ADVERTISEMENT

ನಂಜನಗೂಡು | ಹಳೆ ನಕ್ಷೆಯಂತೆಯೇ ಮೇಲ್ಸೇತುವೆ ನಿರ್ಮಾಣ

ನಂಜನಗೂಡಿನಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:56 IST
Last Updated 5 ಸೆಪ್ಟೆಂಬರ್ 2025, 3:56 IST
ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಗುರುವಾರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ  ನಗರದಲ್ಲಿ  ನಿರ್ಮಾಣಗೊಳ್ಳಲಿರುವ ರೈಲ್ವೆ ಮೇಲ್ಸೇತುವೆ  ಕುರಿತು ಮಾಹಿತಿ ನೀಡಿದರು, ಸುನೀಲ್ ಬೋಸ್,ದರ್ಶನ್ ಧ್ರುವನಾರಾಯಣ ಇದ್ದಾರೆ.
ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಗುರುವಾರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ  ನಗರದಲ್ಲಿ  ನಿರ್ಮಾಣಗೊಳ್ಳಲಿರುವ ರೈಲ್ವೆ ಮೇಲ್ಸೇತುವೆ  ಕುರಿತು ಮಾಹಿತಿ ನೀಡಿದರು, ಸುನೀಲ್ ಬೋಸ್,ದರ್ಶನ್ ಧ್ರುವನಾರಾಯಣ ಇದ್ದಾರೆ.   

ನಂಜನಗೂಡು: ‘ನಗರದ ರಾಷ್ಟ್ರಪತಿ ರಸ್ತೆಯ ಭಾರ್ಗವಿ ಚಿತ್ರಮಂದಿರದ ಬಳಿಯ ರೈಲ್ವೆ ಲೆವಲ್ ಕ್ರಾಸಿಂಗ್ ಬದಲಾಗಿ, ಇನ್ನು ಎರಡು ತಿಂಗಳಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾಗಲಿದೆ. 2026 ರಲ್ಲಿ ಪೂರ್ಣಗೊಂಡು ಸೇವೆಗೆ ಸಿದ್ದವಾಗಲಿದೆ’ ಎಂದು  ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಗುರುವಾರ ಬೆಳಿಗ್ಗೆ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮೇಲ್ಸೇತುವೆ ವಿಚಾರವಾಗಿ ಜನರ ಅಹವಾಲು ಕೇಳಿದ್ದೇನೆ. ಮೊದಲಿನ ನಕ್ಷೆಯಂತೆ ನೇರವಾಗಿ ರಾಷ್ಟ್ರಪತಿ ರಸ್ತೆಯ 4ನೇ ತಿರುವಿನಿಂದ ಆರಂಭಗೊಂಡು, ಬ್ರಾಹ್ಮಣ ಸಂಘದ ಕಚೇರಿ ಮುಂಭಾಗ ಮುಕ್ತಾಯಗೊಳ್ಳಲಿದೆ. ನಗರದ ಜನತೆಯ ಹಲವಾರು ವರ್ಷದ ಬೇಡಿಕೆ ಈಡೇರಿದಂತಾಗುತ್ತದೆ’ ಎಂದರು.

ADVERTISEMENT

‘ನಗರದ ಮಹತ್ಮಗಾಂಧಿ ರಸ್ತೆಯಲ್ಲಿ ಈ ಹಿಂದೆ ರೈಲ್ವೆ ಕೆಳಸೇತುವೆ ನಿರ್ಮಿಸಿ ತೊಂದರೆ ಉಂಟಾಗಿರುವ ಬಗ್ಗೆ ಅರಿವಿದೆ. ಶೀಘ್ರವೇ ಅಧಿಕಾರಿಗಳ ತಂಡವನ್ನು  ಕಳುಹಿಸಿ ದುರಸ್ತಿಗೆ ಕ್ರಮ ವಹಿಸಲಾಗುವುದು’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಹಳೇ ನಕ್ಷೆಯಂತೆಯೇ ಯೋಜನೆ ಜಾರಿಗೊಳ್ಳಬೇಕು. ವಾಣಿಜ್ಯ ಕಟ್ಟಡಗಳನ್ನು ಉಳಿಸಿಕೊಳ್ಳಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೊಸ ನಕ್ಷೆಗೆ ಒತ್ತಡ ಹೇರುತ್ತಿವೆ. ಅದನ್ನು ಮಾನ್ಯ ಮಾಡಿದರೆ ಹೋರಾಟ ಎದುರಿಸಬೇಕಾಗುತ್ತದೆ’ ಎಂದರು.

ಸಂಸದ ಸುನೀಲ್ ಬೋಸ್, ಶಾಸಕರಾದ ದರ್ಶನ್ ಧ್ರುವನಾರಾಯಣ, ಟಿ.ಎಸ್. ಶ್ರೀವತ್ಸ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಸದಸ್ಯರಾದ ಗಂಗಾಧರ್, ಕಪಿಲೇಶ್, ಮಹೇಶ್, ಗಾಯಿತ್ರಿ, ಮುಖಂಡರಾದ ಪ್ರತಾಪ್ ಸಿಂಹ, ಬಿ.ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಜನಸಂಗ್ರಾಮ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಶಂಕರಪುರ ಸುರೇಶ್, ಯಶವಂತ್ ಕುಮಾರ್, ಬದನವಾಳು ರಾಮು, ಇಂಧನ್ ಬಾಬು, ಸಿ.ಚಂದ್ರ ಶೇಖರ್, ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ನಂಜನಗೂಡಿನಲ್ಲಿ ಗುರುವಾರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪಾದಯಾತ್ರೆ ನಡೆಸಿದರು
ಉದ್ರಿಕ್ತ ವಾತಾವರಣ
ಸಚಿವರವನ್ನು ಸ್ವಾಗತಿಸಲು ಸಿದ್ಧಗೊಂಡಿದ್ದ ವೇದಿಕೆ ಸಮೀಪ ಮೇಲ್ಸೇತುವೆಯ ಉದ್ದೇಶಿತ ನಕ್ಷೆಯಲ್ಲದೆ ಪ್ರದರ್ಶಿಸಲಾಗಿದ್ದ ಮತ್ತೊಂದು ನಕ್ಷೆಯನ್ನು ತೆಗೆಯುವಂತೆ ಆಗ್ರಹಿಸಿ ಸಾರ್ವಜನಿಕರು ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ವೇಳೆ ಅನಧಿಕೃತ ನಕ್ಷೆಯನ್ನು ಕಿತ್ತು  ಎಸೆದರು. ಕೆಲ ಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.