ನಂಜನಗೂಡು: ‘ಶರಣೆ ಅಕ್ಕಮಹಾದೇವಿ 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜ ಸುಧಾರಣೆಗೆ ದುಡಿದ ಮಹಾಮಾತೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ನಗರದಲ್ಲಿ ಶನಿವಾರ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತಿಮಾರ್ಗದಲ್ಲಿ ನಡೆದು ಶಿವನ ಸಾಕ್ಷಾತ್ಕಾರ ಪಡೆದ ಅಕ್ಕ ಮಹಾದೇವಿ ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆ, ಜಗಜ್ಯೋತಿ ಬಸವಣ್ಣ ಸೇರಿದಂತೆ ಹಲವು ಮಹನೀಯರು ಅನುಭವ ಮಂಟಪದ ಮೂಲಕ ಸಮಾನತೆ ಸಾಧಿಸಲು ದುಡಿದಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಕಪಿಲಾ ನದಿಯ ಪ್ರವಾಹದಿಂದ ಆಗುವ ಹಾನಿಯನ್ನು ತಪ್ಪಿಸಲು ₹70 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮತ್ತು ₹10 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಸ್ಪತ್ರೆಗೆ ತುರ್ತು ಚಿಕಿತ್ಸಾ ಘಟಕ (ಟ್ರಾಮಾ ಕೇರ್ ಸೆಂಟರ್) ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಪ್ರತಿ ಮಳೆಗಾಲದಲ್ಲಿ ಕಪಿಲಾ ನದಿಯ ಪ್ರವಾಹದಿಂದ ಶ್ರೀಕಂಠೇಶ್ವರ ದೇವಾಲಯದ ಸುತ್ತಲಿನ ಪ್ರದೇಶಗಳು, ಬಡಾವಣೆಗಳು ಜಲಾವೃತಗೊಂಡು ಹಲವು ಮನೆಗಳು ಹಾನಿಗೊಳಗಾಗುತ್ತವೆ. ಪರಶುರಾಮ ದೇವಾಲಯ ಜಲಾವೃತಗೊಂಡು ಭಕ್ತರಿಗೆ ದೇವರ ದರ್ಶನಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ನಮ್ಮ ಮನವಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ₹ 70 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ, ನಗರದ ಪ್ರವಾಸಿ ಮಂದಿರದ ಕಪಿಲಾ ನದಿ ಫಾಸಲೆಯಿಂದ ಪರಶುರಾಮ ದೇವಾಲಯದವರೆಗೆ ನದಿಗೆ ತಡೆಗೋಡೆ ನಿರ್ಮಾಣ, ವಾಕಿಂಗ್ ಪಾತ್ ನಿರ್ಮಾಣ ಮಾಡಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಲು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ಮುಖಂಡರಾದ ಕಳಲೆ ಕೇಶವಮೂರ್ತಿ , ತಾಲ್ಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸಿಂದವಳ್ಳಿ ಕೆಂಪಣ್ಣ , ಎನ್. ಮಹೇಶ್ , ರಾಜಶೇಖರ್ , ಬಸವ ಯೋಗಿ , ಶಿವಣ್ಣ , ಶ್ರೀಮತಿ ಕೋಮಲ , ಬಾಲರಾಜ್ , ಶಿವು , ಬಸಪ್ಪ , ನಂಜುಂಡಸ್ವಾಮಿ , ಅಮರ್ ಉಪಸ್ಥಿತರಿದ್ದರು.
Highlights - ಪ್ರತಿ ಮಳೆಗಾಲದಲ್ಲಿ ಕಪಿಲಾ ನದಿಯಲ್ಲಿ ಪ್ರವಾಹ ನದಿಗೆ ತಡೆಗೋಡೆ ನಿರ್ಮಾಣ, ವಾಕಿಂಗ್ ಪಾತ್ ನಿರ್ಮಾಣ ಪ್ರವಾಸಿ ತಾಣವಾಗಿ ರೂಪಿಸಲು ಕಾಮಗಾರಿ ಆರಂಭ
Cut-off box - ‘ಟ್ರಾಮಾ ಕೇರ್ ಸೆಂಟರ್ ’ ‘ಊಟಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಬಾಗಲಕೋಟೆಯಿಂದ ನಂಜನಗೂಡು ಮೂಲಕ ಚಾಮರಾಜನಗರ - ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದರಿಂದಾಗಿ ಅಪಘಾತಗಳ ಹೆಚ್ಚಿವೆ ತಾಲ್ಲೂಕಿನ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 336 ಅಪಘಾತ ಪ್ರಕರಣ ದಾಖಲಾಗಿವೆ 120 ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಅಪಘಾತ ಸಂದರ್ಭ ತುರ್ತಾಗಿ ಚಿಕಿತ್ಸೆ ನೀಡಲು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಮಂಜೂರು ಮಾಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ತಾಲ್ಲೂಕು ಆಸ್ಪತ್ರೆಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಆರಂಭಿಸಿ ಯಂತ್ರೋಪಕರಣ ಅನಸ್ತೇಶಿಯಾ ವಿಭಾಗ ಹೆಚ್ಚುವರಿ ಆಂಬುಲೆನ್ಸ್‌ಗಳನ್ನು ನೀಡಲು ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.