
ನಂಜನಗೂಡು: ‘ದೇಶದಲ್ಲಿ ಆಳುವ ಸರ್ಕಾರಗಳು ರೈತರನ್ನು ಮತ ಯಂತ್ರವನ್ನಾಗಿ ಬಳಕೆ ಮಾಡಿಕೊಂಡು, ರೈತರ ಶೋಷಣೆಗೆ ಇಳಿದಿವೆ. ರೈತರು ಬೀದಿಗಿಳಿದು ಹೋರಾಟ ನಡೆಸದಿದ್ದಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ’ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.
ತಾಲ್ಲೂಕಿನ ನೇರಳೆಯಲ್ಲಿ ಶುಕ್ರವಾರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಪ್ರತಿದಿನ ₹15 ಲಕ್ಷ ಕೋಟಿ ಸಾಲ ಮಾಡುವ ಮೂಲಕ ಬಂಡವಾಳ ಶಾಹಿಗಳಿಗೆ ದೇಶವನ್ನು ಮಾರಾಟ ನಡೆಸುವ ಹುನ್ನಾರ ನಡೆಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡದೆ, ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ರೈತರ ಸಮಸ್ಯೆ, ಹಕ್ಕುಗಳನ್ನು ಪಡೆಯಲು ರೈತರು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ಗ್ರಾಮ ಹಂತದಲ್ಲಿ ರೈತ ಸಂಘದ ಗ್ರಾಮ ಘಟಕಗಳನ್ನು ತೆರೆದು ಯುವಕರನ್ನು ಸಂಘಟಿಸಲಾಗುತ್ತಿದೆ. ಯುವಕರು ರೈತರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಮುಂದಾಗಬೇಕು ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾಧ್ಯಕ್ಷ ಸತೀಶ್ ರಾವ್, ಮುಖಂಡರಾದ ಬೊಕ್ಕಳ್ಳಿ ನಂಜುಂಡಸ್ವಾಮಿ, ರಂಗಸ್ವಾಮಿ ನಾಯಕ, ಶಂಕರ ನಾಯಕ, ಮಹದೇವ ನಾಯಕ, ಗಟ್ಟವಾಡಿಪುರ ಮಹದೇವು, ಮಹೇಶ್, ಸಿದ್ದೇಗೌಡ, ಕಿರಣ್, ಮಂಜುನಾಥ, ನಾಗರಾಜು, ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.