ADVERTISEMENT

ನಂಜನಗೂಡು | ಫಸಲು ನಾಶ: ಪರಿಹಾರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:42 IST
Last Updated 20 ಜೂನ್ 2025, 14:42 IST
ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿದ್ದರಿಂದ ರಾಂಪುರ, ಹುಲ್ಲಹಳ್ಳಿ ನಾಲೆ ವ್ಯಾಪ್ತಿಯ ರೈತರ ಭತ್ತದ ಫಸಲು ಹಾಳಾಗಿದ್ದು ಪರಿಹಾರ ನೀಡುವಂತೆ ಆಗ್ರಹಿಸಿ ನಂಜನಗೂಡಿನ ತಹಶೀಲ್ದಾರ್ ಕಚೇರಿ ಮುಂಭಾಗ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು 
ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿದ್ದರಿಂದ ರಾಂಪುರ, ಹುಲ್ಲಹಳ್ಳಿ ನಾಲೆ ವ್ಯಾಪ್ತಿಯ ರೈತರ ಭತ್ತದ ಫಸಲು ಹಾಳಾಗಿದ್ದು ಪರಿಹಾರ ನೀಡುವಂತೆ ಆಗ್ರಹಿಸಿ ನಂಜನಗೂಡಿನ ತಹಶೀಲ್ದಾರ್ ಕಚೇರಿ ಮುಂಭಾಗ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು    

ನಂಜನಗೂಡು: ಕಬಿನಿ ಅಣೆಕಟ್ಟೆಯಿಂದ 22 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ್ದರಿಂದ ತಾಲ್ಲೂಕಿನ ರಾಂಪುರ, ಹುಲ್ಲಹಳ್ಳಿ ನಾಲೆಗಳ ಬಯಲಿನಲ್ಲಿ ರೈತರು ಬೆಳೆದ ಫಸಲು ಜಾಲಾವೃತಗೊಂಡು ಹಾಳಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.

ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಗುರುವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪರಿಹಾರಕ್ಕೆ ತಹಶೀಲ್ದಾರರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ 20 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ತಾಲ್ಲೂಕಿನ ರಾಂಪುರ, ಹುಲ್ಲಹಳ್ಳಿ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ 15 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಭತ್ತದ ಫಸಲು ಕಟಾವು ಮಾಡಲಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕರೆಗೆ ₹25 ಸಾವಿರ ಖರ್ಚು ಮಾಡಿ ಬೆಳೆದಿದ್ದ ಭತ್ತದ ಫಸಲು ರೈತರ ಕೈಸೇರದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

ADVERTISEMENT

‘ಅತಿವೃಷ್ಟಿ, ಅನಾವೃಷ್ಟಿಯಿಂದ ಆದ ಬೆಳೆ ನಷ್ಟ ಮತ್ತು ಪ್ರಾಣಿಗಳ ದಾಳಿಯಿಂದ ಉಂಟಾಗುವ ಪ್ರಾಣಹಾನಿಗೆ ₹10 ಸಾವಿರ ಕೋಟಿ ಪರಿಹಾರ ನಿಧಿ ಕಾಯ್ದಿರಿಸಬೇಕು, ಹುಲ್ಲಹಳ್ಳಿ, ರಾಂಪುರ ಅಚ್ಚುಕಟ್ಟು ಪ್ರದೇಶದಲ್ಲಿ ಆದ ಬೆಳೆ ನಷ್ಟಕ್ಕೆ ಕನಿಷ್ಠ ₹50 ಸಾವಿರ ಪರಿಹಾರ ಧನ ಘೋಷಿಸಬೇಕು, ಪ್ರತಿ ಬಾರಿ ಕಪಿಲಾ ನದಿ ಪ್ರವಾಹಕ್ಕೆ ಸಿಲುಕಿ ಫಸಲು ನಾಶಕ್ಕೆ ಒಳಗಾಗುತ್ತಿರುವ ರೈತರ ಕುಟುಂಬಗಳ ರಕ್ಷಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಶುಕ್ರವಾರ ನದಿ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿತ್ತು.    

ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್, ಇಮ್ಮಾವು ರಘು, ಶ್ವೇತಾ, ಮಹದೇವನಾಯಕ, ನಂಜುಂಡ, ಯೋಗಿ, ಶಿವಣ್ಣ, ಶಂಕರ್ ನಾಯ್ಕ, ರಂಗಸ್ವಾಮಿ ನಾಯ್ಕ, ಸಣ್ಣ ಶೆಟ್ಟಿ, ಗೋವಿಂದ ನಾಯ್ಕ, ಪೈಲ್ವಾನ್ ಮಹದೇವ ನಾಯ್ಕ, ಪುಟ್ಟ ಸ್ವಾಮಿ ಉಪಸ್ಥಿತರಿದ್ದರು.

Highlights - ತಹಶೀಲ್ದಾರರಿಗೆ ಮನವಿ ಸಲ್ಲಿಕೆ  15 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಭತ್ತ ಎಕರೆಗೆ ₹25 ಸಾವಿರ ಖರ್ಚು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.