ADVERTISEMENT

ನಂಜನಗೂಡು | ರಥಸಪ್ತಮಿ: ಸಾಮೂಹಿಕ ಸೂರ್ಯ ನಮಸ್ಕಾರ

ನಂಜನಗೂಡು: ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 13:14 IST
Last Updated 4 ಫೆಬ್ರುವರಿ 2025, 13:14 IST
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮುಂಭಾಗ ರಥಸಪ್ತಮಿ ಅಂಗವಾಗಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಪಟುಗಳು ಮಂಗಳವಾರ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮುಂಭಾಗ ರಥಸಪ್ತಮಿ ಅಂಗವಾಗಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಪಟುಗಳು ಮಂಗಳವಾರ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು   

ನಂಜನಗೂಡು: ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಯೋಗಪಟುಗಳು ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ ನೀಡಿದರು.

ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ ಮಾರ್ಗದರ್ಶನದಲ್ಲಿ 300ಕ್ಕೂ ಹೆಚ್ಚು ಯೋಗಪಟುಗಳು ಸಮವಸ್ತ್ರ ಧರಿಸಿ 50 ನಿಮಿಷ ಅವಧಿಯಲ್ಲಿ, ಮೂರು ಹಂತದಲ್ಲಿ 108 ಬಾರಿ ಆಸನಗಳನ್ನು ಪ್ರದರ್ಶಿಸುವ ಮೂಲಕ ಸೂರ್ಯ ದೇವನಿಗೆ ನಮನ ಸಲ್ಲಿಸಿದರು.

ಪ್ರಕಾಶ್ ಜಿ. ಉಡಿಗಾಲ ಮಾತನಾಡಿ, ‘ಸೂರ್ಯದೇವ ಋತುಮಾನಕ್ಕೆ ತಕ್ಕಂತೆ ಪಥ ಬದಲಾಯಿಸುವ ದಿನವನ್ನು ಸ್ವಾಗತಿಸುವ ವಿಶೇಷ ದಿನವಾಗಿದೆ. ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ದೇಹ, ಮನಸ್ಸು ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಹಾಗಾಗಿ ನಿತ್ಯ ಸೂರ್ಯ ನಮಸ್ಕಾರ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎನ್.ಆರ್.ಗಣೇಶ್‍ಮೂರ್ತಿ ಮಾತನಾಡಿ, ‘ಸೂರ್ಯ ನಮಸ್ಕಾರ ಮಾಡಲು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಕಳೆದ 17 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಯೋಗ ಫೌಂಡೇಶನ್ ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್, ಹಂಡುವಿನಹಳ್ಳಿ ಎಚ್.ಎಸ್.ರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.