ನಂಜನಗೂಡು: ‘ಏಕದಳ ಧಾನ್ಯ ಭತ್ತವನ್ನು ಎರಡೂ ಹಂಗಾಮಿನಲ್ಲಿ ಬೆಳೆಯುತ್ತಿರುವುದಿರಂದ ದ್ವಿದಳ ಧಾನ್ಯ ಬೆಳೆಗಳ ಪ್ರಾಮುಖ್ಯತೆ ಕಡಿಮೆಯಾಗಿದೆ. ಮಳೆಯಾಶ್ರಿತ ಹಾಗೂ ಪಂಪ್‌ಸೆಟ್ ಲಭ್ಯತೆ ಇರುವ ಭೂಮಿಗಳಲ್ಲಿ ರೈತರು ದ್ವಿದಳ ಧಾನ್ಯಗಳನ್ನು ಹೆಚ್ಚು ಬೆಳೆಯಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ ಹೇಳಿದರು.
ತಾಲ್ಲೂಕಿನ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ದ್ವಿದಳ ಧಾನ್ಯಗಳ ಕೃಷಿ ತಾಂತ್ರಿಕತೆ ಹಾಗೂ ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಪ್ರೋಟಿನ್ ಅಂಶ ಹೆಚ್ಚಿರುವುದರಿಂದ ರೈತರು ತಮ್ಮ ಆಹಾರದಲ್ಲಿ ಹೆಚ್ಚಾಗಿ ದ್ವಿದಳ ಧಾನ್ಯಗಳನ್ನು ಬಳಸಬೇಕು. ಇಂದಿನ ಕಾಲದಲ್ಲಿ ರೈತರು ಉದ್ಯಮಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ, ಭೂಮಿ ಫಲವತ್ತತೆಯನ್ನು ಹೆಚ್ಚಿಸಿಕೊಂಡು ಉತ್ತಮ ಬೆಳೆ ಬೆಳೆಯುವುದರ ಜೊತೆಗೆ ಮಾರುಕಟ್ಟೆ ಅವಲಂಬನೆಯನ್ನು ತಿಳಿದುಕೊಂಡು ಮಾರಾಟ ಮಾಡಬೇಕು. ಅಲ್ಲದೇ, ತಾವು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು’ ಎಂದು ಹೇಳಿದರು.
ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ‘ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಯೋಜನೆಯು ದೇಶೀಯ ಉತ್ಪಾದನೆ ಹೆಚ್ಚಿಸುವ ಮತ್ತು ಸ್ವಾವಲಂಬನೆಯನ್ನು ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದೆ. ಆರು ವರ್ಷಗಳ ಅವಧಿಯಲ್ಲಿ ₹11,440 ಕೋಟಿ ಆರ್ಥಿಕ ವೆಚ್ಚದಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಚ್.ವಿ.ದಿವ್ಯಾ, ಪ್ರಗತಿಪರ ರೈತ ರತ್ನಶೇಖರ್, ಶಾಂತಮೂರ್ತಿ, ಶೈಲಜಾ, ಡಾ. ವೈ.ಪಿ. ಪ್ರಸಾದ್, ಡಾ. ಜಿ.ಎಂ. ವಿನಯ್, ಶಾಮರಾಜ್, ಬಿಲಿಗೆರೆ ಗ್ರಾ.ಪಂ. ಅಧ್ಯಕ್ಷ ನಂಜುಂಡಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.