ADVERTISEMENT

ಜನಸಾಮಾನ್ಯರಿಗಾಗಿ ಮೋದಿ ಚಿಂತನೆ: ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 15:45 IST
Last Updated 27 ಜುಲೈ 2022, 15:45 IST
ಮೈಸೂರಿನ ಹೋಟೆಲ್ ಸಂದೇಶ್ ದಿ ಪ್ರಿನ್ಸ್‌ನಲ್ಲಿ ‘ನರೇಂದ್ರ ಮೋದಿ ಸಾರ್ಥಕ ಆಡಳಿತ ಹಾಗೂ ಸಾಮರ್ಥ್ಯ’ ಕುರಿತು ಬುಧವಾರ ನಡೆದ ವಿಚಾರಸಂಕಿರಣದಲ್ಲಿ ಶಾಸಕ ಎಸ್.ಸುರೇಶ್‌ಕುಮಾರ್ ಮಾತನಾಡಿದರು. ಓ ಶ್ಯಾಮ್ ಭಟ್, ಮಾ.ವೆಂಕಟರಾಮ್, ಡಾ.ರವೀಂದ್ರನಾಥ್ ಹಾಗೂ ಟಿ.ಎಸ್.ಶ್ರೀವತ್ಸ ಇದ್ದಾರೆ/ ಪ್ರಜಾವಾಣಿ ಚಿತ್ರ
ಮೈಸೂರಿನ ಹೋಟೆಲ್ ಸಂದೇಶ್ ದಿ ಪ್ರಿನ್ಸ್‌ನಲ್ಲಿ ‘ನರೇಂದ್ರ ಮೋದಿ ಸಾರ್ಥಕ ಆಡಳಿತ ಹಾಗೂ ಸಾಮರ್ಥ್ಯ’ ಕುರಿತು ಬುಧವಾರ ನಡೆದ ವಿಚಾರಸಂಕಿರಣದಲ್ಲಿ ಶಾಸಕ ಎಸ್.ಸುರೇಶ್‌ಕುಮಾರ್ ಮಾತನಾಡಿದರು. ಓ ಶ್ಯಾಮ್ ಭಟ್, ಮಾ.ವೆಂಕಟರಾಮ್, ಡಾ.ರವೀಂದ್ರನಾಥ್ ಹಾಗೂ ಟಿ.ಎಸ್.ಶ್ರೀವತ್ಸ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಮಾಡಿರುವ ಚಿಂತನೆಗಳೆಲ್ಲವೂ ಜನಸಾಮಾನ್ಯರಿಗೆ ಸಂಬಂಧಿಸಿದ್ದಾಗಿವೆ. ಅವರ 20 ವರ್ಷಗಳ ಆಡಳಿತ ವೈಖರಿಯು ಇದನ್ನು ಸಾರಿ ಹೇಳುತ್ತಿದೆ’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್‌ ಹೇಳಿದರು.

ನಗರದ ಹೋಟೆಲ್ ಸಂದೇಶ್ ದಿ ಪ್ರಿನ್ಸ್‌ನಲ್ಲಿ ಬುಧವಾರ ನಡೆದ ‘ಮೋದಿ–20’ ಪುಸ್ತಕ ಮತ್ತು ‘ನರೇಂದ್ರ ಮೋದಿ ಸಾರ್ಥಕ ಆಡಳಿತ ಹಾಗೂ ಸಾಮರ್ಥ್ಯ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ರಾಜಕಾರಣಿ ಎಂದರೆ ನಾವು ಯಾರೆಂದು ಭಾವಿಸುತ್ತೇವೆಯೋ ಅದಕ್ಕೆ ಹೊರತಾದ ವಿಭಿನ್ನ ವ್ಯಕ್ತಿತ್ವವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಕೇವಲ ಪ್ರತಿಯಿಸುವುದಲ್ಲದೇ ಅಂತಃಕರಣದಿಂದ ಸ್ಪಂದಿಸುವ ರಾಜಕೀಯವನ್ನು ಅವರು ಮಾಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ’ ಎಂದರು.

ADVERTISEMENT

ಕರೆಗೆ ಎಲ್ಲರೂ ಸ್ಪಂದಿಸಿದರು: ‘ಬಡವರಿಗೆ ಅಡುಗೆ ಅನಿಲ ಸಿಲಿಂಡರ್‌ ನೀಡಿದ್ದು, ಸರ್ಕಾರದ ಯೋಜನೆಗಳಲ್ಲಿ ದೊರೆಯುವ ಹಣ ಸೋರಿಕೆಯಾಗದೇ ಸಾಮಾನ್ಯ ಜನರಿಗೆ ಪೂರ್ಣ ಪ್ರಮಾಣದಲ್ಲಿ ತಲುಪಲೆಂದು ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಮಾಡಿಸಿದ್ದು ಅವರ ಜನಪರವಾದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಕೋವಿಡ್ ವಿರುದ್ಧ ಜನ ಜಾಗೃತಿಯೇ ಇಲ್ಲದಂತಹ ಸಂದರ್ಭದಲ್ಲಿ ಎಲ್ಲರ ಗಮನವನ್ನೂ ಸೆಳೆದು ರೋಗದ ವಿರುದ್ಧ ಒಕ್ಕೊರಲಿನ ಮನಸ್ಥಿತಿಯಿಂದ ಹೋರಾಡಬೇಕೆಂಬ ಉದ್ದೇಶದಿಂದ ಹಲವು ಕರೆಗಳನ್ನು ನೀಡಿದರು. ಅದಕ್ಕೆ ಎಲ್ಲರೂ ಸ್ಪಂದಿಸಿದರು’ ಎಂದು ತಿಳಿಸಿದರು.

‘ದ್ರೌಪದಿ ಮುರ್ಮು ಅವರಂತಹ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದರು. ಪದ್ಮಶ್ರೀಯಂತಹ ದೊಡ್ಡ ಪ್ರಶಸ್ತಿಗಳು ಯೋಗ್ಯರಿಗೆ, ಅದರಲ್ಲೂ ಎಲೆಮರೆ ಕಾಯಿಗಳಂತಿದ್ದವರಿಗೆ ದೊರೆಯುವಂತೆ ಮಾಡಿದರು. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಆ ದೇಶದಲ್ಲಿದ್ದ ಭಾರತೀಯರನ್ನು ಕರೆ ತರಲು ತೋರಿದ ಕಾಳಜಿ ಸೇರಿದಂತೆ ಅವರು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಸಾಮಾನ್ಯ ಜನರ ನೋವಿಗೆ ಸ್ಪಂದಿಸುವಂತವಾಗಿವೆ’ ಎಂದರು.

‘ಮಾದರಿ ವ್ಯಕ್ತಿತ್ವ ಹೊಂದಿದ ಮೋದಿ ಅವರ ಕುರಿತು ಕ್ರೀಡೆ, ಉದ್ಯಮ, ವೈದ್ಯಕೀಯ ಕ್ಷೇತ್ರದ ನಿಪುಣರು, ಆಡಳಿತಗಾರರು, ಸಾಹಿತಿಗಳು ಸೇರಿದಂತೆ 21 ಮಂದಿ ಸೇರಿ ರಚಿಸಿರುವ ಮೋದಿ-20 ಕೃತಿಯು ಉದಯೋನ್ಮುಖ ರಾಜಕಾರಣಿಗಳಿಗೆ ಮಾರ್ಗದರ್ಶಕ ಗ್ರಂಥವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಈ ಪುಸ್ತಕದ ಪರಿಚಯ ಕಾರ್ಯಕ್ರಮ ಆಯೋಜಿಸಬೇಕು. ಅಲ್ಲದೇ, ಅವರ ಆಡಳಿತದ ಕುರಿತು ಚರ್ಚೆಯಾಗಬೇಕು’ ಎಂದು ಆಶಿಸಿದರು.

ವಕೀಲ ಓ ಶ್ಯಾಮ್‌ಭಟ್, ಸಮಾಜ ಸೇವಕ ಮ. ವೆಂಕಟರಾಮ್, ಮೂಳೆ ರೋಗ ತಜ್ಞ ಡಾ.ರವೀಂದ್ರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.