ADVERTISEMENT

ಮುಡಾ ಆಯುಕ್ತರಾಗಿ ಮತ್ತೆ ಡಾ.ಡಿ.ಬಿ.ನಟೇಶ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 15:44 IST
Last Updated 21 ಜೂನ್ 2021, 15:44 IST
ಡಿ.ಬಿ.ನಟೇಶ್‌
ಡಿ.ಬಿ.ನಟೇಶ್‌   

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಾ.ಡಿ.ಬಿ.ನಟೇಶ್‌ ಅವರನ್ನು ಶನಿವಾರ ಎತ್ತಂಗಡಿ ಮಾಡಿದ್ದ ರಾಜ್ಯ ಸರ್ಕಾರ, ಸೋಮವಾರ ಮತ್ತದೇ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಒಂದು ದಿನದ ಅವಧಿಯಲ್ಲೇ ಎತ್ತಂಗಡಿ ಆದೇಶ ರದ್ದಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಆಯಾಮದ ಚರ್ಚೆಗೆ ಗ್ರಾಸವೊದಗಿಸಿದೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾದಿಂದ ₹ 422 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಅನುಮೋದನೆ ಸಿಕ್ಕ ಬೆನ್ನಿಗೆ, ನಟೇಶ್‌ ಎತ್ತಂಗಡಿ ಆದೇಶ ರದ್ದಾಗಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ADVERTISEMENT

‘ಸರ್ಕಾರಿ ನಿಯಮಾವಳಿಯ ಪ್ರಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಯನ್ನೇ ನೇಮಿಸಬೇಕು. ಈ ಹಿಂದಿನ ಬಾರಿ ನಟೇಶ್‌ ಅವರನ್ನು ಆಯುಕ್ತರನ್ನಾಗಿ ನೇಮಿಸುವಾಗಲೇ ಈ ಹುದ್ದೆಯ ಶ್ರೇಣಿಯನ್ನೇ ಕೆಳಗಿಳಿಸಿ; ಕಿರಿಯ ಕೆಎಎಸ್‌ ಅಧಿಕಾರಿಯ ಶ್ರೇಣಿಗೆ ನಿಗದಿಗೊಳಿಸಿ ವರ್ಗಾವಣೆ ಮಾಡಲಾಗಿತ್ತು’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕುರುಬಾರಹಳ್ಳಿ ಸರ್ವೆ ನಂಬರ್‌ ನಾಲ್ಕರ ಭೂ ತಕರಾರಿಗೆ ಸಂಬಂಧಿಸಿದಂತೆ, ಮುಡಾ ಆಯುಕ್ತರಾಗಿದ್ದ ಡಾ.ಡಿ.ಬಿ.ನಟೇಶ್‌ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆಯಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಾಧಿಕಾರದ ವಿರುದ್ಧವೇ ಪ್ರಕರಣ ನಡೆಸಲು ವಕೀಲರ ಶುಲ್ಕವಾಗಿ ₹ 24.05 ಲಕ್ಷ ಪಾವತಿಸಿದ್ದರು. ಇದಕ್ಕೆ ಎಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದಲೇ ಎತ್ತಂಗಡಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಇದೀಗ ಒಂದು ದಿನದ ಅಂತರದಲ್ಲಿ, ಹಿಂದಿನ ಆದೇಶ ರದ್ದುಗೊಳಿಸಿ ಮುಡಾ ಆಯುಕ್ತರನ್ನಾಗಿ ಮತ್ತೆ ನಟೇಶ್‌ ಅವರನ್ನೇ ರಾಜ್ಯ ಸರ್ಕಾರ ನೇಮಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ವ್ಯಕ್ತವಾಗಿದೆ. ಲಾಬಿಗೆ ಸರ್ಕಾರ ಮಣಿದಿದೆ ಎಂಬ ಆರೋಪವೂ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.