಗೂಡು ರಸಬಾಳೆ’

ಜೆಎಸ್‌ಎಸ್–ಕೆವಿಕೆ ಸಹಯೋಗದಲ್ಲಿ ಇದೇ ಮೊದಲಿಗೆ ರಫ್ತು

ಎಂ.ಮಹೇಶ
Published 30 ಜನವರಿ 2026, 3:20 IST
Last Updated 30 ಜನವರಿ 2026, 3:20 IST
ಮಾಲ್ಡೀವ್ಸ್‌ನ ಶಾಪ್‌ವೊಂದರಲ್ಲಿ ನಂಜನಗೂಡು ರಸಬಾಳೆಯನ್ನು ವ್ಯಾಪಾರಕ್ಕೆ ಇಟ್ಟಿದ್ದ ದೃಶ್ಯ
ಮಾಲ್ಡೀವ್ಸ್‌ನ ಶಾಪ್‌ವೊಂದರಲ್ಲಿ ನಂಜನಗೂಡು ರಸಬಾಳೆಯನ್ನು ವ್ಯಾಪಾರಕ್ಕೆ ಇಟ್ಟಿದ್ದ ದೃಶ್ಯ   

ಮೈಸೂರು: ವಿಶಿಷ್ಟ ರುಚಿಯ ಕಾರಣದಿಂದಾಗಿ ಭೌಗೋಳಿಕ ಮಾನ್ಯತೆ (ಜಿಐ) ಪಡೆದಿರುವ, ಮೈಸೂರಿನ ಹೆಗ್ಗರುತಾದ ‘ನಂಜನಗೂಡು ರಸಬಾಳೆ’ಯು ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಮಾರಾಟವಾಗುತ್ತಿದೆ. ಇದೇ ಮೊದಲ ಬಾರಿಗೆ ಈ ರಫ್ತು ಮಾಡಲಾಗಿದೆ.

ಜಿಲ್ಲೆಯ ಸುತ್ತೂರಿನಲ್ಲಿರುವ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಇದಕ್ಕೆ ಸೇತುವೆಯಾಗಿ ಕೆಲಸ ಮಾಡಿದ್ದು, ರಸಬಾಳೆಯು ಮಾಲ್ಡೀವ್ಸ್‌ ಗ್ರಾಹಕರ ಗಮನಸೆಳೆದಿದೆ.

ಈಚೆಗೆ ಸುತ್ತೂರಿನಲ್ಲಿ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಹೆಚ್ಚು ಸ್ಮರಣೀಯವಾಗಿಸುವ ಕೆವಿಕೆಯ ವಿಜ್ಞಾನಿಗಳ ಪ್ರಯತ್ನದ ಭಾಗವಾಗಿ ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಯನ್ನು ರಫ್ತು ಮಾಡಲಾಗಿತ್ತು. ಇದರ ಮೂಲಕ ಈ ಎರಡು ಬೆಳೆಗಳ ರಫ್ತಿಗೆ ಅವಕಾಶದ ಬಾಗಿಲು ತೆರೆದಿದೆ.  

ADVERTISEMENT

ಎಷ್ಟೆಷ್ಟು ರವಾನೆ?:

ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದ ಕೆ.ಎಂ. ಶಿವರಾಜು ಹಾಗೂ ರವೀಶ್ ಎನ್., ನಾಗಪ್ಪ ಅವರಿಂದ 500 ಕೆ.ಜಿ. ರಸಬಾಳೆ ಹಾಗೂ 35 ಕೆ.ಜಿ. ವೀಳ್ಯದೆಲೆಯನ್ನು ಖರೀದಿಸಿ, ಏಜೆಂಟ್‌ ಇಮ್ರಾನ್‌ ಪಾಷಾ ಅವರ ಮೂಲಕ ರಫ್ತು ಮಾಡಲಾಗಿದೆ.

‘ಅಪೆಡಾ (ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತನ್ನು ಉತ್ತೇಜಿಸುವ ಪ್ರಮುಖ ಸಂಸ್ಥೆ) ನೆರವಿನೊಂದಿಗೆ ಜ.15ರಂದು ರವಾನಿಸಿದ್ದ ಎರಡೂ ಬೆಳೆಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಮಳಿಗೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಉತ್ತಮ ದರವೂ (ಪ್ರೀಮಿಯಂ ಪ್ರೈಸ್) ಸಿಕ್ಕಿದೆ’ ಎಂದು ಕೆವಿಕೆ ಮುಖ್ಯಸ್ಥ ಬಿ.ಎನ್‌. ಜ್ಞಾನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತರಬೇತಿಗೆ ಕ್ರಮ: 

‘ವಿಮಾನದಲ್ಲಿ ಉತ್ಪನ್ನಗಳನ್ನು ಕಳುಹಿಸುವ ಮುನ್ನ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಪ್ಯಾಕಿಂಗ್ ಹಾಗೂ ಪ್ರೊಸೆಸಿಂಗ್‌ ನಡೆಯಿತು. ಇನ್ನು‌ಮುಂದೆ ಇಲ್ಲೇ ಪ್ಯಾಕಿಂಗ್‌ ಹಾಗೂ ‍ಪ್ರೊಸೆಸಿಂಗ್‌ಗೆ ಮಾಡಲು ರೈತರಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

‘ರಫ್ತು ಮಾಡುವ ಉತ್ಪನ್ನ ಗುಣಮಟ್ಟದಿಂದ ಕೂಡಿರಬೇಕು. ರಸಬಾಳೆಗೆ ಬೇಡಿಕೆ ಇದ್ದು, ಸಾವಯವ ವಿಧಾನದಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಸಿಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ರಫ್ತುದಾರರು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಟೇನರ್ ಮೂಲಕ ಸಮುದ್ರಮಾರ್ಗದಲ್ಲಿ ಅರಬ್‌ ದೇಶಗಳು, ಶ್ರೀಲಂಕಾ ಮೊದಲಾದ ಕಡೆಗಳಿಗೆ ರವಾನಿಸಲು ಉದ್ದೇಶಿಸಿದ್ದಾರೆ’ ಎಂದು ಜ್ಞಾನೇಶ್ ತಿಳಿಸಿದರು.

ರಸಬಾಳೆ ತಳಿಯನ್ನು ಪ್ರಸ್ತುತ ಸುಮಾರು 85 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹನುಮನಪುರ, ಸಿಂಧುವಳ್ಳಿ, ಮಾಡ್ರಹಳ್ಳಿ, ಹೆಮ್ಮರಗಾಲ, ಹಂಪಾಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೊಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಅಂಬಳೆ, ದೇವರಸನಹಳ್ಳಿ ಹಾಗೂ ಕೋಡಿನರಸೀಪುರದಲ್ಲಿ ಬೆಳೆಯಲಾಗುತ್ತಿದೆ. 

ಮಾಲ್ಡೀವ್ಸ್‌ ರೆಸ್ಟೊರೆಂಟ್‌ ಒಂದರಲ್ಲಿ ಮೈಸೂರು ವೀಳ್ಯದೆಲೆ ಇಟ್ಟಿರುವುದು

500 ಕೆ.ಜಿ. ನಂಜನಗೂಡು ರಸಬಾಳೆಮ 35 ಕೆ.ಜಿ. ವೀಳ್ಯದೆಲೆಯನ್ನು ರಫ್ತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.