ADVERTISEMENT

ನಾರಾಯಣಗುರು ಪ್ರೇರಣಾ ಶಕ್ತಿ: ಸಚಿವ ಮಹದೇವಪ್ಪ

ಜಯಂತಿ ಆಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವ ಮಹದೇವಪ್ಪ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:42 IST
Last Updated 14 ಸೆಪ್ಟೆಂಬರ್ 2024, 15:42 IST
ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರಕ್ಕೆ ಸಚಿವ ಎಚ್‌.ಸಿ.ಮಹದೇವಪ್ಪ ಪುಷ್ಪನಮನ ಸಲ್ಲಿಸಿದರು. ರಾಜಶೇಖರ್ ಕದಂಬ, ರೇಣುಕಾನಂದ ಸ್ವಾಮೀಜಿ, ತಿಮ್ಮೇಗೌಡ, ಎಂ.ಕೆ.ಪೋತರಾಜ್, ಡಿ.ತಿಮ್ಮಯ್ಯ ಭಾಗವಹಿಸಿದ್ದರು
ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರಕ್ಕೆ ಸಚಿವ ಎಚ್‌.ಸಿ.ಮಹದೇವಪ್ಪ ಪುಷ್ಪನಮನ ಸಲ್ಲಿಸಿದರು. ರಾಜಶೇಖರ್ ಕದಂಬ, ರೇಣುಕಾನಂದ ಸ್ವಾಮೀಜಿ, ತಿಮ್ಮೇಗೌಡ, ಎಂ.ಕೆ.ಪೋತರಾಜ್, ಡಿ.ತಿಮ್ಮಯ್ಯ ಭಾಗವಹಿಸಿದ್ದರು   

ಮೈಸೂರು: ‘ನಾರಾಯಣಗುರು ಪೂಜ್ಯ ವ್ಯಕ್ತಿಯಾಗದೇ ಪ್ರೇರಣಾ ಶಕ್ತಿಯಾಗಿದ್ದಾರೆ. ಶಿಕ್ಷಣದ ಮೂಲಕ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆದು ಸಮಾನತೆಯ ಜೀವನ ನಡೆಸಲು ಕಾರಣಕರ್ತರಾಗಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಬಣ್ಣಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಅರ್ಯ ಈಡಿಗರ ಸಂಘ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣಾ ಸಮಿತಿ ಸಹಯೋಗದಲ್ಲಿ ಶನಿವಾರ ನಡೆದ ‘ನಾರಾಯಣ ಗುರು ಜಯಂತಿ ಆಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಅವರು ಶೋಷಣೆ ವಿರುದ್ಧ ಹೋರಾಡಿದ್ದರು. ಜಾತಿ ವ್ಯವಸ್ಥೆ, ಕಂದಾಚಾರವನ್ನು ಹೊಡೆದೋಡಿಸಿದ್ದರು. ಸಮಾನತೆಯಿಂದ ಬಾಳುವ ತತ್ವವನ್ನು ಮಾನವ ಸಮಾಜಕ್ಕೆ ನೀಡಿದ್ದ ಅವರು ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕ’ ಎಂದು ಹೇಳಿದರು.

ADVERTISEMENT

‘ತಳಸ್ತರದವರನ್ನು ಹೀನವಾಗಿ ನೋಡುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಜಾತಿಯ ಶ್ರೇಷ್ಠತೆ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದವರ ವಿರುದ್ಧ ಹೋರಾಟ ನಡೆಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದ್ದರು. ಅನಿಷ್ಟ ಪದ್ಧತಿಗಳಿಂದ ಕೂಡಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ್ದರು’ ಎಂದು ತಿಳಿಸಿದರು.

‘ಶಿಕ್ಷಣ ನಮ್ಮ ಪ್ರಗತಿಗೆ ದಾರಿ ಎಂದ ಅವರು ಶಾಲಾ ಕಾಲೇಜು ತೆರೆದರು. ಶೋಷಿತರು ಶಿಕ್ಷಣ ಪಡೆಯುವ ಮೂಲಕ ಸಮಾನತೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ’ ಎಂದರು.

‘ಸಮುದಾಯದ ಮುಖಂಡರು ನೀಡಿರುವ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ನಾರಾಯಣಗುರು ವ್ಯಕ್ತಿಯಲ್ಲ, ಶಕ್ತಿ. ಶೋಷಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಪ್ರತ್ಯೇಕ ದೇವಸ್ಥಾನ ನಿರ್ಮಿಸಿದ್ದರು. ಭಕ್ತರಿಗೆ ಅರ್ಚಕರ ಅವಶ್ಯಕತೆಯಿಲ್ಲ. ಭಗವಂತನನ್ನು ಕಾಣಲು ಭಕ್ತಿಯೊಂದೇ ಮಾರ್ಗ ಎಂದು ಸಾರಿದ್ದರು. ಅಸ್ಪೃಶ್ಯತೆಗೆ ಬೇಸತ್ತು ಕೆಲವರು ಅನ್ಯಧರ್ಮಗಳಿಗೆ ಮತಾಂತರವಾಗುತ್ತಿದ್ದವರನ್ನು ತಡೆದರು. ಹಿಂದೂ ಧರ್ಮ ರಕ್ಷಣೆ ಮಾಡುವ ಮೂಲಕ, ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದರು’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರು ಭಾವಚಿತ್ರವನ್ನು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

2023-2024ನೇ ಸಾಲಿನ ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ 80ರಷ್ಟು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರೇಖಾ ಮನಶಾಂತಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ‌.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾಧ್ಯಕ್ಷ ಎಂ.ಕೆ.ಪೋತರಾಜು, ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಸರೋಜಮ್ಮ ಪಾಪೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ರಾಜಶೇಖರ್‌ ಕದಂಬ, ಶಿವಣ್ಣ, ಎನ್‌.ಧ್ರುವರಾಜ್, ಪಿ.ದೇವರಾಜ್, ಮೋಹನ್‌ ದಾಸ್‌ ಉಪಸ್ಥಿತರಿದ್ದರು.

‘ಆಶಯ ಎಲ್ಲರಿಗೂ ಆದರ್ಶವಾಗಲಿ’

‘ನಾರಾಯಣಗುರು ಅವರು ಸಮಾಜದಲ್ಲಿ ಮೌಢ್ಯ ಕಂದಾಚಾರ ಅಸಮಾನತೆ ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಬದಲಾವಣೆಯ ಹರಿಕಾರರಾಗಿ ಶ್ರಮಿಸಿದ್ದರು. ಅಸ್ಪೃಶ್ಯತೆ ಆಚರಣೆ ತಡೆಯುವ ಕಾರ್ಯ ಮಾಡಿದ್ದರು. ಜಾತಿ ಲಿಂಗ ತಾರತಮ್ಯದ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ಅವರ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಅನುಕರಣೀಯವಾಗಿದ್ದು ಆಶಯ ಎಲ್ಲರಿಗೂ ಆದರ್ಶವಾಗಲಿ’ ಎಂದು ಪೊಲೀಸ್ ಇಲಾಖೆಯ ನಿವೃತ್ತ ಉಪ ಆಯುಕ್ತ ಬಿ.ಕೆ.ಶಿವರಾಮ ಆಶಿಸಿದರು.

ನಾರಾಯಣಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಮೂಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.